ಲಂಡನ್​ನಲ್ಲಿ ಭಾರತವನ್ನು ಟೀಕಿಸಿದವರ ಬಗ್ಗೆ ಎಚ್ಚರಿಕೆಯಿಂದಿರಿ: ಪ್ರಧಾನಿ ನರೇಂದ್ರ ಮೋದಿ

Update: 2023-03-12 17:48 GMT

ಧಾರವಾಡ, ಮಾ.12: ''ಲಂಡನ್‍ನಲ್ಲಿ ಬಸವಣ್ಣನವರ ಪ್ರತಿಮೆಯನ್ನು ಉದ್ಘಾಟಿಸಿದ್ದೇವೆ. ಆದರೆ, ಇವತ್ತು ಲಂಡನ್‍ನಲ್ಲಿಯೇ ಭಾರತದ ಪ್ರಜಾಪ್ರಭುತ್ವವನ್ನು ಪ್ರಶ್ನಿಸಿರುವುದು ದುರದೃಷ್ಟಕರ'' ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಟೀಕಾಪ್ರಹಾರ ನಡೆಸಿದ್ದಾರೆ. 

ರವಿವಾರ ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹವರು ಬಸವಣ್ಣ, ಕರ್ನಾಟಕ ಹಾಗೂ ದೇಶದ ಜನತೆಗೆ ಅವಮಾನ ಮಾಡುತ್ತಿದ್ದಾರೆ. ಇಂತಹವರಿಂದ ಕರ್ನಾಟಕದ ಜನತೆ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು.  

‘ಕರ್ನಾಟಕ ರಾಜ್ಯವು ಹೈಟೆಕ್ ಇಂಡಿಯಾದ ಎಂಜಿನ್. ಈ ಹೈಟೆಕ್ ಎಂಜಿನ್‍ಗೆ ಶಕ್ತಿ ತುಂಬಲು ಡಬಲ್ ಇಂಜಿನ್ ಸರಕಾರದ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಕರ್ನಾಟಕದ ಈ ಡಬಲ್ ಇಂಜಿನ್ ಸರಕಾರವು ರಾಜ್ಯದ ಪ್ರತಿ ಜಿಲ್ಲೆ, ಗ್ರಾಮ ಮತ್ತು ಹಳ್ಳಿಗಳ ಸಂಪೂರ್ಣ ಅಭಿವೃದ್ಧಿಗಾಗಿ ಅತ್ಯಂತ ಪ್ರಾಮಾಣಿಕತೆಯಿಂದ ಶ್ರಮಿಸುತ್ತಿದೆ. ಇಂದು ಉದ್ಘಾಟನೆಗೊಂಡಿರುವ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್‍ವೇ ಕರ್ನಾಟಕದ ಸಾಫ್ಟ್‍ವೇರ್ ಹಬ್ ಎಂಬ ಗುರುತನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ದಾರಿ ಮಾಡಿಕೊಡಲಿದೆ ಎಂದು ಹೇಳಿದರು.

ಅದೇ ರೀತಿ, ಬೆಳಗಾವಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶಿವಮೊಗ್ಗದಲ್ಲಿ ಕುವೆಂಪು ವಿಮಾನ ನಿಲ್ದಾಣವನ್ನೂ ಲೋಕಾರ್ಪಣೆ ಮಾಡಲಾಗಿದೆ. ಇಂದಿನ ಯೋಜನೆಗಳ ಜೊತೆಗೆ ಲೋಕಾರ್ಪಣೆಗೊಂಡಿರುವ ಯೋಜನೆಗಳು ಕರ್ನಾಟಕದ ಹೊಸ ಅಭಿವೃದ್ಧಿಯ ಕಥೆಯನ್ನು ಬರೆಯುತ್ತಿವೆ ಎಂದು ಪ್ರಧಾನಿ ತಿಳಿಸಿದರು.

ಧಾರವಾಡದಲ್ಲಿರುವ ಐಐಟಿಯ ಹೊಸ ಕ್ಯಾಂಪಸ್ ಯುವ ಮನಸ್ಸುಗಳನ್ನು ಪೋಷಿಸುವ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಸುಗಮಗೊಳಿಸುತ್ತದೆ. ಈ ಕ್ಯಾಂಪಸ್ ಕರ್ನಾಟಕದ ಅಭಿವೃದ್ಧಿ ಪಯಣದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತದೆ. ಇಲ್ಲಿ ಕಲ್ಪಿಸಲಾಗಿರುವ ಹೈಟೆಕ್ ಸೌಲಭ್ಯಗಳು ಈ ಸಂಸ್ಥೆಯನ್ನು ವಿಶ್ವದ ಪ್ರಮುಖ ಸಂಸ್ಥೆಗಳ ಸಾಲಿನಲ್ಲಿ ಸೇರುವಂತೆ ಮಾಡಿದೆ ಎಂದು ನರೇಂದ್ರ ಮೋದಿ ಹೇಳಿದರು.

2019ರ ಫೆಬ್ರವರಿಯಲ್ಲಿ ಈ ಕ್ಯಾಂಪಸ್ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಿದೆ. ‘ಅಡಿಗಲ್ಲು ಹಾಕುವುದರಿಂದ ಹಿಡಿದು ಯೋಜನೆಗಳ ಉದ್ಘಾಟನೆಯವರೆಗೆ, ಡಬಲ್ ಇಂಜಿನ್ ಸರಕಾರವು ನಿರಂತರ ವೇಗದಲ್ಲಿ ಕಾರ್ಯನಿರ್ವಹಿಸಿದೆ, ನಾವೆ ಅಡಿಪಾಯ ಹಾಕಿದ ಯೋಜನೆಗಳನ್ನು ನಾವೆ ಉದ್ಘಾಟಿಸುತ್ತಿದ್ದೇವೆ ಎಂದು ಅವರು ಹೇಳಿದರು.

9 ವರ್ಷಗಳಲ್ಲಿ ಭಾರತದಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ, ಏಮ್ಸ್‍ಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ, 9 ವರ್ಷಗಳಲ್ಲಿ 250 ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ. ಹೊಸ ಐಐಎಂ ಮತ್ತು ಐಐಟಿಗಳು ಬಂದಿವೆ ಎಂದು ನರೇಂದ್ರ ಮೋದಿ ಹೇಳಿದರು.

ಹುಬ್ಬಳ್ಳಿ-ಧಾರವಾಡವನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರಿಸಿ ಇಂದು ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ. ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸ್ಮಾರ್ಟ್ ಆಡಳಿತವು ಹುಬ್ಬಳ್ಳಿ-ಧಾರವಾಡ ಪ್ರದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಬೆಂಗಳೂರು, ಮೈಸೂರು ಮತ್ತು ಕಲಬುರ್ಗಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮತ್ತೊಂದು ಶಾಖೆಯನ್ನು ಸ್ಥಾಪಿಸಲು ಇಂದು ಹುಬ್ಬಳ್ಳಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಅವರು ತಿಳಿಸಿದರು.

ಧಾರವಾಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಜಲ ಜೀವನ್ ಮಿಷನ್ ಅಡಿಯಲ್ಲಿ 1 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ. ರೇಣುಕಾ ಸಾಗರ ಜಲಾಶಯ ಮತ್ತು ಮಲಪ್ರಭಾ ನದಿಯಿಂದ 1.25 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿಗಳ ಮೂಲಕ ನೀರು ತರಲಾಗುವುದು ಎಂದು ಪ್ರಧಾನಿ ಹೇಳಿದರು.

ತುಪ್ಪರಿಹಳ್ಳ ಪ್ರವಾಹ ಹಾನಿ ನಿಯಂತ್ರಣ ಯೋಜನೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಈ ಪ್ರದೇಶದಲ್ಲಿ ಪ್ರವಾಹದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಈ ಯೋಜನೆ ಸಹಕಾರಿ. ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣವು ವಿಶ್ವದ ಅತಿದೊಡ್ಡ ಪ್ಲಾಟ್‍ಫಾರ್ಮ್ ಹೊಂದಿದ್ದು, ಸಂಪರ್ಕದ ವಿಷಯದಲ್ಲಿ ಕರ್ನಾಟಕ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು. 

ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿಭಾಗದ ವಿದ್ಯುದ್ದೀಕರಣ ಮತ್ತು ಹೊಸಪೇಟೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ. ಈ ಮಾರ್ಗದ ಮೂಲಕ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳಿಗೆ ಕಲ್ಲಿದ್ದಲನ್ನು ಸಾಗಿಸಲಾಗುತ್ತದೆ ಮತ್ತು ಈ ಮಾರ್ಗದ ವಿದ್ಯುದ್ದೀಕರಣದ ನಂತರ, ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾದಂತೆ ಪರಿಸರ ರಕ್ಷಣೆಯು ಆಗುತ್ತದೆ ಎಂದು ಮೋದಿ ಹೇಳಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದಾಗಿ ಹಳ್ಳಿಗಳಲ್ಲಿನ ರಸ್ತೆಗಳ ಜಾಲವು ದ್ವಿಗುಣಗೊಂಡಿದೆ ಮತ್ತು ರಾಷ್ಟ್ರೀಯ ಹೆದ್ದಾರಿ ಜಾಲವು ಶೇ.55 ಕ್ಕಿಂತ ಹೆಚ್ಚಾಗಿದೆ. 9 ವರ್ಷಗಳಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತವು ಇಂದು ಅತ್ಯಂತ ಶಕ್ತಿಶಾಲಿ ಡಿಜಿಟಲ್ ಆರ್ಥಿಕತೆಯಾಗಿದೆ. ಸರಕಾರ ಅಗ್ಗದ ಇಂಟರ್‍ನೆಟ್ ಲಭ್ಯವಾಗುವಂತೆ ಮಾಡಿ ಹಳ್ಳಿಗಳಿಗೆ ಇಂಟರ್‍ನೆಟ್ ಸಂಪರ್ಕ ಕಲ್ಪಿಸಿದ್ದರಿಂದ ಇದು ಸಾಧ್ಯವಾಯಿತು. ಕಳೆದ 9 ವರ್ಷಗಳಲ್ಲಿ ಪ್ರತಿದಿನ ಸರಾಸರಿ 2.5 ಲಕ್ಷ ಬ್ರಾಡ್‍ಬ್ಯಾಂಡ್ ಸಂಪರ್ಕಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಬಿ.ಎ.ಬಸವರಾಜ, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಇನ್ನಿತರ ಸಚಿವರರು ಉಪಸ್ಥಿತರಿದ್ದರು.

Similar News