ನದಿಯಲ್ಲಿ ಈಜುವ ಮೀನನ್ನು ಬಂಧಿಸಿದ ಹಾಗೆ ನನ್ನನ್ನು ಬಲೆಯಲ್ಲಿ ಬಂಧಿಸಿದ್ದರು: ಜನಾರ್ದನ ರೆಡ್ಡಿ

''ಬದುಕಿದರೆ ಮಾಜಿ ಸಿಎಂ ವೈಎಸ್ ಆರ್, ಜಯಲಲಿತಾ ಹಾಗೆ ಬದುಕಬೇಕು''

Update: 2023-03-13 02:29 GMT

ಚಿಕ್ಕಬಳ್ಳಾಪುರ: ''ಈ ಹಿಂದೆ ನಾನು ಬೇರೆ ರಾಜಕೀಯ ಪಕ್ಷ ನಂಬಿ ಮೋಸ ಹೋದೆ. ರಾಜಕೀಯ ಅಂದರೆ ಮೋಸ, ಸುಳ್ಳು, ವಂಚನೆ. ನದಿಯಲ್ಲಿ ಈಜುವ ಮೀನನನ್ನು ಬಂಧಿಸಿದ ಹಾಗೆ ನನ್ನನ್ನು ಬಲೆಯಲ್ಲಿ ಬಂಧಿಸಿಟ್ಟಿದ್ದರು'' ಎಂದು ಮಾಜಿ ಸಚಿವ, ಕೆಆರ್​ಪಿಪಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿದ್ದಾರೆ. 

ಬಾಗೇಪಳ್ಳಿ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ ಜನಾರ್ದನ ರೆಡ್ಡಿ, ಅಂಬೇಡ್ಕರ್ ಹಾಗೂ ವಾಲ್ಮೀಕಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ನಗರದ ಹೊರವಲಯದ ಕೆಎಸ್‍ಆರ್‌ಟಿಸಿ ಬಸ್ ಡಿಪೋ ರಸ್ತೆಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡರು. 

ಸಮಾವೇಶದಲ್ಲಿ ಮಾತನಾಡಿದ ಅವರು, ''ಬದುಕಿದರೆ ವೈ ಎಸ್. ರಾಜಶೇಖರ ರೆಡ್ಡಿ, ಮಾಜಿ ಸಿಎಂ. ಜಯಲಲಿತಾ ಹಾಗೆ ಬದುಕಬೇಕು. ಅವರ ರೀತಿಯಲ್ಲಿ ಜನರಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಹಾಗಾಗಿ ನಾನು ಹದಿನೈದು ವರ್ಷಗಳ ಬಳಿಕ ಮತ್ತೆ ರಾಜಕೀಯಕ್ಕೆ ಬಂದಿದ್ದೇನೆ. ಆ ನಿಟ್ಟಿನಲ್ಲಿ ಕಾರ್ಯಗತನಾಗಿದ್ದೇನೆ'' ಎಂದು ​ ತಿಳಿಸಿದರು. 

''ಕಲ್ಯಾಣ ರಾಜ್ಯ ಪ್ರಗತಿ ಪಕ್ಷವೂ ಈ ಬಾರಿ ರಾಜ್ಯದಲ್ಲಿ ಸುಮಾರು 30 ರಿಂದ 40 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ರಾಜ್ಯದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಾಳಿಯೂ ಬೀಸಿದ್ದು, ಜನರಲ್ಲಿ ಅದು ಭರವಸೆ ಮೂಡಿಸುತ್ತಿದೆ'' ಎಂದು ಹೇಳಿದರು. 

Similar News