ಕೃಷ್ಣ ಕೋಟೆಯಲ್ಲಿ ಈ ಸಲವೂ ನಿಶ್ಚಿತವೇ ಕಾಂಗ್ರೆಸ್ ಗೆಲುವು?

Update: 2023-03-13 09:40 GMT

ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಕೃಷ್ಣ ಬೈರೇಗೌಡ ಜಯ ನಿಶ್ಚಿತವೆ? ಬಿಜೆಪಿಗೆ ಈ ಬಾರಿಯೂ ಕಂಟಕವಾಗಲಿದೆಯೆ ಪಕ್ಷದೊಳಗಿನ ಒಡಕು? ಒಕ್ಕಲಿಗರೇ ಹೆಚ್ಚಿರುವ ಕ್ಷೇತ್ರ ತನ್ನದಾಗಿಸಲು ಜೆಡಿಎಸ್ ಯತ್ನವೇನು? ಬಹುಭಾಷಿಕರ ಬ್ಯಾಟರಾಯನಪುರದಲ್ಲಿ ನಿಜವಾಗಿಯೂ ಯಾರ ಆಟ?

ನಗರ, ಗ್ರಾಮಾಂತರ ಪ್ರದೇಶಗಳನ್ನೊಳಗೊಂಡ ಮತ್ತು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವಾದ ಬಳಿಕ ಬಹುಭಾಷಿಕರು, ಬಹು ಸಂಸ್ಕೃತಿಯ ಜನರ ನೆಲೆಯೂ ಆಗಿರುವ ಬ್ಯಾಟರಾಯನಪುರ ಒಂದು ರೀತಿಯಲ್ಲಿ ತನ್ನದೇ ಆದ ವಿಶಿಷ್ಟತೆಯುಳ್ಳ ಕ್ಷೇತ್ರ. ಪುನರ್‌ವಿಂಗಡಣೆ ಬಳಿಕ ಚುನಾವಣೆಯಾಗುತ್ತಿರುವುದು ಇದು 4ನೇ ಬಾರಿ. ದೇವನಹಳ್ಳಿ, ಯಲಹಂಕ ಮತ್ತು ಕೆ.ಆರ್.ಪುರ ಕ್ಷೇತ್ರಗಳ ಪ್ರದೇಶಗಳು ಈ ಕ್ಷೇತ್ರದಲ್ಲಿ ಸೇರಿವೆ. 7 ಬಿಬಿಎಂಪಿ ವಾರ್ಡಗಳು ಮತ್ತು 5 ಗ್ರಾಮ ಪಂಚಾಯತ್‌ಗಳಿವೆ. ಸ್ಥಳೀಯರಷ್ಟೇ ವಲಸಿಗರೂ ಇದ್ದಾರೆ. ಎಲ್ಲ ಜಾತಿ-ಜನಾಂಗದವರಿರುವ ಇಲ್ಲಿ ಒಕ್ಕಲಿಗ, ಎಸ್ಸಿ, ಎಸ್ಟಿ ಮತ್ತು ಮುಸ್ಲಿಮ್ ಸಮುದಾ ಯದವರೇ ನಿರ್ಣಾಯಕ.

ಕೃಷ್ಣ ಕೋಟೆ

2008ರಿಂದಲೂ ಬ್ಯಾಟರಾಯನಪುರ ಕಾಂಗ್ರೆಸ್ ಹಿಡಿತ ದಲ್ಲಿದೆ. 2003ರಲ್ಲಿ ತಂದೆಯ ನಿಧನದ ಬಳಿಕ ಕೋಲಾರ ಜಿಲ್ಲೆಯ ವೇಮಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ ಕೃಷ್ಣ ಬೈರೇಗೌಡ, 2004
ರಲ್ಲಿ ಅದೇ ಕ್ಷೇತ್ರದಿಂದ ಪುನರಾಯ್ಕೆಗೊಂಡರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ವೇಮಗಲ್ ಕ್ಷೇತ್ರವೇ ಅಸ್ತಿತ್ವ ಕಳೆದುಕೊಂಡಿತು. ಆಗ 2008ರ ವಿಧಾನಸಭೆ ಚುನಾವಣೆಗೆ ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರವನ್ನು ಕೃಷ್ಣ ಬೈರೇಗೌಡ ಆಯ್ಕೆ ಮಾಡಿಕೊಂಡರು. 2008, 2013 ಮತ್ತು 2018ರ ಚುನಾವಣೆಯಲ್ಲಿ ಸತತವಾಗಿ ಈ ಕ್ಷೇತ್ರ ದಿಂದ ಕೃಷ್ಣ ಬೈರೇಗೌಡ ಆಯ್ಕೆಯಾಗುತ್ತಿದ್ದಾರೆ.

ಹ್ಯಾಟ್ರಿಕ್ ಜಯದ ಮೂಲಕ ಕ್ಷೇತ್ರದ ಮೇಲೊಂದು ಹಿಡಿತವುಳ್ಳವರಾಗಿರುವ ಕೃಷ್ಣ ಬೈರೇಗೌಡ ಬಗ್ಗೆ ಕ್ಷೇತ್ರದ ಜನರಲ್ಲಿಯೂ ವಿಶ್ವಾಸವಿದೆ. ಕ್ಷೇತ್ರದಲ್ಲಿ ಅವರು ಮಾಡಿರುವ ಕೆಲಸಗಳ ಬಗ್ಗೆಯೂ ಜನರಿಗೆ ಮೆಚ್ಚುಗೆಯಿದೆ. ಕೃಷ್ಣ ಬೈರೇಗೌಡರೂ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನೇ ತಮ್ಮ ಮುಂದಿನ ಗೆಲುವಿಗಿರುವ ಹಾದಿ ಎಂಬ ವಿಶ್ವಾಸದಲ್ಲಿದ್ದಾರೆ.

ಬಿಜೆಪಿ ಕಸರತ್ತು

ಈ ಬಾರಿಯಾದರೂ ಗೆಲ್ಲಬೇಕು ಎಂಬುದು ಬಿಜೆಪಿ ಹಠ. ಇಲ್ಲಿ ಗೆಲ್ಲುವುದಕ್ಕೆ ಸತತವಾಗಿ ಪ್ರಯತ್ನಿಸುತ್ತಲೇ ಬಂದಿದೆ ಅದು. ಕಳೆದ ಮೂರೂ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಕೃಷ್ಣ ಬೈರೇಗೌಡ ವಿರುದ್ಧ ಸೋತಿರು ವವರು ಎ.ರವಿ. ಅವರಿಗೆ ಪಕ್ಷದವರೇ ಕಂಟಕವಾಗಿದ್ದಾರೆ ಎಂಬ ಮಾತುಗಳೂ ಕ್ಷೇತ್ರದಲ್ಲಿವೆ. ಬಿಜೆಪಿಯೊಳಗಿನ ನಾಯಕತ್ವದ ಗೊಂದಲವೇ ಕಾಂಗ್ರೆಸ್‌ಗೆ ವರದಾನವಾ ಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೂ ರವಿಯವರೇ ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚು. ಮೂರು ವರ್ಷಗಳಿಂದ ಬೆಂಗಳೂರು ವಿಮಾನನಿಲ್ದಾಣ ಪ್ರದೇಶಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎ.ರವಿ, ಕಂದಾಯ ಸಚಿವ ಆರ್.ಅಶೋಕ್ ಅವರ ಸೋದರ ಸಂಬಂಧಿಯೂ ಹೌದು.

ಮತ್ತೊಂದೆಡೆ, ಬಿಜೆಪಿ ಟಿಕೆಟ್‌ಗಾಗಿ ಜಕ್ಕೂರು ವಾರ್ಡ್  ಕಾರ್ಪೊರೇಟರ್ ಆಗಿದ್ದ ಮುನೀಂದ್ರ ಕುಮಾರ್ ಮಾತ್ರವಲ್ಲದೆ, ತಮ್ಮೇಶ್ ಗೌಡ, ಎನ್.ಚಕ್ರಪಾಣಿ ಕೂಡ ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಜೆಡಿಎಸ್ ಪ್ಲಾನ್

ಒಕ್ಕಲಿಗ ಸಮುದಾಯದ ಮತಗಳಿರುವ ಕಾರಣಕ್ಕೆ ಜೆಡಿಎಸ್ ಕೂಡ ಈ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸುವ ಯತ್ನದಲ್ಲಿದೆ. ಕಾಂಗ್ರೆಸ್, ಬಿಜೆಪಿ ಪೈಪೋಟಿಯ ನಡುವೆಯೇ ತನ್ನ ಬಲ ಹೆಚ್ಚಿಸಿಕೊಳ್ಳುವ ಪ್ಲಾನ್ ಜೆಡಿಎಸ್‌ನದ್ದು. ಈಗಾಗಲೇ ಸ್ಥಳೀಯ ಮುಖಂಡ ವೇಣುಗೋಪಾಲ್ ಅವರಿಗೆ ಜೆಡಿಎಸ್ ಟಿಕೆಟ್ ಘೋಷಿಸಿದೆ.

ಒಕ್ಕಲಿಗರು ಕ್ಷೇತ್ರದ ಬಹುಸಂಖ್ಯಾತ ಮತದಾರರಾ ದರೂ ಕಾರ್ಯಕರ್ತರ ಬಲವಿಲ್ಲದ ಕಾರಣ ಜೆಡಿಎಸ್ ಈವರೆಗೆ ಇಲ್ಲಿ ಪ್ರಾಬಲ್ಯ ತೋರಿಸಲಾಗಿಲ್ಲ ಎಂಬುದು ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಮಾತು. ಇದನ್ನು ದಾಟಿ ಗಂಭೀರ ಪ್ರಯತ್ನದಲ್ಲಿ ಅದು ತೊಡಗಿರುವ ಹಾಗೆ ಕಾಣಿಸುತ್ತಿದೆ ಈ ಬಾರಿ.

Full View