ಶಿವಮೊಗ್ಗ | ದೇವಸ್ಥಾನ ಹಾಗೂ ಕೆರೆ ಒತ್ತುವರಿ ಆರೋಪ: ಬಿಜೆಪಿ ಶಾಸಕನ ಅಣಕು ಶವಯಾತ್ರೆ

Update: 2023-03-13 11:34 GMT

ಶಿವಮೊಗ್ಗ, ಮಾ.13: ಗ್ರಾಮಾಂತರ ಬಿಜೆಪಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ದೇವಸ್ಥಾನ ಹಾಗೂ ಕೆರೆ ಒತ್ತುವರಿ ಮಾಡಿಕೊಂಡಿರುವುದನ್ನು ಖಂಡಿಸಿ, ಕತ್ತಲಘಟ್ಟ ಚೌಡೇಶ್ವರಿ ಹಾಗೂ ಭೂತೇಶ್ವರ ಸ್ವಾಮಿ ಹಿಂದೂ ಧಾರ್ಮಿಕ ರಕ್ಷಣಾ ವೇದಿಕೆಯಿಂದ  ಚನ್ನಮುಂಬಾಪುರದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಅಶೋಕ್‌ನಾಯ್ಕ್ ಅವರ ಅಣಕು ಶವಯಾತ್ರೆಯನ್ನು ನಡೆಸಿ ಪ್ರತಿಭಟನೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಬಂದ ವೇದಿಕೆಯ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರು ಅಶೋಕ್‌ನಾಯ್ಕ್ ಪ್ರತಿಕೃತಿಯನ್ನು ಮಹಾವೀರ ಸರ್ಕಲ್‌ನಲ್ಲಿ ದಹಿಸಿ ಅವರ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ಜಗದೀಶ್ ಮಾತನಾಡಿ, ಹಿಂದೂ ಧರ್ಮದ ರಕ್ಷಕರೆಂದು ಮತಪಡೆದು ಚುನಾಯಿತರಾದ ಅಶೋಕ್‌ನಾಯ್ಕ್ ಅವರು ತನ್ನ ಅಕ್ಷರ ವಿದ್ಯಾಸಂಸ್ಥೆಗೆ ಸರ್ವೇ ನಂ.9ರಲ್ಲಿ 1 ಎಕರೆ 20 ಗುಂಟೆ ಜಾಗವನ್ನು ಕಬಳಿಸಿದ್ದಲ್ಲದೆ ಸ್ಥಳದಲ್ಲಿದ್ದ ಹಿಂದೂ ಧರ್ಮದ ಮಾರಮ್ಮ, ಚೌಡಮ್ಮ ಮತ್ತು ಭೂತಪ್ಪನ ಕಲ್ಲುಗಳನ್ನು ಕಿತ್ತು ಬಿಸಾಕಿದ್ದಾರೆ. ಪರಿಶಿಷ್ಟರ ನಿಧಿಯಿಂದ ಕೆರೆ ಅಭಿವೃದ್ಧಿಗೆ ಹಣ ಮಂಜೂರು ಮಾಡಿಸಿ ಬಫರ್‌ಜೋನ್‌ನಲ್ಲಿ ಕಾಮಗಾರಿ ನಡೆಸಿದ್ದಾರೆ. ಅವರಿಗೆ ಏನಾದರೂ ನಿಜವಾಗಿ ಹಿಂದೂ ಧರ್ಮದ ಮೇಲೆ ಭಯ,ಭಕ್ತಿ ಇದ್ದರೆ ಕೂಡಲೆ ಗ್ರಾಮಾಂತರ ಜನತೆಯ ಕ್ಷಮೆ ಕೇಳಬೇಕು. ಹಾಗೂ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡು ಸ್ಥಳದಲ್ಲೇ ದೇವಸ್ಥಾನ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಶಿವಮೊಗ್ಗ ಗ್ರಾಮಾಂತರದ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಇನ್ನೊರ್ವ ಮುಖಂಡ ಗಿರೀಶ್ ಮಾತನಾಡಿ, ಚೌಡೇಶ್ವರಿ ಮತ್ತು ಭೂತೇಶ್ವರ ದೇವಸ್ಥಾನವನ್ನು ನಾಶ ಮಾಡಿ ಕೆರೆಯನ್ನು ಸಂಪೂರ್ಣ ಕಬಳಿಸುವ ಹುನ್ನಾರ ನಡೆಸಿದ್ದು, ಇದನ್ನು ಪ್ರಶ್ನಿಸಿದ ಗ್ರಾಮಸ್ಥರು, ಭಕ್ತಾದಿಗಳಿಗೆ ಹಾಗೂ ಅರ್ಚಕರಿಗೆ ಶಾಸಕ ಅಶೋಕ್ ನಾಯ್ಕ ಹಾಗೂ ಅವರ ಚೇಲಾಗಳು ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗೂಂಡಾಗಳಂತೆ ವರ್ತಿಸಿ ಅರ್ಚಕರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.

ವಕೀಲ ಗೇಮು ನಾಯ್ಕ ಮಾತನಾಡಿ, ಬಿಜೆಪಿ ಪಕ್ಷವು ಹಿಂದೂ ಧರ್ಮ ಹಾಗೂ ಧಾರ್ಮಿಕತೆಯನ್ನು ರಕ್ಷಣೆ ಮಾಡುತ್ತೇವೆಂದು ಬೊಗಳೆ ಬಿಡುತ್ತಿದೆ. ಅವರದೇ ಪಕ್ಷದ ಶಾಸಕ ಹಿಂದೂ ಧರ್ಮಕ್ಕೆ ಧಕ್ಕೆ ಉಂಟುಮಾಡುತ್ತಿದ್ದರೂ ಪಕ್ಷದವರು ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ದೇವಸ್ಥಾನ ಧ್ವಂಸಗೊಳಿಸಿದ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದು, ಕೆರೆಯ ಜಾಗ ಒತ್ತುವರಿಯಾಗಿದೆ ಎಂದು ಭಾವನೆ ವ್ಯಕ್ತಪಡಿಸಿದ್ದಾರೆ. ಈವರೆಗೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು, ಧ್ವಂಸ ಮಾಡಿರುವ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಲ್ಲವಿ, ರವಿಕುಮಾರ್, ಮತ್ತಿತರರು ಅಶೋಕ್‌ನಾಯ್ಕ್ ಅವರ ವಿರುದ್ಧ ಅಣಕು ಶವಯಾತ್ರೆಯಲ್ಲಿ ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಜಗದೀಶ್, ಶಶಿಕುಮಾರ್, ರಾಘವೇಂದ್ರ ನಾಯ್ಕ, ಬೂದಿಗೆರೆ ಬಸವರಾಜ್, ಚಂದ್ರಮ್ಮ, ಶಾಂತಮ್ಮ, ಗ್ರಾ.ಪಂ. ಸದಸ್ಯ ಮಂಜು, ಗಿರೀಶ್, ಅರ್ಚಕ ಶೇಖರಪ್ಪ, ಎನ್.ರಮೇಶ್, ದೇವೇಂದ್ರಪ್ಪ, ವಿಜಯ್‌ಕುಮಾರ್, ಚೇತನ್, ಮಧುಸೂದನ್, ವೈ.ಹೆಚ್.ನಾಗರಾಜ್,  ಜೆಡಿಎಸ್‌ನ ಮಹಿಳಾ ಅಧ್ಯಕ್ಷೆ ಗೀತಾ ಸತೀಶ್ ಹಾಗೂ ಚನ್ನಮುಂಬಾಪುರದ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Similar News