ನಗರಸಭೆಯ ಶವ ಸಾಗಣೆ ವಾಹನವನ್ನು ಜನರೇ ತಳ್ಳಿ ಸ್ಮಶಾನಕ್ಕೆ ಒಯ್ಯುತ್ತಿರುವ VIDEO ವೈರಲ್: ಸಿಟಿ ರವಿ ವಿರುದ್ಧ JDS ಕಿಡಿ

Update: 2023-03-13 13:29 GMT

ಚಿಕ್ಕಮಗಳೂರು: ಇಲ್ಲಿನ ನಗರಸಭೆಗೆ ಸೇರಿದ ಶವ ಸಾಗಿಸುವ ವಾಹನವನ್ನು ಮೃತರ ಕುಟುಂಬದವರೇ ತಳ್ಳಿ ಸ್ಮಶಾನಕ್ಕೆ ಒಯ್ಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. 

ಸೋಮವಾರ ನಗರದ ಶಂಕರಪುರ ಬಡಾವಣೆ ನಿವಾಸಿ ರವಿ ಎಂಬವರು ಅನಾರೋಗ್ಯದಿಂದ ಮೃತಪಟ್ಟಿದ್ದು, ಈ ವೇಳೆ ಸಂಬಂಧಿಕರು ನಗರಸಭೆ ವಾಹನಕ್ಕೆ ಕರೆ ಮಾಡಿ ವಾಹನದ ಮೂಲಕ ಶವವನ್ನು ಕ್ರಿಶ್ಚಿಯನ್ ಸಮುದಾಯದ ಮುಕ್ತಿಧಾಮಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ. ಶವವನ್ನು ಶಾಂತಿವಾಹನದ ಮೂಲಕ ಕೊಂಡೊಯ್ಯುತ್ತಿದ್ದ ವೇಳೆ ವಾಹನ ರಸ್ತೆ ಮಧ್ಯೆ ಪದೇ ಪದೇ ಕೆಟ್ಟು ನಿಂತಿದೆ. ವಾಹನದ ಚಾಲಕ ಎಷ್ಟೇ ಪ್ರಯತ್ನಿಸಿದರೂ ವಾಹನ ಮಾತ್ರ ನಿಂತಲ್ಲಿಂದ ಕದಲಲೇ ಇಲ್ಲ. ವಿಧಿ ಇಲ್ಲದೇ ಸಂಬಂಧಿಕರು ವಾಹವನ್ನು ಮುಕ್ತಿಧಾಮದವರೆಗೂ ವಾಹನವನ್ನು ತಳ್ಳಿಕೊಂಡು ಬಂದು ಮೃತ ವ್ಯಕ್ತಿಯ ಶವಸಂಸ್ಕಾರ ನೆರವೇರಿಸಿದ್ದಾರೆ. ಈ ವೇಳೆ ಸಂಬಂಧಿಕರೂ ಸೇರಿದಂತೆ ಸಾರ್ವಜನಿಕರು ನಗರಸಭೆಯ ಶಾಂತಿವಾಹನದ ದುಸ್ಥಿತಿ ಕಂಡು ನಗರಸಭೆ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋವನ್ನು ಹಂಚಿಕೊಂಡಿರುವ ಜೆಡಿಎಸ್ @JanataDal_S, ಸಿಟಿ ರವಿ ಮತ್ತು ನಗರಸಭೆ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದೆ. 

''ಎಂತಹ ಶೋಚನಿಯ ಸ್ಥಿತಿ ಇದು! ಚಿಕ್ಕಮಗಳೂರು ನಗರಸಭೆಯ ವ್ಯಾಪ್ತಿಯಲ್ಲಿನ ಶವ ಸಾಗಣೆ ವಾಹನದ ಅವ್ಯವಸ್ಥೆಯಿಂದ ಇಂತಹ ಹೃದಯ ವಿದ್ರಾವಕ ಘಟನೆ ನಡೆದಿದೆ. ದುಃಖತಪ್ತ ಕುಟುಂಬದವರೇ ಶವವಿರುವ ವಾಹನವನ್ನು ತಳ್ಳಿ ಸ್ಮಶಾನಕ್ಕೆ ಒಯ್ಯುತ್ತಿರುವ ದೃಶ್ಯ ಅಲ್ಲಿನ ಸ್ಥಳೀಯ ಆಡಳಿತಕ್ಕೆ ಹಿಡಿದ ಕನ್ನಡಿ'' ಎಂದು ಜೆಡಿಎಸ್ ಕಿಡಿಕಾರಿದೆ. 

''ಈ‌‌ ಕ್ಷೇತ್ರ ಪ್ರತಿನಿಧಿಸುವ ಬಾಡು ತಿಂದು ದೇವಾಲಯಕ್ಕೆ ಹೋದ ಕುಖ್ಯಾತಿಯ ಸಿಟಿ ರವಿ ಯವರೇ, ಬಿಜೆಪಿಯೇ ಚಿಕ್ಕಮಗಳೂರು ನಗರಸಭೆಯಲ್ಲಿ ಅಧಿಕಾರದಲ್ಲಿದೆ. ಶವ ಸಾಗಿಸುವ ವಾಹನದ ಸಮರ್ಪಕ ವ್ಯವಸ್ಥೆ ಮಾಡಲೂ ಆಗದ ನಿಮಗೆ ಅಧಿಕಾರ ಏಕೆ ಬೇಕು? ಕೋಮು ದ್ವೇಷ ಹರಡಲು ಸಮಯ ಸಿಗದಿರುವಾಗ ಜನಸೇವೆ ಎಲ್ಲಿ ಮುಖ್ಯವಾಗುತ್ತದೆ?'' ಎಂದು ಸಿಟಿರವಿಯನ್ನು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.

Similar News