ನನಗೆ ಇರುವ ನಿಯಮ ಎಲ್ಲರಿಗೂ ಅನ್ವಯಿಸಬೇಕಲ್ಲವೇ?: ಸ್ವಪಕ್ಷದ ವಿರುದ್ಧವೇ ಸಚಿವ ಸೋಮಣ್ಣ ಅಸಮಾಧಾನ

''‘ನಾನು ಸನ್ಯಾಸಿ ಅಲ್ಲ’ ರಾಜಕಾರಣದಲ್ಲಿ ಕವಲುದಾರಿಗಳು ಇರುತ್ತವೆ...''

Update: 2023-03-13 14:23 GMT

ಬೆಂಗಳೂರು, ಮಾ.13: ನಾನು ಸನ್ಯಾಸಿ ಅಲ್ಲ. ರಾಜಕಾರಣದಲ್ಲಿ ಕವಲುದಾರಿಗಳು ಇರುತ್ತವೆ. ನಾನು ಯಾವತ್ತಾದರೂ ನನ್ನ ಮಗನಿಗೆ ಟಿಕೆಟ್ ಕೇಳಿದ್ದೀನಾ? ನನಗೆ ಅಸಮಾಧಾನ ಇದೆ ಎಂದು ಎಲ್ಲಾದರೂ ಹೇಳಿದ್ದೀನಾ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಕಾಶ, ಹಣೆಬರಹ ಇದ್ದರೆ ನನ್ನ ಮಗನಿಗೆ ಟಿಕೆಟ್ ಸಿಗುತ್ತದೆ. ಬೇರೆ ರಾಜಕಾರಣಿಗಳ ಮಕ್ಕಳು ರಾಜಕಾರಣದಲ್ಲಿ ಇರಬಹುದು. ಎಲ್ಲರಿಗೂ ತಮ್ಮ ಮಕ್ಕಳ ಮೇಲೆ ಪ್ರೀತಿ ಇರುತ್ತೆ. ನಾನು ಯಾವತ್ತೂ ನನ್ನ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ ಎಂದರು.

ನನಗೆ ಇರುವ ನಿಯಮ ಎಲ್ಲರಿಗೂ ಅನ್ವಯಿಸಬೇಕಲ್ಲವೇ?, ಬೇರೆ ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್ ಇಲ್ಲ ಅಂದರೆ ನಮಗೂ ಬೇಡ. ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಇಲ್ಲ. ನಾಲ್ಕು ಗೋಡೆಗಳ ಮಧ್ಯೆ ಯಾರಿಗೆ ಏನು ಹೇಳಬೇಕೋ, ಅದನ್ನು ಹೇಳಿದ್ದೇನೆ ಎಂದು ಸೋಮಣ್ಣ ಹೇಳಿದರು.

ಸೋಮಣ್ಣ ಕಾಂಗ್ರೆಸ್‍ಗೆ ಬರುತ್ತಾರೆ ಎಂಬುದು ಕೆಲವರ ಮನಸ್ಸಿನಲ್ಲಿದೆ. ಅದಕ್ಕೆ ಬೇಡ ಎನ್ನಲೆ? ಅವರಿಗೆ ಒಳ್ಳೆಯದಾಗಲಿ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಾವೆಲ್ಲರೂ ಸ್ನೇಹಿತರು. ಒಟ್ಟಿಗೆ ಕೆಲಸ ಮಾಡಿದ್ದೇವೆ. ಮೊದಲು ನಾನು ಕಾಂಗ್ರೆಸ್‍ನಲ್ಲಿದ್ದೆ. ಜನತಾ ಪಕ್ಷ, ಜೆಡಿಎಸ್‍ನಲ್ಲಿಯೂ ಶಾಸಕನಾಗಿದ್ದೆ ಎಂದು ಅವರು ತಿಳಿಸಿದರು.

ನನ್ನನ್ನು ಬೆಂಗಳೂರಿಗೆ ಮಾತ್ರ ಯಾಕೆ ಸೀಮಿತ ಮಾಡುತ್ತೀರಿ. ಪಕ್ಷ ನನಗೆ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಬಸವಕಲ್ಯಾಣ, ಸಿಂಧಗಿ, ಕೊಪ್ಪಳ ಸೇರಿದಂತೆ ಅನೇಕ ಕ್ಷೇತ್ರಗಳ ಉಪ ಚುನಾವಣೆಯ ಜವಾಬ್ದಾರಿ ನಿರ್ವಹಿಸಿದ್ದೇನೆ. ಲೋಕಸಭೆ ಚುನಾವಣೆ ವೇಳೆ ತುಮಕೂರಿನಲ್ಲಿ ಬಿಜೆಪಿ ಗೆಲ್ಲಿಸಿದ್ದೇನೆ ಎಂದು ಸೋಮಣ್ಣ ಹೇಳಿದರು.

Similar News