1754 ಯುವ ಸ್ವಸಹಾಯ ಗುಂಪುಗಳಿಗೆ ತಲಾ 10 ಸಾವಿರ ರೂ.ಸುತ್ತುನಿಧಿ ಬಿಡುಗಡೆ: ಸಚಿವ ಡಾ.ನಾರಾಯಣಗೌಡ

Update: 2023-03-13 14:35 GMT

ಬೆಂಗಳೂರು, ಮಾ.13: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಯೋಜನೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡಲಾಗಿದ್ದು, ಇಂದು ಮೊದಲ ಹಂತದಲ್ಲಿ 1754 ಗುಂಪುಗಳಿಗೆ ತಲಾ 10 ಸಾವಿರ ರೂ.ಸುತ್ತುನಿಧಿ ಬಿಡುಗಡೆ ಮಾಡಲಾಗಿದೆ ಎಂದು ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ನಲ್ಲಿ ಘೋಷಿಸಿದ್ದಂತೆ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳನ್ನು ರಚಿಸಲಾಗುತ್ತಿದ್ದು, ಈಗಾಗಲೇ ಮೊದಲ ಹಂತದಲ್ಲಿ 5956 ಗ್ರಾಮ ಪಂಚಾಯತ್ ಗಳಲ್ಲಿ ಒಂದೊಂದು ಆದ್ಯತಾ ಗುಂಪುಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮೊದಲ ಹಂತದಲ್ಲಿ 1754 ಗುಂಪುಗಳಿಗೆ ತಲಾ 10 ಸಾವಿರ ರೂ.ಸುತ್ತುನಿಧಿ ಬಿಡುಗಡೆ ಮಾಡಲಾಗಿದ್ದು, ಇನ್ನೊಂದು ವಾರದಲ್ಲಿ ನೋಂದಣಿಯಾಗಿರುವ ಎಲ್ಲ ಗುಂಪುಗಳಿಗೆ ಸುತ್ತುನಿಧಿ ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ ಒಂದು ವಾರದೊಳಗೆ ಎರಡನೇ ಹಂತದಲ್ಲಿ ಪ್ರತಿ ಪಂಚಾಯತಿಗೆ ಎರಡರಂತೆ 12 ಸಾವಿರ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಹಕ್ಕು ಬಾಧ್ಯತಾ ಗುಂಪುಗಳ ರಚನಾ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ನಾರಾಯಣಗೌಡ ತಿಳಿಸಿದ್ದಾರೆ. 

ಪ್ರತಿ ಗುಂಪುಗಳಿಗೆ ತಲಾ 10 ಸಾವಿರ ರೂ.ಸುತ್ತುನಿಧಿ, ಯೋಜನಾ ಚಟುವಟಿಕೆಗಳನ್ನು ಕೈಗೊಳ್ಳಲು 5 ಲಕ್ಷ ರೂ.ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಒಂದು ಲಕ್ಷ ರೂ.ಸಬ್ಸಿಡಿ ನೀಡಲಾಗುವುದು. ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಬೆಂಗಳೂರಿನ ವಿಷನ್ ಕರ್ನಾಟಕ ಫೌಂಡೇಷನ್ ಮೂಲಕ 85 ಯೋಜನಾ ವರದಿಗಳನ್ನು ತಯಾರಿಸಿ  https://sysykar.in ಪೋರ್ಟಲ್ ನಲ್ಲಿ ಅಳವಡಿಸಲಾಗಿದ್ದು, ರಚನೆಗೊಂಡಂತಹ ಗುಂಪುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News