ಹಣ ಕೊಟ್ಟು ಜನರನ್ನು ಕರೆಸಿ, ಅದೇ ಜನರಿಂದ ಉಗಿಸಿಕೊಳ್ಳುತ್ತಿರುವ ಬಿಜೆಪಿ: ಸರಣಿ ವಿಡಿಯೋ ಹಂಚಿಕೊಂಡ ಕಾಂಗ್ರೆಸ್

''300 ರೂ. ಕೊಡುತ್ತೇವೆಂದು ಹೇಳಿ 100% ವಂಚನೆ ಮಾಡಿದ್ದು ಸರಿಯೇ ?''

Update: 2023-03-13 15:03 GMT

ಬೆಂಗಳೂರು: 'ಮೋದಿ ಕಾರ್ಯಕ್ರಮಕ್ಕೆ ಬಂದರೆ 300 ಕೊಡುತ್ತೇವೆಂದು ನಂಬಿಸಿ ಬಳಿಕ ಜನರಿಗೆ ಹಣ ಕೊಡದೇ ಬಿಜೆಪಿ ನಾಯಕರು ಮೊಸಮಾಡಿದ್ದಾರೆ' ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತ ವಿಡಿಯೋಗಳನ್ನು ಟ್ವಟಿರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್,  ''300 ರೂಪಾಯಿಯಲ್ಲಿ 40% ಕಮಿಷನ್ ಕಡಿತಗೊಳಿಸಿಯಾದರೂ ಕೊಡಬಹುದಿತ್ತು, ಆದರೆ 100% ವಂಚನೆ ಮಾಡಿದ್ದು ಸರಿಯೇ ? 300ರೂ.ಗಳ ಭರವಸೆಯಲ್ಲೇ ಮೋಸ ಮಾಡುವವರು "ಬಿಜೆಪಿಯೇ ಭರವಸೆ" ಎಂಬ ಬೋರ್ಡ್ ಹಾಕುವುದು ಪರಮಹಾಸ್ಯ!'' ಎಂದು ಕಾಂಗ್ರೆಸ್ ಕುಟುಕಿದೆ. 

''ಭ್ರಷ್ಟಾಚಾರ, ವೈಫಲ್ಯ, ಬೆಲೆ ಏರಿಕೆಯ ಮೂಟೆ ಹೊತ್ತ ಬಿಜೆಪಿ ನಾಯಕರಿಗೆ ಹೋದಲ್ಲೆಲ್ಲ ಜನತೆ ಮಹಾಮಂಗಳಾರತಿ ಎತ್ತುತ್ತಿದ್ದಾರೆ! ಹಣ ಕೊಟ್ಟು ಜನರನ್ನು ಕರೆಸಿ, ಅದೇ ಜನರಿಂದ ಉಗಿಸಿಕೊಳ್ಳುತ್ತಿರುವ ಬಿಜೆಪಿ ಸ್ಥಿತಿ ನಿಜಕ್ಕೂ ಹೀನಾಯ! ಗ್ಯಾಸ್ ಬೆಲೆ ಏರಿಕೆಯ ವಿರುದ್ಧ ಮಹಿಳೆಯರ ಆಕ್ರೋಶಕ್ಕೆ ನಳಿನ್ ಕುಮಾರ್ ಕಟೀಲ್ ಉತ್ತರ ಹೇಳದೆ ಓಡಿದ್ದಾರೆ!'' ಎಂದು ಇತ್ತೀಚೆಗೆ ಹಾವೇರಿಯ ಬ್ಯಾಡಗಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ನಡೆದ ಘಟನೆಯ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ. 

''ಫಲಾನುಭವಿಗಳ ಸಮಾವೇಶಕ್ಕೆ ಹಣ ಕೊಟ್ಟು ಕರೆಸಿ ಜನರಿಂದ ಉಗಿಸಿಕೊಳ್ಳುತ್ತಿದೆ ಬಿಜೆಪಿ. ಬಿಜೆಪಿ ಸರ್ಕಾರದಿಂದ ಸಂತ್ರಸ್ತರಿದ್ದಾರೆಯೇ ಹೊರತು ಫಲಾನುಭವಿಗಳಲ್ಲ. ಬೆಲೆ ಏರಿಕೆಯಿಂದ ಕಂಗೆಟ್ಟ ಮಹಿಳೆಯರ ಈ ಆಕ್ರೋಶದ ನುಡಿಗಳೇ ಬಿಜೆಪಿಗೆ ಶಾಪವಾಗಿ ಪರಿಣಮಿಸುವುದು ನಿಶ್ಚಿತ. ಈ ನಾಚಿಕೆಗೇಡಿನ ಸ್ಥಿತಿ ಬಿಜೆಪಿಗೆ ಬರಬಾರದಿತ್ತು!'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. 

Similar News