ಹಾವೇರಿ | ಸಂಘಪರಿವಾರ ಕಾರ್ಯಕರ್ತರಿಂದ ಮಸೀದಿ, ಶಾಲೆ ಮೇಲೆ ಕಲ್ಲು ತೂರಾಟ ಪ್ರಕರಣ: 15 ಮಂದಿ ವಶಕ್ಕೆ

Update: 2023-03-14 13:29 GMT

ಹಾವೇರಿ, ಮಾ.14: ಜಿಲ್ಲೆಯ ರಟ್ಟೀಹಳ್ಳಿಯಲ್ಲಿ ಮಂಗಳವಾರ ಸಂಘಪರಿವಾರದ ಕಾರ್ಯಕರ್ತರು ಮಸೀದಿ, ಶಾಲೆ ಹಾಗೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಶಿವಕುಮಾರ್ ಗುಣಾರಿ ತಿಳಿಸಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಟ್ಟಿಹಳ್ಳಿ ಪಟ್ಟಣದಲ್ಲಿ ಇಂದು ಬೈಕ್ ರ‍್ಯಾಲಿ ನಡಿಯುತ್ತಿದ್ದ ವೇಳೆ ಕಾರ್ಯಕರ್ತರು ರ‍್ಯಾಲಿ ಮಾಡುವ ಮಾರ್ಗಬಿಟ್ಟು ಕಾರಂಜಿ ಸರ್ಕಲ್ ಗೆ ಹೋಗಿದ್ದಾರೆ. ಬಳಿಕ ಅಲ್ಲಿದ್ದ 8 -10 ಮನೆಗಳು ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಪೋಲಿಸರು ಪರಿಸ್ಥಿತಿಯನ್ನು ಹತೋಟೆಗೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 15 ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ' ಎಂದು ಮಾಹಿತಿ ನೀಡಿದರು. 

ಬೈಕ್ ರ‍್ಯಾಲಿ ವೇಳೆ ಕಲ್ಲು ತೂರಾಟ:

ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ ಹಿನ್ನೆಲೆ ಇಂದು ರಟ್ಟೀಹಳ್ಳಿಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಪ್ರಮುಖ ಬೀದಿಯಲ್ಲಿ ಬೈಕ್ ರ‍್ಯಾಲಿ ಏರ್ಪಡಿಸಿದ್ದರು. ಈ ವೇಳೆ ಕಾರ್ಯಕರ್ತರು ಮಸೀದಿ, ಮನೆಗಳು ಹಾಗೂ ಉರ್ದು ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆನ್ನಲಾಗಿದೆ. ಅಲ್ಲದೇ, ಆಟೋ ಚಾಲಕರೊಬ್ಬರಿಗೆ ಥಳಿಸಿರುವ ಘಟನೆಯೂ ವರದಿಯಾಗಿದೆ.

.

Similar News