ಕೊಡಗು ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

Update: 2023-03-14 14:30 GMT

ಮಡಿಕೇರಿ ಮಾ.14 : ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ನಾಪೊಕ್ಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರ್ಧ ಇಂಚಿನಷ್ಟು ಮಳೆ ಸುರಿದಿದೆ.    

ಮರಗೋಡು, ಮದೆನಾಡು, ಬೆಟ್ಟಗೇರಿ, ಗಾಳಿಬೀಡು, ಭಾಗಮಂಡಲ ಮತ್ತಿತರೆಡೆ ಸಾಧಾರಣ ಮಳೆಯಾಗಿದೆ. ಮಡಿಕೇರಿ ನಗರ ಮತ್ತು ಸೋಮವಾರಪೇಟೆ ಸುತ್ತಮುತ್ತ ತುಂತುರು ಮಳೆ ಮಳೆಯಾಗಿದ್ದು, ವಿರಾಜಪೇಟೆಯಲ್ಲಿ ಮೋಡ ಕವಿದ ವಾತಾವರಣವಿತ್ತು. 

ಉತ್ತಮ ಮಳೆಯಾಗಿದ್ದರೆ ಬೆಂಕಿಯಿಂದ ನಾಶವಾಗಿರುವ ಅರಣ್ಯ ಭಾಗಕ್ಕೆ ಸಹಕಾರಿಯಾಗುತ್ತಿತ್ತು. ಆದರೆ ನಿರೀಕ್ಷೆಯಷ್ಟು ಮಳೆಯಾಗದೆ ನಿರಾಶೆ ಮೂಡಿಸಿದೆ.  

ನಾಪೊಕ್ಲು ವಿಭಾಗದಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಿರುವುದರಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಬೀರಿದೆ. ಕಾಫಿ ಮತ್ತು ಕರಿಮೆಣಸು ಕೊಯ್ಲು ಕಾರ್ಯ ಮುಗಿಸಿದ್ದು, ಪ್ರಸ್ತುತ ಉತ್ತಮ ಮಳೆಯಾದರೆ ಮುಂದಿನ ವರ್ಷ ಉತ್ತಮ ಫಸಲನ್ನು ಪಡೆಯಲು ಸಾಧ್ಯವಾಗುತ್ತದೆ. ಮಳೆಯಾಗದಿದ್ದರೆ ಸ್ಪಿಂಕ್ಲರ್ ಮೊರೆ ಹೋಗಬೇಕಾಗುತ್ತದೆ, ಇದರಿಂದ ಬೆಳೆಗಾರರು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಕಾಫಿ ತೋಟಗಳೇ ಇರುವ ಪ್ರದೇಶ ಉತ್ತಮ ಮಳೆಯ ನಿರೀಕ್ಷೆಯಲ್ಲಿದೆ.

ಬಿಸಿಲಿನ ತಾಪಕ್ಕೆ ಕಾಡ್ಗಿಚ್ಚು ಏರ್ಪಟ್ಟು ಅರಣ್ಯ ಬೆಂಕಿಗಾಹುತಿಯಾಗುತ್ತಿದೆ. ಕಾಡಿನಲ್ಲಿ ನೀರಿನ ಕೊರತೆ ಉಂಟಾಗಿ ವನ್ಯಮೃಗಗಳು ಗ್ರಾಮೀಣ ಭಾಗದ ಕೆರೆಗಳನ್ನು ಹುಡುಕಿಕೊಂಡು ಬರುತ್ತಿವೆ. ಕಾವೇರಿ ನದಿಯಲ್ಲೂ ನೀರಿನ ಮಟ್ಟ ಕುಸಿದಿದೆ. ಈ ವೇಳೆಯಲ್ಲಿ ಮಳೆಯಾದರೆ ಉತ್ತಮ ಎನ್ನುವುದು ಕೃಷಿಕ ವರ್ಗದ ಅಭಿಪ್ರಾಯವಾಗಿದೆ. 

Similar News