ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಅರ್ಜಿಯ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ

Update: 2023-03-14 15:23 GMT

ಹೊಸದಿಲ್ಲಿ, ಮಾ.14:  ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ(ಕೆಎಸ್‍ಡಿಎಲ್) ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಲೋಕಾಯುಕ್ತದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಂಗೀಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಅರ್ಜಿಯ ತುರ್ತು ವಿಚಾರಣೆಗೆ ಲೋಕಾಯುಕ್ತ ವಕೀಲರು ಮನವಿ ಮಾಡಿದ್ದರು. ಆದರೆ, ಸಾಂವಿಧಾನಿಕ ಪೀಠದ ಪ್ರಕರಣಗಳ ಕುರಿತಂತೆ ವಿಚಾರಣೆ ನಡೆಸುತ್ತಿರುವುದರಿಂದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠದ ಮುಂದೆ ವಿಷಯ ಪ್ರಸ್ತಾಪಿಸಲು ಸಿಜೆಐ ಸೂಚಿಸಿದರು.

ತಕ್ಷಣ ನ್ಯಾಯಮೂರ್ತಿ ಕೌಲ್ ನೇತೃತ್ವದ ಪೀಠಕ್ಕೆ ಧಾವಿಸಿದ ಲೋಕಾಯುಕ್ತ ಪರ ವಕೀಲರು, ತುರ್ತು ವಿಚಾರಣಾ ಪಟ್ಟಿಗೆ ಸೇರಿಸಲು ಮನವಿ ಮಾಡಿದರು. ಆದರೆ, ಅರ್ಜಿಯ ಶೀಘ್ರ ಇತ್ಯರ್ಥದ ಅಗತ್ಯ ಏನು ಎಂದು ನ್ಯಾಯಮೂರ್ತಿ ಕೌಲ್, ವಕೀಲರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ವಕೀಲರು, ಆರೋಪಿಯು ಹಾಲಿ ಶಾಸಕರಾಗಿದ್ದು, ಅವರ ಬಳಿಯಿದ್ದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಕೀಲರ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಕೌಲ್, ಸಾಧ್ಯವಾದಷ್ಟು ಬೇಗ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚಿಸಿದರು. ಮಧ್ಯಾಹ್ನ 2ಗಂಟೆಗೆ ವಿಚಾರಣೆ ಕೈಗೆತ್ತಿಕೊಳ್ಳಬಹುದು ಎಂದು ವಕೀಲರು ಮರು ಮನವಿ ಮಾಡಿದಾಗ, ಇದು ಜಾಮೀನು ರದ್ದು ಅರ್ಜಿಯಾಗಿರುವುದರಿಂದ ಬಿಡುವಿನ ಸಮಯದಲ್ಲಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. 

ನಂತರದ ಬೆಳವಣಿಗೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಕೆಎಸ್‍ಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೊದಲ ಆರೋಪಿಯಾಗಿರುವ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸುವ ಹಂತದಲ್ಲಿ ಕರ್ನಾಟಕ ಹೈಕೋರ್ಟ್‍ನ ಏಕಸದಸ್ಯ ಪೀಠ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

Similar News