ರಾಜಕಾರಣಿಗಳು ಕೆಡುವುದಕ್ಕೆ ಆರಿಸಿದ ಜನರೇ ಕಾರಣ: ದಿನೇಶ್ ಅಮೀನ್ ಮಟ್ಟು

ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ಕಾರ್ಯಕ್ರಮ

Update: 2023-03-14 17:23 GMT

ಶಿವಮೊಗ್ಗ, ಮಾ.14: ನೈತಿಕ ಮತ್ತು ಜನಪರ ರಾಜಕಾರಣ ಮಾಡಿದ ಶಾಂತವೇರಿ ಗೋಪಾಲ ಗೌಡರ ಹತ್ತಿರಕ್ಕೆ ಇಂದಿನ ಯಾವ ರಾಜಕಾರಣಿಗಳೂ ತಲುಪಿಲ್ಲ. ಇಂದು ರಾಜಕಾರಣಿಗಳು ಕೆಡುವುದಕ್ಕೆ ಅವರನ್ನು ಆರಿಸಿದ ಜನರೇ ಕಾರಣವಾಗಿದ್ದಾರೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಪೀಪಲ್ಸ್ ಲಾಯರ್ಸ ಗಿಲ್ಡ್, ಅಹರ್ನಿಶಿ ಪ್ರಕಾಶನ ಶಿವಮೊಗ್ಗ ಹಾಗೂ ಜನ ಪ್ರಕಾಶನ ಬೆಂಗಳೂರು ಸಹಯೋಗದೊಂದಿಗೆ ನಗರದ ಸರಕಾರಿ ನೌಕರರ ಸಂಘದ ಭವನದಲ್ಲಿ ಮಂಗಳವಾರ ಏರ್ಪಡಿಸಿದ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ಹಾಗೂ ಶಾಸನ ಸಭೆಯಲ್ಲಿ ಶಾಂತವೇರಿ ಮತ್ತು ಸಮಾಜವಾದದ ಸಹ್ಯಾದ್ರಿ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಗೋಪಾಲಗೌಡರು ಯಾವ ಪಾತಕ ಮಾಡದೆ ಜನರಿಂದ ರಾಜಕೀಯ ಅರಿವು ಕಡಿಮೆಯಿದ್ದ ಕಾಲದಲ್ಲೂ ಜಾತಿಮತ ನೋಡದೆ ಮೂರು ಬಾರಿ ಗೆದ್ದಿದ್ದರು. ಲಕ್ಷಾಂತರ ಹಣ ಖರ್ಚು ಮಾಡಿದ ಬದರಿನಾರಾಯಣ ಅಯ್ಯಂಗಾರರು ಸೋತರು. ಆಗಿನ ಜನ ಗುಣ ನೋಡುತ್ತಿದ್ದರೂ ವಿನಾಃ ಹಣವನ್ನಲ್ಲ ಎಂದು ತಿಳಿಸಿದರು.

ಆಯ್ಕೆಯಾದ ರಾಜಕಾರಣಿಗಳಲ್ಲಿ ಅವಿದ್ಯಾವಂತರು ಇದ್ದಾರೆ. ಶೇ.40ರಷ್ಟು ಕ್ರಿಮಿನಲ್‌ಗಳಿದ್ದಾರೆ. ಕರ್ನಾಟಕದಲ್ಲಿ ಒಂದು ಪಕ್ಷದ ಶಾಸಕರು ಪಕ್ಷಾಂತರ ಮಾಡಿ ರಾಜೀನಾಮೆ ನೀಡಿ ಪುನಃ ಚುನಾವಣೆಗೆ ಬೇರೆ ಪಕ್ಷದಿಂದ ನಿಲ್ಲುತ್ತಾರೆ. ಆದರೆ ಜನ ಅವರನ್ನು ಮತ್ತೇ ಗೆಲ್ಲಿಸುತ್ತಾರೆ ಎಂದರು.

ರೈತರ ಪರ ಪ್ರಣಾಳಿಕೆಯಲ್ಲಿ ಸಾಲಮನ್ನಾ ಎಂಬ ಭರವಸೆಯನ್ನು ನೀಡಿದ್ದರೂ ಇದುವರೆಗೆ ಈಡೇರಿಸಿಲ್ಲ. ಆದರೆ ಜನ ಕೂಡ ಅದನ್ನು ಪ್ರಶ್ನೆ ಮಾಡದಿರುವುದು ಆಶ್ಚರ್ಯಕರ ಮತ್ತು ದುಃಖಕರವಾಗಿದೆ. ಗೋಪಾಲಗೌಡರು ಯಾವುದೇ ಮುಲಾಜಿಲ್ಲದೆ ರಾಜಕಾರಣ ಮಾಡುತ್ತಿದ್ದರು. ಅವರು ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿದ್ದರು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು. ಮಾಜಿ ಶಾಸಕ ಹಾಗೂ ಗೋಪಾಲಗೌಡರ ಆಪ್ತ ಕೋಣಂದೂರು ಲಿಂಗಪ್ಪ ಮಾತನಾಡಿ, ನಾನು ಮನುಷ್ಯನಾಗಿದ್ದರೆ ಅದಕ್ಕೆ ಗೋಪಾಲಗೌಡರು ಕಾರಣ. ಅವರು ಮೊದಲ ಐದು ವರ್ಷ ಮಾಡಿದ ಸದನದ ಭಾಷಣವನ್ನು ಪುಸ್ತಕ ರೂಪಕ್ಕೆ ತಂದೆ. ಮತ್ತೆ 10 ವರ್ಷಗಳ ಬಗ್ಗೆ ತರಲು ಗೌಡರು ಅನುಮತಿ ನೀಡಲಿಲ್ಲ ಎಂದು ಗೌಡರ ಬಗ್ಗೆ ಬರೆದ ಕವನ ಓದಿದರು. ವೇದಿಕೆಯಲ್ಲಿ ಹಿರಿಯ ಅಕ್ಷತಾ, ಎಂ.ಗುರುಮೂರ್ತಿ, ವಕೀಲ ಕೆ.ಪಿ.ಶ್ರೀಪಾಲ್ ಉಪಸ್ಥಿತರಿದ್ದರು. ಕೋಟ್

ನನಗೂ ಗೋಪಾಲಗೌಡರಿಗೂ 16 ವರ್ಷದ ಸಂಬಂಧ ಮೊದಲ ಚುನಾವಣೆಯಲ್ಲಿ ಕೇವಲ 6 ಸಾವಿರ ರೂ. ಖರ್ಚು ಮಾಡಿ ಗೌಡರು ಗೆದ್ದರು. ಇಂದು ಕೋಟಿ ರೂ. ಇದ್ದರೂ ಸಾಲದು. ಗೌಡರು ಏಕೀಕರಣದ ಪರವಾಗಿದ್ದರು. ದಸರಾವನ್ನು ಮೈಸೂರಿನಲ್ಲಿ ವಿರೋಧಿಸಿ ಮೆರವಣಿಗೆ ಮಾಡಿದ್ದರು. ದಲಿತ ಕಾರ್ಮಿಕ ಅಲ್ಪಸಂಖ್ಯಾತರ ಪರ ಗೋಪಾಲಗೌಡರು ಹೋರಾಟ ಮಾಡಿದ್ದರು. ಅವರ ಜೀವನವೇ ಯುವಕರಿಗೆ ಮಾದರಿಯಾಗಿದೆ.

-ಪಿ.ಪುಟ್ಟಯ್ಯ,ಹಿರಿಯ ಸಮಾಜವಾದಿ

ಸರಕಾರಗಳ ದುಂದು ವೆಚ್ಚಗಳನ್ನು ವಿಧಾನಸೌಧದಲ್ಲಿ ಪ್ರಶ್ನೆ ಮಾಡುವವರೂ ಯಾರು ಇಲ್ಲ. ಗೋಪಾಲಗೌಡರು ಸಾಹಿತ್ಯ ಸಂಸ್ಕೃತಿ ತಿಳಿದುಕೊಂಡಿದ್ದರು. ಅದು ಅವರನ್ನು ಹೆಚ್ಚು ಮಾನವೀಯರನ್ನಾಗಿಸಿತು. ಇಂದು ರಾಜಕಾರಣಿಗಳು ಅಜ್ಞಾನವನ್ನೇ ಮಾನದಂಡ ಮಾಡಿಕೊಂಡಿದ್ದಾರೆ. ಅವರ ಪ್ರಣಾಳಿಕೆ ಸುಳ್ಳು ಭರವಸೆ ಆಗಿದೆ.

ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತ

29ನೇ ವಯಸ್ಸಿಗೆ ಚಳವಳಿ ಹಿನ್ನೆಲೆಯಿಂದ ಬಂದ ಗೋಪಾಲಗೌಡರು ಸದನದಲ್ಲಿ ಇನಾಂ ಭೂಮಿ ರದ್ದತಿಗೆ ಹೋರಾಡಿದ್ದರು. ರಾಜ್ಯಪಾಲರ ಭಾಷಣದ ಪ್ರತಿ ಇಂಗ್ಲಿಷ್‌ನಲ್ಲಿ ಇದ್ದುದರಿಂದ ಅವರು ಅದನ್ನು ಹರಿದು ಕಾಲಲ್ಲಿ ತುಳಿದರು. ಅವರು ರೈತ ಕಾರ್ಮಿಕರು ಮತ್ತು ನಿಜವಾದ ಧರ್ಮದ ಬಗ್ಗೆ ಮಾತನಾಡಿದರು ಮತ್ತು ಕಾನೂನಾತ್ಮಕ ಹೋರಾಟ ಮಾಡಿ ಸದನ ಸರಿಯಾಗಿ ನಡೆಯುವಂತೆ ಮಾಡಿದರು. ಅಂದು ಭೂ ಸುಧಾರಣೆ ಮೌಲ್ಯ ಇಂದು ಭೂಸ್ವಾಧೀನ ಮೌಲ್ಯವಾಗಿದೆ. ಗೌಡರು ಕರ್ನಾಟಕದ ಏಕೀಕರಣ ಮತ್ತು ಅಧಿಕಾರ ವಿಕೇಂದ್ರೀಕರಣದ ಪರ ಹೋರಾಟ ಮಾಡಿದರು. ಇಂದಿನ ಎನ್‌ಇಪಿ ಶಿಕ್ಷಣ ಗೌಡರ ತತ್ವಕ್ಕೆ ವಿರುದ್ಧವಾಗಿದೆ

ಸಿದ್ದನಗೌಡ ಪಾಟೀಲ್, ಸಾಮಾಜಿಕ ಹೋರಾಟಗಾರ

Similar News