ಪ್ರಣಾಳಿಕೆಯಲ್ಲಿ ಇಲ್ಲದ ಅಭಿವೃದ್ಧಿ ಕೆಲಸಗಳನ್ನೂ ಬಿಜೆಪಿ ಸರಕಾರ ಮಾಡಿ ತೋರಿಸಿದೆ: ಸಿ.ಟಿ ರವಿ
ಕಲಬುರಗಿ: ಕಳೆದ ಬಾರಿ ಚುನಾವಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳನ್ನು ಬಿಜೆಪಿ ಸಂಪೂರ್ಣವಾಗಿ ಈಡೇರಿಸಿದ್ದು, ಪ್ರಣಾಳಿಕೆಯಲ್ಲಿ ಇಲ್ಲದೇ ಇರುವ ಹಲವು ಅಭಿವೃದ್ಧಿ ಕೆಲಸಗಳನ್ನು ಕೂಡ ನಮ್ಮ ಸರಕಾರ ಮಾಡಿದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಪಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿಲ್ಲ.ಆದರೂ ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಬಸವಕಲ್ಯಾಣದ ಅನುಭವ ಮಂಟಪದ ಅಭಿವೃದ್ಧಿ ಬಗ್ಗೆ ಪ್ರಣಾಳಿಕೆಯಲ್ಲಿ ಇರಲಿಲ್ಲ. ಆದರೂ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ನಮ್ಮ ವಿಜಯ ಸಂಕಲ್ಪ ಯಾತ್ರೆಗೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು,ಈ ಬಾರಿ ಜನ ಬೆಂಬಲದೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಲಿದೆ.ವಿಜಯ್ ಸಂಕಲ್ಪ ಯಾತ್ರೆಯ ಮಹಾ ಸಂಗಮವು ಇದೇ ಮಾಚ್-25ರಂದು ದಾವಣಗೆರೆಯಲ್ಲಿ ವಿರಾಟ್ ಸ್ವರೂಪ ದಶ9ನ ಸಮಾವೇಶ ನಡೆಯಲಿದ್ದು,ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ನಮ್ಮ ಸಕಾ9ರದ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಅನ್ನು ಇಟ್ಟುಕೊಂಡು ಜನರ ಆಶೀರ್ವಾದ ಕೇಳಲು ಹೊರಟಿದ್ದೇವೆ.ಪ್ರತಿ ಜಿಲ್ಲೆಗಳಲ್ಲಿ ಪ್ರತಿ ಯೋಜನೆಗಳ ಫಲಾನುಭವಿಗಳಿದ್ದು,ಅವರುಗಳನ್ನು ಮತದಾರರನ್ನಾಗಿ ಪರಿವರ್ತನೆ ಮಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರಾದ ಬಿ.ಜಿ.ಪಾಟೀಲ್, ಬಸವರಾಜ ಮತ್ತಿಮಡು, ಶಶೀಲ್ ನಮೋಶಿ,ಮಾಲೀಕಯ್ಯಾ ಗುತ್ತೇದಾರ್, ಚಂದು ಪಾಟೀಲ್, ನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ್, ಗ್ರಾಮೀಣ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.