ಶಾಸಕ ಹಾಲಪ್ಪ ವಿರುದ್ಧ ಬಿಎಸ್‌ವೈಗೆ ಬಿಜೆಪಿ, ಸಂಘಪರಿವಾರದವರಿಂದ ದೂರು

Update: 2023-03-14 17:41 GMT

ಶಿವಮೊಗ್ಗ, ಮಾ.14: ಸಾಗರ ಶಾಸಕ ಹಾಲಪ್ಪ ವಿರುದ್ಧ ಬಿಜೆಪಿ ನಾಯಕರು, ಸಂಘಪರಿವಾರದ ಪ್ರಮುಖರು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡದಂತೆ ವಿರೋಧಿ ಬಣ ಒತ್ತಡ ಹಾಕಿದೆ. ಶಿಕಾರಿಪುರದಲ್ಲಿ ಯಡಿಯೂರಪ್ಪ ಹಾಗೂ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಭೇಟಿ ಮಾಡಿದ ವಿರೋಧಿ ಬಣ ಬಹಳಷ್ಟು ಹೊತ್ತು ಚರ್ಚೆ ನಡೆಸಿದೆ ಎಂದು ತಿಳಿದು ಬಂದಿದೆ.

2008ರಿಂದಲೂ ನಿಮ್ಮ ಗರಡಿಯಲ್ಲೇ ಬೆಳೆದಿರುವ ಹಾಲಪ್ಪನವರು ಪ್ರಬುದ್ಧ ರಾಜಕಾರಣಿಯಂತೆ ಕಾಣಿಸುತ್ತಾರೆ. ಇಲ್ಲಿ ಒಂದು ಬಾರಿ ಗೆದ್ದು ಜನಾಂಗೀಯ ಹಲ್ಲೆ ಮಾಡಿಸಿರುವ ಅವರು, ಮತ್ತೊಮ್ಮೆ ಗೆದ್ದರೆ ಸಾಗರವನ್ನೇ ದೋಚಿಬಿಡುತ್ತಾರೆ. 2018ರಲ್ಲಿ ನಿಮಗೆ ಮನಸ್ಸಿಲ್ಲದಿದ್ದರೂ ನಾವೇ ಹಠ ಮಾಡಿ ಹಾಲಪ್ಪನವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದೆವು. ಆದರೆ, ನಂತರ ಅವರ ಅವಾಂತರ ಮಿತಿ ಮೀರಿದೆ. ಹಾವಳಿ ತಡೆಯಲು ನಮಗೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪಕ್ಷ, ತತ್ವಸಿದ್ಧಾಂತಗಳಿಗೆ ಬದ್ಧರಾಗಿರುವ, ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಟಿಕೆಟ್ ಕೊಡಿ ಎಂದು ವಿರೋಧಿಗಳು ಮಾಜಿ ಸಿಎಂ ಎದುರು ಒಕ್ಕೊರಲ ಮನವಿ ಮಾಡಿದ್ದಾರೆನ್ನಲಾಗಿದೆ.

ಹಾಲಪ್ಪನವರ ವಿರುದ್ಧ ದೂರು ನೀಡಿದವರ ವಿರುದ್ಧ ಹಲ್ಲೆ ನಡೆಸುವುದು, ಅವರ ಜಾಗಕ್ಕೆ ತೊಂದರೆ ಕೊಡುವುದು, ಹೆದರಿಸುವಂತಹ ಚಟುವಟಿಕೆಗಳೂ ನಡೆಯುತ್ತಿವೆ. ಆದ್ದರಿಂದ ತಾಲೂಕಿನ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಇದನ್ನು ಸರಿಪಡಿಸುವ ಉದ್ದೇಶದಿಂದ ಹೊಸಬರನ್ನು ಆಯ್ಕೆ ಮಾಡಬೇಕು ಎಂದು ಎಲ್ಲರೂ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ನಿಯೋಗದಲ್ಲಿ ಸಾಗರದ ಆಶ್ರಯ ಸಮಿತಿ ಅಧ್ಯಕ್ಷ ಯು. ಎಚ್.ರಾಮಪ್ಪ, ಹಿರಿಯ ವಕೀಲ ಮತ್ತು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎನ್.ಶ್ರೀಧರ್, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ, ವೀರಶೈವ ಮುಖಂಡರಾದ ಜಗದೀಶ್ ಗೌಡ, ಕುಮಾರ್, ವಸಂತ್ ಬಿಜೆಪಿ ಮುಖಂಡರಾದ ಸತೀಶ್ ಹಕ್ರೆ, ರಾಘವೇಂದ್ರ ಶೇಟ್, ಕೃಷ್ಣಮೂರ್ತಿ ಮಂಕಳಲೆ ಮತ್ತಿತರ ಮುಖಂಡರು ಇದ್ದರು.

Similar News