ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು: ಡಿ.ಕೆ.ಶಿವಕುಮಾರ್ ಕಿಡಿ
''ಬಿಜೆಪಿಯ ಬಾಲಬಡುಕರಾಗಿ ಕೆಲಸ ಮಾಡುತ್ತಿದ್ದಾರೆ...''
ಬೆಂಗಳೂರು, ಮಾ.15: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಇತಿಹಾಸ ತಿರುಚಲು ಉರಿಗೌಡ, ನಂಜೇಗೌಡ ದ್ವಾರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವ ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡಿಜಿಪಿ ಪ್ರವೀಣ್ ಸೂದ್ ಒಳ್ಳೆಯವರು, ನಿಷ್ಪಕ್ಷಪಾತ ವ್ಯಕ್ತಿ ಅಂದುಕೊಂಡಿದ್ದೆ. ಆದರೆ ಬಿಜೆಪಿಯ ಬಾಲಬಡುಕರಾಗಿ ಕೆಲಸ ಮಾಡುತ್ತಿದ್ದಾರೆ. ಆ ದ್ವಾರ ನಿರ್ಮಾಣಕ್ಕೆ ಇವರು ಹೇಗೆ ಅನುಮತಿ ಕೊಟ್ಟರು? ಎಂದು ಪ್ರಶ್ನಿಸಿದರು.
‘ಬಿಜೆಪಿಯವರು ಮೊದಲಿಂದಲೂ ಇತಿಹಾಸ ತಿರುಚಲು ಪ್ರಯತ್ನಿಸುತ್ತಿದ್ದಾರೆ. ಕುವೆಂಪು, ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್, ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ, ಶ್ರೀ ಶಿವಕುಮಾರ ಸ್ವಾಮೀಜಿ ಹೀಗೆ ಯಾರನ್ನೂ ಬಿಡದೆ ಇತಿಹಾಸ ತಿರುಚುತ್ತಿದ್ದಾರೆ. ಈಗ ಉರಿಗೌಡ, ನಂಜೇಗೌಡರ ಹೆಸರು ತೆಗೆದುಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಉರಿಗೌಡ, ನಂಜೇಗೌಡರ ಇತಿಹಾಸ ಎಲ್ಲಿದೆ? ಇವರ ಹೆಸರು ಸೃಷ್ಟಿಸಿ ಇಡೀ ಒಕ್ಕಲಿಗ ಸಮುದಾಯಕ್ಕೆ ಮೋಸ ಮಾಡಲು ಬಿಜೆಪಿಯವರು ಷಡ್ಯಂತ್ರ ರೂಪಿಸಿದ್ದಾರೆ. ಒಕ್ಕಲಿಗರಿಗೆ ಅವಮಾನ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣ, ಶೃಂಗೇರಿಯಲ್ಲಿ ಅನೇಕ ಇತಿಹಾಸಗಳಿವೆ. ಬಿಜೆಪಿಯವರು ಜಾತಿ, ಜಾತಿ ಮಧ್ಯೆ ವಿಷಬೀಜ ಬಿತ್ತನೆ ಮಾಡಿ ಚುನಾವಣೆ ಸಮೀಪಿಸುವಾಗ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶಿವಕುಮಾರ್ ಕಿಡಿಗಾರಿದರು.
ಇವರ ಹೆಸರಲ್ಲಿ ದ್ವಾರ ಮಾಡುವಂತೆ ಯಾರು ಕೇಳಿದ್ದರು? ಇವರು ಇದ್ದರು ಎಂಬುದಕ್ಕೆ ಎಲ್ಲಾದರೂ ದಾಖಲೆಗಳಿವೆಯೇ? ಈ ಡಿಜಿಪಿ ನಾಲಾಯಕ್. ಅವರು ಸರಕಾರದ ಮಾತು ಕೇಳಿಕೊಂಡು ಇದಕ್ಕೆ ಅವಕಾಶ ನೀಡಿದ್ದಾರೆ. ಕೂಡಲೇ ಡಿಜಿಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಚುನಾವಣಾ ಆಯೋಗ ಅವರನ್ನು ಬೇರೆಡೆಗೆ ವರ್ಗಾಯಿಸಬೇಕು. ಅವರು ಆ ಹುದ್ದೆಗೆ ಬಂದು ಮೂರು ವರ್ಷವಾಯ್ತು. ಇನ್ನೂ ಯಾಕೆ ಅಲ್ಲಿಟ್ಟಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಹೋರಾಟ ಮಾಡಿದರೆ ನಮ್ಮ ಮೇಲೆ 25 ಕೇಸ್ ಹಾಕುತ್ತಾರೆ. ಈ ರೀತಿ ಅನಧಿಕೃತ ದ್ವಾರ ಹಾಕಿದವರ ಮೇಲೆ ಪ್ರಕರಣ ದಾಖಲಿಸಿಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬರಲಿ, ಇವರು ಸೇರಿದಂತೆ ಯಾರೆಲ್ಲಾ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೋ ಅವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.
ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ಕರೆತಂದ ಜನರಿಗೆ ಹಣ ನೀಡಿಲ್ಲವಂತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ಸರಕಾರದ ಎಲ್ಲ ಆಡಳಿತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅವರು ಏನಾದರೂ ಮಾಡಿಕೊಳ್ಳಲಿ. ಆದರೆ ಈ ಬಾರಿ ಬಿಜೆಪಿ ಸರಕಾರ ಕಿತ್ತೊಗೆಯಲು ಜನ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.
Questions for DGP Karnataka on behalf of our people:
— DK Shivakumar (@DKShivakumar) March 15, 2023
❓Are u doing duty for state or for BJP?
❓Why no case against BJP leaders despite evidence?
❓Why only cases against Congress leaders even for protesting?
❓Why must u continue when u are clearly working as BJP's agent?