×
Ad

ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ನೌಕರರ ವೇತನ ಶೇ.20ರಷ್ಟು ಹೆಚ್ಚಳ: ಮುಷ್ಕರ ವಾಪಸ್

Update: 2023-03-15 18:17 IST

ಬೆಂಗಳೂರು, ಮಾ.15: ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ನೌಕರರ ವೇತನವನ್ನು ಎಪ್ರಿಲ್ ತಿಂಗಳಿನಿಂದ ಜಾರಿಗೆ ಬರುವಂತೆ ಶೇ.20ರಷ್ಟು ಹೆಚ್ಚಳ ಮಾಡಲು ರಾಜ್ಯ ಸರಕಾರ ಸಮ್ಮತಿಸಿರುವುದರಿಂದ ಗುರುವಾರ(ಮಾ.16)ರಿಂದ ಕೈಗೊಳ್ಳಲು ಉದ್ದೇಶಿಸಿದ್ದ ಮುಷ್ಕರವನ್ನು ನೌಕರರು ವಾಪಸ್ ಪಡೆದಿದ್ದಾರೆ.

ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಈಗಿರುವ ವೇತನದ ಮೇಲೆ 2022ರ ಎಪ್ರಿಲ್‍ನಿಂದ ಅನ್ವಯವಾಗುವಂತೆ ಶೇ.20ರಷ್ಟು ಹೆಚ್ಚಿಸಲು ಸರಕಾರ ಸಮ್ಮತಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರದಿಂದ ಕೈಗೊಳ್ಳಲು ಬಯಸಿದ್ದ ಮುಷ್ಕರವನ್ನು ಹಿಂಪಡೆಯುತ್ತಿದ್ದೇವೆ. ಎಲ್ಲ ನೌಕರರು ಎಂದಿನಂತೆ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಕೆಇಬಿ ಇಂಜಿನಿಯರ್‍ಗಳ ಸಂಘದ ಅಧ್ಯಕ್ಷ ಶಿವಣ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜ್ಯ ಸರಕಾರ ಇಂಧನ ಇಲಾಖೆ ನೌಕರರ ಶೇ.20 ರಷ್ಟು ವೇತನ ಹೆಚ್ಚಳ ಮಾಡಿರುವುದಕ್ಕೆ ನಮ್ಮ ಸಮ್ಮತಿ ಇದೆ. ಸರಕಾರಿ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸರಕಾರಿ ಆದೇಶ ಹೊರ ಬಿದ್ದರೆ ನಾಳಿನ ಮುಷ್ಕರವನ್ನು ವಾಪಸ್ ಪಡೆಯುತ್ತೇವೆ ಎಂದು ಕರ್ನಾಟಕ ವಿದ್ಯುತ್‍ಚ್ಛಕ್ತಿ ಮಂಡಳಿ ನೌಕರರ ಸಂಘ ಹಾಗೂ ಫೆಡರೇಷನ್‍ನ ಅಧ್ಯಕ್ಷ ಆರ್.ಎಚ್.ಲಕ್ಷ್ಮಿಪತಿ  ತಿಳಿಸಿದ್ದಾರೆ.

ಸುನೀಲ್ ಕುಮಾರ್ ಸೂಚನೆ: ನೌಕರರು ಮುಷ್ಕರ ಕೈಗೊಳ್ಳುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಇಂಧನ ಸಚಿವ ವಿ.ಸುನೀಲ್ ಕುಮಾರ್, ಮಾ.14ರಂದು ಕೆಪಿಟಿಸಿಎಲ್ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆಗೆ ಚರ್ಚಿಸಿ, ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ವೇತನ ಶೇ.20ರಷ್ಟು ಪರಿಷ್ಕರಿಸುವಂತೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಟಿಪ್ಟಣಿ ಮೂಲಕ ಸೂಚನೆ ನೀಡಿದ್ದಾರೆ.

Similar News