×
Ad

5, 8ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಷರತ್ತು ಬದ್ಧ ಅನುಮತಿ ನೀಡಿದ ಹೈಕೋರ್ಟ್

'ಯಾರನ್ನೂ ಅನುತ್ತೀರ್ಣಗೊಳಿಸುವಂತಿಲ್ಲ, ಪಠ್ಯ ಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳುವಂತಿಲ್ಲ'

Update: 2023-03-15 18:25 IST

ಬೆಂಗಳೂರು, ಮಾ.15: ರಾಜ್ಯ ಪಠ್ಯಕ್ರಮದ ಶಾಲೆಗಳ ಐದು ಮತ್ತು ಎಂಟನೇ ತರಗತಿಗಳ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಮಂಡಳಿ(ಬೋರ್ಡ್) ಪರೀಕ್ಷೆ ನಡೆಸಲು ರಾಜ್ಯ ಸರಕಾರಕ್ಕೆ ಅನುಮತಿಸಿ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. 

5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಗೊಳಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸರಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. 

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದು, ಪರೀಕ್ಷೆ ನಡೆಸಬಹುದೆಂದು ಆದೇಶ ನೀಡಿದೆ. 

10 ದಿನಗಳ ಬಳಿಕ ಅಂದರೆ ಮಾ.27ರಿಂದ ಪರೀಕ್ಷೆಗಳನ್ನು ನಡೆಸಲು ಹೈಕೋರ್ಟ್ ಸೂಚನೆ ನೀಡಿದ್ದು, ಪಠ್ಯಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳವಂತಿಲ್ಲ. ಯಾವುದೇ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಅವರನ್ನು ಅದೇ ತರಗತಿಯಲ್ಲಿ ಉಳಿಸದೆ ಮುಂದಿನ ತರಗತಿಗೆ ಕಳುಹಿಸಿಕೊಡಬೇಕು. ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ಶಾಲೆಗೆ ಮಾತ್ರವೇ ಕಳಿಸಬೇಕೆಂದು ಸೂಚನೆ ನೀಡಿದೆ. ಎಲ್ಲವೂ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ. 

5 ಮತ್ತು 8ನೇ ತರಗತಿ ಪರೀಕ್ಷೆ ನಡೆಸಲು ಶಿಕ್ಷಣ ಕಾಯ್ದೆಯಡಿ ನಿರ್ಬಂಧವಿಲ್ಲ. ಹೀಗಾಗಿ, ಪರೀಕ್ಷೆ ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿದ್ದು, ಪರೀಕ್ಷೆ ನಡೆಸಬಹುದೆಂದು ಆದೇಶ ನೀಡಿದೆ.

ಮಾ.13ರಿಂದ ಆರಂಭವಾಗಬೇಕಿದ್ದ ಪರೀಕ್ಷೆ: ಸರಕಾರದ ಆದೇಶದಂತೆ ಈಗಾಗಲೇ ಮಾ.13ರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಆರಂಭಿಸಬೇಕಿತ್ತು. ಆದರೆ, ಪರೀಕ್ಷೆ ರದ್ದುಗೊಳಿಸುವಂತೆ ಹೈಕೋರ್ಟ್ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ 5 ಮತ್ತು 8ನೇ ತರಗತಿಗಳಿಗೆ ಮಾತ್ರ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಉಳಿದಂತೆ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೂ ಸೋಮವಾರದಿಂದಲೇ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈಗ ಈ ಎರಡು ತರಗತಿಗಳಿಗೆ ಮಾ.27ರಿಂದ ಪರೀಕ್ಷೆ ಆರಂಭವಾಗಲಿದ್ದು, ಅಭ್ಯಾಸ ಮಾಡುವುದಕ್ಕೆ 12 ದಿನ ವಿದ್ಯಾರ್ಥಿಗಳಿಗೆ ಸಮಯ ಸಿಕ್ಕಂತಾಗಿದೆ.

'ಮುಂದಿನ ವರ್ಷದಿಂದ ಬೋರ್ಡ್ ಪರೀಕ್ಷೆ ಮಾಡಲಿ': ಹೈಕೋರ್ಟ್ ಆದೇಶದಿಂದ ನಮಗೆ ನಿರಾಸೆಯಾಗಿದೆ. 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವ ವಿಚಾರ ಶೈಕ್ಷಣಿಕ ಪ್ರಾರಂಭದಲ್ಲಿ ನಿರ್ಧಾರ ಮಾಡಿಲ್ಲ. ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ಶಿಕ್ಷಣ ಇಲಾಖೆ ನಿರ್ಧಾರ ತೆಗೆದುಕೊಂಡಿದೆ ಎಂದು ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದರು.

ಮಾ.31 ರಿಂದ ಎಸೆಸೆಲ್ಸಿ ಪರೀಕ್ಷೆ ಪ್ರಾರಂಭವಾಗುತ್ತಿವೆ. ಈಗಾಗಲೇ ಉಳಿದ ತರಗತಿಗಳ ಪರೀಕ್ಷೆ ನಡೆಸಲಾಗುತ್ತಿದೆ. ಇದರ ಮಧ್ಯೆ 5 ಮತ್ತು 8ನೇ ಬೋರ್ಡ್ ಪರೀಕ್ಷೆ ನಡೆಸುವುದು ಹೊರೆಯಾಗಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಬಗ್ಗೆ ತಯಾರಿ ಮಾಡಿಕೊಂಡಿಲ್ಲ. ಎಷ್ಟೋ ಶಾಲೆಗಳಿಗೆ ಶಿಕ್ಷಣ ಇಲಾಖೆ ಪಠ್ಯಪುಸ್ತಕವನ್ನು ಕೊಟ್ಟಿಲ್ಲ. ಹೀಗಾಗಿ, ಮುಂದಿನ ವರ್ಷದಿಂದಾದರೂ ಬೋರ್ಡ್ ಪರೀಕ್ಷೆ ನಡೆಸಲಿ ಎಂದು ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

Similar News