ಕುಶಾಲನಗರ | ದಲಿತ ಯುವತಿಯ ಕೊಲೆ ಆರೋಪ: ಪ್ರಕರಣ ದಾಖಲು

Update: 2023-03-15 15:20 GMT

ಮಡಿಕೇರಿ ಮಾ.15 : ಅಂತರ್ಜಾತಿ ವಿವಾಹವಾಗಿದ್ದ ಯುವತಿಯೊಬ್ಬಳು ಪತಿಯ ಮನೆ ಸೇರಿದ ನಾಲ್ಕೇ ದಿನದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ವರದಿಯಾಗಿದೆ.

ಹೆಬ್ಬಾಲೆ 6ನೇ ಹೊಸಕೋಟೆ ಗ್ರಾಮದ ನಿವಾಸಿ ರಾಜು ಹಾಗೂ ವನಜಾಕ್ಷಿ ದಂಪತಿ ಪುತ್ರಿ, ಕುಶಾಲನಗರ ಕಾಲೇಜೊಂದರ ವಿದ್ಯಾರ್ಥಿನಿ ಅಕ್ಷಿತ(18) ಎಂಬಾಕೆಯೇ ಮೃತಪಟ್ಟವರು. ಈ ಘಟನೆ ಕುರಿತು ಸಂಶಯ ವ್ಯಕ್ತಪಡಿಸಿರುವ ಮೃತ ಯುವತಿಯ ಪೋಷಕರು ಆಕೆಯ ಪತಿ ಹೇಮಂತ್, ಆತನ ತಂದೆ ದಶರಥ ಹಾಗೂ ತಾಯಿ ಗಿರಿಜಾ ಅವರ ವಿರುದ್ಧ ಕೊಲೆ ಆರೋಪದ ದೂರು ನೀಡಿದ್ದಾರೆ.

ಮಾ.10 ರಂದು ಬ್ಯಾಂಕ್ ಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ಅಕ್ಷಿತ ಮಧ್ಯಾಹ್ನದ ವೇಳೆಗೆ ಅಂತರ್ಜಾತಿ ವಿವಾಹವಾಗಿ ಅದೇ ಗ್ರಾಮದ ಹೇಮಂತ್ ನ ಮನೆ ಸೇರಿದ್ದಳು ಎಂದು ಹೇಳಲಾಗಿದೆ. 

ಮಾ.14 ರಂದು ಅಸ್ವಸ್ಥಗೊಂಡ ಆಕೆಯನ್ನು ಹೆಬ್ಬಾಲೆ ಮತ್ತು ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಜೀವ ಉಳಿಯಲಿಲ್ಲ. ಇದು ಹೇಮಂತನ ಮನೆಯವರೇ ಮಾಡಿರುವ ಕೃತ್ಯ ಎಂದು ಆರೋಪಿಸಿ ಅಕ್ಷಿತಾಳ ತಂದೆ ರಾಜು ದೂರು ನೀಡಿದ್ದಾರೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಹೇಮಂತ್ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಕ್ಷಿತ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಂತರ್ಜಾತಿ ವಿವಾಹವಾದ ನಂತರ ಯುವಕನ ಮನೆ ಕಡೆಯಿಂದ ಆಕ್ಷೇಪ ವ್ಯಕ್ತವಾಗಿತ್ತು ಎಂದು ಹೇಳಲಾಗಿದೆ. ಇದೀಗ ಅಕ್ಷಿತ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದು, ಈ ಬಗ್ಗೆ ಸಂಶಯ ವ್ಯಕ್ತವಾಗಿದೆ.  

► ಆತ್ಮಹತ್ಯೆ ಯತ್ನ

ಅಕ್ಷಿತ ಸಾವನ್ನಪಿದ ನಂತರ ಪತಿ ಹೇಮಂತ್ ಕ್ರಿಮಿನಾಶಕ ಸೇವಿಸಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆನ್ನಲಾಗಿದೆ.

► ಬಂಧನಕ್ಕೆ ಆಗ್ರಹ

ಅಕ್ಷಿತ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವತಿಯಾಗಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ, ಪತಿಯ ತಂದೆ, ತಾಯಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ವಿವಿಧ ದಲಿತ ಸಂಘಟನೆಗಳು ಮಡಿಕೇರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದಲಿತ ಕುಟುಂಬಕ್ಕೆ ಅನ್ಯಾಯವಾಗಿದ್ದು, ನಿಷ್ಪಕ್ಷಪಾತ ತನಿಖೆಯಾಗಬೇಕಾದರೆ ಮೂವರು ಬಂಧಿಸಬೇಕು ಮತ್ತು ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತ್ತಾಗಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಈಗಾಗಲೇ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದರು. 

ಅಮಾಯಕ ಕುಟುಂಬಕ್ಕೆ ನ್ಯಾಯ ಸಿಗುವಲ್ಲಿಯವರೆಗೆ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

Similar News