ಡಿಕೆಶಿಯಿಂದ ಡಿಜಿಪಿ ಮೇಲೆ ವಿನಾ ಕಾರಣ ಆಪಾದನೆ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2023-03-15 14:15 GMT

ಬೆಂಗಳೂರು, ಮಾ.15: ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಮೇಲೆ ವಿನಾ ಕಾರಣ ಆಪಾದನೆ ಮಾಡಿ, ಪೊಲೀಸರ ನೈತಿಕ ಸ್ಥೈರ್ಯ ಕುಂದಿಸುವ ಪ್ರಯತ್ನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸ್ವಾರ್ಥ ರಾಜಕಾರಣ ಸಾಧಿಸಲು ಸರಕಾರದ ಅಧಿಕಾರಿಗಳನ್ನು ಗುರಿ ಮಾಡುವುದು ಸರಿಯಲ್ಲ.ಅಧಿಕಾರಕ್ಕೆ ಬರುವ ಯಾವುದೇ ಖಚಿತತೆ ಇರದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಪ್ರಧಾನ ನರೇಂದ್ರ ಮೋದಿ ಇತ್ತೀಚೆಗೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಿ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಸಂದರ್ಭದಲ್ಲಿ ಅಲ್ಲಿನ ಜನತೆ ನೀಡಿದ ಅಭೂತಪೂರ್ವ ಸ್ವಾಗತ, ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.ಈ ಕಾರಣದಿಂದಲೇ ಹತಾಶರದ ಡಿ.ಕೆ.ಶಿವಕುಮಾರ್ ಅವರು, ಟಿಪ್ಪು ಸುಲ್ತಾನ್ ಸಾವಿಗೆ ಕಾರಣರಾದ ಎನ್ನಲಾದ ಉರಿಗೌಡ ಹಾಗೂ ನಂಜೇಗೌಡ ಅವರನ್ನು ಬೆಂಬಲಿಸಿ ಹಾಕಿದ ಫ್ಲೆಕ್ಸ್ ಅನ್ನು ಉಲ್ಲೇಖಿಸಿ ಡಿಜಿಪಿ ಪ್ರವೀಣ್ ಸೂದ್ ಅವರನ್ನು, ನಿಂದಿಸಿರುವುದು, ಖಂಡನೀಯ ಎಂದು ಹೇಳಿದರು.

Similar News