×
Ad

ನಂಜನಗೂಡು ಚುನಾವಣಾ ಕಣದಿಂದ ಹಿಂದೆ ಸರಿದ ಎಚ್​​ಸಿ ಮಹದೇವಪ್ಪ: ಧ್ರುವನಾರಾಯಣ ಪುತ್ರನಿಗೆ ಬೆಂಬಲ ಘೋಷಣೆ

Update: 2023-03-15 20:53 IST

ಮೈಸೂರು,ಮಾ.15: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನಂಜನಗೂಡು ಕ್ಷೇತ್ರವನ್ನು ಇತ್ತೀಚೆಗೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವ ಅವರಿಗೆ ಬಿಟ್ಟುಕೊಡುವುದಾಗಿ ಘೋಷಣೆ ಮಾಡಿ ದರ್ಶನ್ ಧ್ರುವ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೈಸೂರು ವಿಜಯನಗರ ಮೂರನೇ ಹಂತದಲ್ಲಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ನಿವಾಸಕ್ಕೆ ಬುಧವಾರ ತಮ್ಮ ಪುತ್ರ ಸುನೀಲ್ ಬೋಸ್ ಜೊತೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಡಾ.ಎಚ್.ಸಿ.ಮಹದೇವಪ್ಪ, ದರ್ಶನ್ ಧ್ರುವ ಅವರ ಜೊತೆಗೆ ಮಾತುಕತೆ ನಡೆಸಿ ನಂಜನಗೂಡು ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಹೇಳಿದ್ದಾರೆ.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಎಚ್.ಸಿ.ಮಹದೇವಪ್ಪ, ಸಾವಿನಲ್ಲೂ ರಾಜಕೀಯ ಮಾಡುವ ಉದ್ದೇಶ ನನಗಿಲ್ಲ, ಧ್ರುವನಾರಾಯಣ ಕ್ರಿಯಾಶೀಲ ರಾಜಕಾರಣಿ, ಅವರ ನಿಧನ ದಿಗ್ಬ್ರಮೆ ಉಂಟುಮಾಡಿದೆ. ಅವರ ನಿಧನದ ದಿನವೇ ನಾನು ಮಾನಸಿಕವಾಗಿ ದರ್ಶನ್ ಧ್ರುವ ಅವರಿಗೆ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದ್ದೆ. ಧ್ರುವನಾರಾಯಣ ಅವರ ಅಂತ್ಯ ಸಂಸ್ಕಾರ ಮುಗಿದ ನಂತರ ನಾನೇ ಅವರ ಮನೆಗೆ ಹೋಗಿ ದರ್ಶನ್‍ಗೆ ಬೆಂಬಲ ವ್ಯಕ್ತಪಡಿಸೋಣ ಎಂದು ಸುಮ್ಮನಿದ್ದೆ. ಹಾಗಾಗಿ ಇಂದು ನಾನು ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಬೆಂಬಲ ವ್ಯಕ್ತಪಡಿಸಿದ್ದೇನೆ. ಧ್ರುವನಾರಾಯಣ ಅವರ ಆಸೆಯಂತೆ ಅವರ ಪುತ್ರ ದರ್ಶನ್ ಧ್ರುವ ನೆರವೇರಿಸಲಿ ಎಂದು  ಹೇಳಿದರು.

ನನಗೆ ನನ್ನ ಮಗ ಸುನೀಲ್ ಬೋಸ್ ಬೇರೆ ಅಲ್ಲ, ದರ್ಶನ್ ಧ್ರುವ ಬೇರೆ ಅಲ್ಲ, ಇಬ್ಬರು ಒಂದೇ, ಹಾಗಾಗಿ ನಂಜನಗೂಡು ಕ್ಷೇತ್ರದಿಂದ ದರ್ಶನ್ ಧ್ರುವ ಅವರನ್ನೇ ಕಣಕ್ಕಿಳಿಸಬೇಕು. ನಾನು ಚುನಾವಣೆಯಿಂದ ಹಿಂದೆ ಸರಿದು ಕಾಂಗ್ರೆಸ್ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದರು.

ನಾನು ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದು ನಿಜ, ಕ್ಷೇತ್ರದ ಜನ ನನ್ನ ಮೇಲೂ ವಿಶ್ವಾಸವಿಟ್ಟಿದ್ದರು. ಧ್ರುವನಾರಾಯಣ ಅವರ ಮೇಲೂ ವಿಶ್ವಾಸ ಇಟ್ಟಿದ್ದರು. ಆದರೆ ಹೈಕಮಾಂಡ್ ಇದರ ಬಗ್ಗೆ  ಇನ್ನೂ ತೀರ್ಮಾನ ಕೈಗೊಂಡಿರಲಿಲ್ಲ. ಆದರೆ ಧ್ರುವನಾರಯಣ ಅವರ ಅಕಾಲಿಕ ನಿಧನ ನಮಗೆಲ್ಲಾ ಆಘಾತ ಉಂಟು ಮಾಡಿತು ಎಂದು ಹೇಳಿದರು.

ಧ್ರುವನಾರಾಯಣ ನಿಧನದ ನಂತರ ಕೆಲವು ಕೆಟ್ಟ ಮನಸ್ಸಿನ ವ್ಯಕ್ತಿಗಳು ಇಲ್ಲದ ಸಲ್ಲದ ಆರೋಪಗಳನ್ನು ಮಾಡಿ ಕೆಟ್ಟ ರಾಜಕೀಯ ಮಾಡಿದರು. ಇದು ಎಲ್ಲರ ಮನಸ್ಸಿಗೂ ನೋವುಂಟು ಮಾಡಿತು. ನಾನು ಅಂದೇ ನಂಜನಗೂಡು ಕ್ಷೇತ್ರವನ್ನು ಧ್ರುವನಾರಯಣ ಅವರ ಪುತ್ರ ದರ್ಶನ್ ಧ್ರುವ ಅವರಿಗೆ ಬಿಟ್ಟುಕೊಡಬೇಕು ಎಂದು ನಿರ್ಧಾರ ಮಾಡಿದೆ. ಅದರಂತೆ ಇಂದು ಅವರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದ್ದೇನೆ. ಚುನಾವಣೆಯಲ್ಲಿ ಅವರ ಪರ ಪ್ರಚಾರ ಮಾಡಿ ಅವರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು.

Similar News