×
Ad

ಟಿಪ್ಪು ಕೊಂದಿದ್ದು ಉರಿಗೌಡ, ನಂಜೇಗೌಡ ಎಂದು ಅಶೋಕ್, ಅಶ್ವತ್ಥನಾರಾಯಣ ಸಂಶೋಧನೆ ಮಾಡಿಯೇ ಹೇಳಿದ್ದಾರೆ: ಸಚಿವ ಮುನಿರತ್ನ

Update: 2023-03-15 21:29 IST

ಕೋಲಾರ: 'ಟಿಪ್ಪು ಸುಲ್ತಾನ್‍ನನ್ನು ಉರಿಗೌಡ, ನಂಜೇಗೌಡ ಏಕೆ ಕೊಂದರು ಎನ್ನುವ ಬಗ್ಗೆ ಕಂದಾಯ ಸಚಿವ ಅಶೋಕ್ ಮತ್ತು ಸಚಿವ ಅಶ್ವಥ್‌ ನಾರಾಯಣ್‌ ಅವರು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಸಂಶೋಧನೆ ಮಾಡಿಯೇ ಉರಿಗೌಡ ಟಿಪ್ಪುವನ್ನು ಕೊಂದಿದ್ದು ಎಂದು ಹೇಳಿದ್ದಾರೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ. 

ಬುಧವಾರ  ಕೋಲಾರದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ವಿಚಾರದಲ್ಲಿ ಸತ್ಯವನ್ನು ಮರೆ ಮಾಚಲು ಆಗಲ್ಲ. ಇಷ್ಟು ದಿನ ಇದನ್ನು ಅವರು ಮುಚ್ಚಿಟ್ಟಿದ್ದರು, ಈಗ ಸತ್ಯ ಹೊರಗೆ ಬಂದಿದೆ. ಸತ್ಯ ತಡೆದುಕೊಳ್ಳಲು ಅವರಿಗೆ ಆಗಲ್ಲ' ಎಂದು ಹೇಳಿದರು.

‘ಇಷ್ಟು ದಿನ ಮುಚ್ಚಿಟ್ಟಿದ್ದ ಸತ್ಯ ಈಗ ಹೊರಗಡೆ ಬಂದಿದೆ. ಅದನ್ನು ಸಹಿಸಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಹೊಸ ಇತಿಹಾಸ ಏನೂ ಇಲ್ಲ. ಇತಿಹಾಸವನ್ನು ತಿರುಚಲು ಸಾಧ್ಯವಿಲ್ಲ’ ಎಂದರು.

ಉರಿಗೌಡ ಹಾಗೂ ನಂಜೇಗೌಡ ಎಂಬ ಒಕ್ಕಲಿಗ ರಾಜಕೀಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಏಕೆ ಇನ್ನೂ ಅನುಮಾನವಿದೆ' ಎಂಬುದು ನಮಗೆ ಅರ್ಥವಾಗುತ್ತಿಲ್ಲ’ ಎಂದು ಟೀಕಿಸಿದರು. 

‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸೂಕ್ತ ಸಮಯಕ್ಕೆ ಸೂಕ್ತ ಅಭ್ಯರ್ಥಿಯನ್ನು ನಮ್ಮ ಪಕ್ಷ ಘೋಷಣೆ ಮಾಡುತ್ತದೆ. ಹುಲಿ ಬಿಡಬೇಕೋ ಅಥವಾ ಸಿಂಹ ಬಿಡಬೇಕೋ ಎಂದು ತೀರ್ಮಾನಿಸಿಯೇ ಬಿಡುತ್ತೇವೆ’ ಎಂದು ತಿಳಿಸಿದರು.

Similar News