ಟಿಡಿಆರ್ ಪ್ರಮಾಣ ಪತ್ರ ನೀಡದ ಬಿಡಿಎಯದ್ದು ಈಸ್ಟ್ ಇಂಡಿಯಾ ಕಂಪೆನಿ ಮನಸ್ಥಿತಿ ತೋರಿಸುತ್ತದೆ: ಹೈಕೋರ್ಟ್ ಅಸಮಾಧಾನ

Update: 2023-03-15 16:54 GMT

ಬೆಂಗಳೂರು, ಮಾ.15: ಭೂ ಮಾಲಕರಿಗೆ ವರ್ಗಾವಣೆ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣ ಪತ್ರ ನೀಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಬಿಡಿಎದ ಈ ಕ್ರಮ ಇಂದಿಗೂ ಈಸ್ಟ್ ಇಂಡಿಯಾ ಕಂಪೆನಿಯ ಮನಸ್ಥಿತಿ ಹೊಂದಿರುವುದನ್ನು ಪ್ರತಿಬಿಂಬಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

ಅಭಿವೃದ್ಧಿ ಕಾರ್ಯಗಳಿಗೆ ಜಮೀನು ನೀಡಿದ್ದ ಭೂ ಮಾಲಕರಿಗೆ ಟಿಡಿಆರ್ ನೀಡಲು ಹಿಂಜರಿದಿದ್ದ ಬಿಡಿಎ ಕ್ರಮವನ್ನು ಪ್ರಶ್ನಿಸಿ ಜಯಮ್ಮ ಮತ್ತಿತರರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಹಿಂದೆ ಬಿಡಿಎ ನೀಡಿದ್ದ ಭರವಸೆಯಂತೆ ಟಿಡಿಆರ್ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ನೀಡಿದ್ದ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ಅಲ್ಲದೆ, ಅರ್ಜಿದಾರರಿಗೆ ಟಿಡಿಆರ್ ಪ್ರಮಾಣಪತ್ರಗಳನ್ನು ವಿತರಿಸುವಂತೆ ಸೂಚನೆ ನೀಡಿದೆ.

ಜತೆಗೆ, ಮುಂದಿನ ಮೂರು ತಿಂಗಳಲ್ಲಿ ನ್ಯಾಯಪೀಠದ ಈ ಆದೇಶವನ್ನು ಪಾಲನೆ ಮಾಡಿರುವ ಸಂಬಂಧ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್‍ಗೆ ವರದಿ ಸಲ್ಲಿಸಲು ಬಿಡಿಎ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ನ್ಯಾಯಾಲಯ ನಿಗದಿ ಪಡಿಸಿರುವ ದಿನಾಂಕಕ್ಕೆ ಟಿಡಿಆರ್ ಪ್ರಮಾಣ ಪತ್ರವನ್ನು ಅರ್ಜಿದಾರರಿಗೆ ವಿತರಣೆ ಮಾಡದಿದ್ದಲ್ಲಿ ಬಿಡಿಎ ಆಯುಕ್ತರು ವಿಳಂಬವಾದ ದಿನಗಳಿಗೆ ಪ್ರತಿ ದಿನ 1 ಸಾವಿರ ರೂ.ಗಳಂತೆ ಅರ್ಜಿದಾರರಿಗೆ ದಂಡ ಪಾವತಿಸಬೇಕಾಗುತ್ತದೆ. ಆ ದಂಡದ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಯಿಂದ ನಿಯಮದ ಪ್ರಕಾರ ವಸೂಲು ಮಾಡಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಒಂದು ವೇಳೆ ಸರಕಾರ ನಿಯಮಗಳನ್ನು ಪಾಲಿಸದೆ ಅಭಿವೃದ್ಧಿ ಯೋಜನೆಗಳಿಗೆ ಖಾಸಗಿ ವ್ಯಕ್ತಿಯ ಜಾಗವನ್ನು ಸ್ವಾಧೀನಪಡಿಸಿಕೊಂಡರೆ ಮತ್ತು ಟಿಡಿಆರ್ ಸೌಕರ್ಯ ನಿರಾಕರಿಸಿದರೆ ಅದು ಅವೈಜ್ಞಾನಿಕವಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೆ, ಬಿಡಿಎ ಆದೇಶವನ್ನು ಒಮ್ಮೆ ಓದಿದರೆ ಅದು ಈಸ್ಟ್ ಇಂಡಿಯಾ ಕಂಪೆನಿಯ ಮನಸ್ಥಿತಿಯನ್ನು ಬಿಂಬಿಸುವಂತಿದೆ. ಈ ಬೆಳವಣಿಗೆ ಯಾವೊಬ್ಬ ಅಧಿಕಾರಿಗೆ ಹೃದಯ ಇರಬೇಕಾದ ಜಾಗದಲ್ಲಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. 

Similar News