×
Ad

ಸಂಸದ ಮುನಿಸ್ವಾಮಿ ವಿರುದ್ಧ ದೂರು

Update: 2023-03-15 23:13 IST

ಕೋಲಾರ, ಮಾ.15: ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಮಹಿಳೆಯೊಬ್ಬರ ಮೇಲೆ ಕೂಗಾಡಿದ ಪ್ರಕರಣ ಸಂಬಂಧ ದೂರೊಂದು ಗಲ್‌ಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಮಾನವ ಹಕ್ಕುಗಳ ಮತ್ತು ಸಂಸ್ಕೃತಿ ರಕ್ಷಣಾ ಸಮಿತಿಯ ಮುಖ್ಯಸ್ಥ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಸಂದೀಪ್ ರೆಡ್ಡಿ ಎಂಬವವರು ಬುಧವಾರ ಕೋಲಾರದ ಗಲ್ ಪೇಟೆ ಠಾಣೆಯಲ್ಲಿ ಸಂಸದ ಎಸ್.ಮುನಿಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಮಾ.8ರಂದು ಕೋಲಾರದ ರಂಗಮಂದಿರದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಾರಾಟ ಮಳಿಗೆ ತೆರೆದಿದ್ದ ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆಯ ಸುಜಾತ ಎಂಬವರನ್ನು ಸಾರ್ವಜನಿಕವಾಗಿ ಏನಮ್ಮ ನಿನ್ನ ಹೆಸರು, ಹಣೆಗೆ ಯಾಕೆ ಕುಂಕುಮ ಇಟ್ಟಿಲ್ಲ? ನಿನ್ನ ಗಂಡ ಬದುಕಿದ್ದಾನೆ ತಾನೇ? ಎಂದು ಏರುಧ್ವನಿಯಲ್ಲಿ ಸಂಸದ ಮುನಿಸ್ವಾಮಿ ಕೂಗಾಡಿ ಮಹಿಳೆಯ ಮೇಲೆ ದರ್ಪ ಮೆರೆದಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು ಮಹಿಳಾ ದಿನಾಚರಣೆಯಂದು ಅವಮಾನ ಎಸಗಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧ. ಹಾಗೂ ಈ ಸಂಬಂಧ ತಾವು ಎಷ್ಟೇ ಪ್ರಯತ್ನ ಪಟ್ಟರೂ ಅಂದಿನಿಂದ ಸದರಿ ಸುಜಾತ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಪೊಲೀಸ್ ಇಲಾಖೆ ಸಂಸದ ಎಸ್. ಮುನಿಸ್ವಾಮಿ ಮೇಲೆ ಪ್ರಕರಣ ದಾಖಲು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಸಂಸದ ಮುನಿಸ್ವಾಮಿಯವರು ಬಹಿರಂಗವಾಗಿ ಮಹಿಳೆಯ ಕ್ಷಮೆ ಕೇಳಬೇಕು. ಅಲ್ಲಿಯವರೆಗೆ ಇವರ ವಿರುದ್ಧ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.

Similar News