ನಾಟಕದ ಬಗ್ಗೆ ಅಥವಾ ದೈವದ ವಿರುದ್ಧ ಮಾತನಾಡಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ

Update: 2023-03-16 12:12 GMT

ಶಿವಮೊಗ್ಗ, ಮಾ.16: ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ  ಗುಳಿಗ ದೈವದ ಆಧಾರಿತ "ಶಿವದೂತೆ ಗುಳಿಗೆ" ನಾಟಕ ಕುರಿತು ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸಚಿವರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. 

''ತುಳುನಾಡಿನಲ್ಲಿ ಶ್ರದ್ಧಾಭಕ್ತಿಯಿಂದ ಆರಾಧಿಸುವ ಗುಳಿಗ ದೈವವನ್ನು ಆಧರಿಸಿ, ರಚಿಸಿರುವ ಪೌರಾಣಿಕ ನಾಟಕದ ಬಗ್ಗೆ ನನಗೆ ಅಪಾರ ಭಕ್ತಿ, ಮೆಚ್ಚುಗೆ ಇದೆ. ದೈವಗಳ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿದ್ದೇನೆ. ರಂಗಭೂಮಿಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿ ಪ್ರದರ್ಶನ ನೀಡುತ್ತಿರುವ ಕಲಾವಿದರು ಹಾಗೂ ವಿಶೇಷವಾಗಿ ನಿರ್ದೇಶಕ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಸೃಜನಶೀಲತೆ ಬಗ್ಗೆ ಅಭಿಮಾನ ಇದೆ. ಆದರೆ, ಜನರ ವಿಶ್ವಾಸ ಕಳೆದುಕೊಂಡ ತೀರ್ಥಹಳ್ಳಿಯ ಕಾಂಗ್ರೆಸ್ ನಾಯಕರು, ರಾಜಕೀಯ ದುರುದ್ದೇಶದಿಂದ 'ಶಿವದೂತೆ ಗುಳಿಗೆ' ನಾಟಕ ಪ್ರದರ್ಶನ ಮಾಡಿದ್ದಾರೆ'' ಎಂದು ಆರೋಪಿಸಿದ್ದಾರೆ.

'ಈ ಮೂಲಕ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹತಾಶ ಪ್ರಯತ್ನ ಮಾಡಿರುವುದನ್ನು ಪ್ರಸ್ತಾಪಿಸಿದ್ದೇನೆಯೇ ಹೊರತು, ನಾಟಕದ ಬಗ್ಗೆ ಅಥವಾ ದೈವದ ವಿರುದ್ಧ ಮಾತನಾಡಿಲ್ಲ. ನಾನಾಡಿದ ಮಾತುಗಳಿಗೆ ಅಪಾರ್ಥ ಕಲ್ಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿರುವ ಕುಹಕಿಗಳ ಉದ್ದೇಶ ಈಡೇರುವುದಿಲ್ಲ' ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ'ಶಿವದೂತೆ ಗುಳಿಗೆ' ನಾಟಕಕ್ಕೆ ಅವಮಾನ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ತುಳುನಾಡಿಗರ ಆಕ್ರೋಶ 

Similar News