ದಲಿತನೆಂಬ ಕಾರಣಕ್ಕೆ ಪಕ್ಷದಲ್ಲಿ ಕೆಲವರು ವಿರೋಧಿಸುತ್ತಿದ್ದಾರೆ: ಕಣ್ಣೀರಿಟ್ಟ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ

ಮೂಡಿಗೆರೆ ಬಿಜೆಪಿಯಲ್ಲಿ ಮುಂದವರಿದ ಭಿನ್ನಮತ

Update: 2023-03-16 16:42 GMT

ಮೂಡಿಗೆರೆ, ಮಾ.16: 'ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಲೆ ಕೊಡದೇ  ವಾಪಾಸು ತೆರಳುವಂತೆ ಮಾಡಿದ್ದಾರೆ. ಇದು ತನಗೆ ಬೇಸರ ತಂದಿದೆ' ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. 

ಅವರು ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಪಕ್ಷದಲ್ಲಿ ನೇತೃತ್ವ ಇಲ್ಲದವರು, ಬೆರಳೆಣಿಕೆ ಜನ ವಿಜಯ ಸಂಕಲ್ಪ ಯಾತ್ರೆಗೆ ಅಡ್ಡಿಪಡಿಸಿದ್ದಲ್ಲದೇ ಬಿಜೆಪಿ ಪಕ್ಷಕ್ಕೆ ಅಪಮಾನ ಮಾಡಿದ್ದಾರೆ. ತನಗೆ ಯಡಿಯೂರಪ್ಪ ಅವರು ದೂರ ಕರೆದು ನೀನೇ ಅಭ್ಯರ್ಥಿ. ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳಿದ್ದಾರೆ. ಅವರ ಮಾತಿನಿಂದ ಮನಸ್ಸಿಗೆ ಉಲ್ಲಾಸ ಆಗಿದ್ದರೂ ಇಂದು ನಡೆದ ಘಟನೆ ನೋವು ತಂದಿದೆ' ಎಂದು ಕಣ್ಣೀರಿಟ್ಟರು. 

'ತಾನು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಲೇ ಕಾರ್ಯಕರ್ತರನ್ನು ಬೆಳೆಸಿದ್ದೇನೆ. ಯಾರಿಗೂ ಹಣ ಕೊಟ್ಟು ಕರೆಸಿಕೊಂಡಿಲ್ಲ. ಎಂಎಲ್‍ಸಿ ಮತ್ತು ಎಂಪಿ ವಿರುದ್ಧ ಯಾರೂ ಮಾತನಾಡುವುದಿಲ್ಲ. ಆದರೆ ತಾನೊಬ್ಬ ದಲಿತನೆಂಬ ಕಾರಣಕ್ಕೆ ಸವಾರಿ ಮಾಡುತ್ತಿದ್ದಾರೆ. ಇದು ಕಂಟ್ರಾಕ್ಟ್ ಲಾಭಿ ಬಿಟ್ಟರೆ ಬೇರೇನೂ ಇಲ್ಲವೆಂದು' ಹೇಳಿದರು. 

ಪ.ಪಂ. ಅಧ್ಯಕ್ಷ ಜಿ.ಬಿ.ಧರ್ಮಪಾಲ್, ಸದಸ್ಯ ಸಂದರ್ಶ,  ಮುಖಂಡರಾದ ಕೆಂಜಿಗೆ ಕೇಶವ, ಭರತ್ ಬಾಳೂರು, ವಿಕ್ರಮ್‍ಗೌಡ ಬಣಕಲ್, ಹೆಮ್ಮಕ್ಕಿ ಗಿರೀಶ್, ವಿನೋಧ್ ಕಣಚೂರು, ನಾಗೇಶ್‍ಗೌಡ, ಆದರ್ಶ ಮತ್ತಿತರರಿದ್ದರು. 

Full View

Similar News