ಹೈಕೋರ್ಟ್ ಆದೇಶದ ಬೆನ್ನಲ್ಲೇ 5, 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ ಪ್ರಕಟ: ಮಾ.27ರಿಂದ ಆರಂಭ

Update: 2023-03-16 15:20 GMT

ಬೆಂಗಳೂರು, ಮಾ.16: ಹೈಕೋರ್ಟ್ ಆದೇಶದ ಬೆನ್ನಲ್ಲೇ ಪ್ರಸಕ್ತ ವರ್ಷದಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೆ ತರಗತಿಯ ವಿದ್ಯಾರ್ಥಿಗಳಿಗೆ ಮಾ.27ರಿಂದ ಎ.1ರ ವರೆಗೆ ಪಬ್ಲಿಕ್ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆಯು ಗುರುವಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ. 

ಈ ಹಿಂದೆ ಸರಕಾರವು 5 ಮತ್ತು 8ನೆ ತರಗತಿಯ ವಿದ್ಯಾರ್ಥಿಗಳಿಗೆ ಮಾ.13ರಿಂದ ಪರೀಕ್ಷೆ ನಡೆಸುವುದಾಗಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ ಶಿಕ್ಷಣ ಸಂಸ್ಥೆಗಳ ಸಂಘಟನೆಯು ಪರೀಕ್ಷೆಯನ್ನು ರದ್ದುಪಡಿಸುವಂತೆ ಹೈಕೋರ್ಟ್ ಮೆಟ್ಟಿಲೇರಿತ್ತು. ಮೊದಲು ಸರಕಾರದ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಟ್‍ನ ಏಕ ಸದಸ್ಯ ಪೀಠವು ರದ್ದುಪಡಿಸಿತ್ತು. ನಂತರ ವಿಭಾಗೀಯ ಪೀಠವು ಪರೀಕ್ಷೆಯನ್ನು ನಡೆಸುವಂತೆ ಸೂಚಿಸಿತು. ಹಾಗಾಗಿ ಸರಕಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ.

5ನೆ ತರಗತಿಯ ವಿದ್ಯಾರ್ಥಿಗಳಿಗೆ ಮಾ.27ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು ಮತ್ತು ತೆಮಿಳು ಭಾಷಾ ಪರೀಕ್ಷೆಗಳು ಹಾಗೂ ಮಾ.28ರಂದು ದ್ವಿತೀಯ ಭಾಷೆ ಇಂಗ್ಲೀಷ್ ಮತ್ತು ಕನ್ನಡ ಪರೀಕ್ಷೆಗಳು ನಡೆಯುತ್ತವೆ. ಮಾ.29ರಂದು ಪರಿಸರ ಅಧ್ಯಯನ ಮತ್ತು ಮಾ.30ರಂದು ಗಣಿತ ಪರೀಕ್ಷೆ ನಡೆಯುತ್ತದೆ. 

8ನೆ ತರಗತಿಯ ವಿದ್ಯಾರ್ಥಿಗಳಿಗೆ ಮಾ.27ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಮರಾಠಿ, ಸಂಸ್ಕೃತ, ತೆಲುಗು ಮತ್ತು ತಮಿಳು ಭಾಷಾ ಪರೀಕ್ಷೆಗಳು ಹಾಗೂ ಮಾ.28ರಂದು ದ್ವಿತೀಯ ಭಾಷೆ ಇಂಗ್ಲೀಷ್ ಮತ್ತು ಕನ್ನಡ ಪರೀಕ್ಷೆಗಳು ನಡೆಯುತ್ತವೆ. 

ಮಾ.29ರಂದು ತೃತೀಯ ಭಾಷೆ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಅರೇಬಿಕ್, ಪರ್ಷಿಯನ್, ಮರಾಠಿ, ಸಂಸ್ಕøತ, ಕೊಂಕಣಿ ಮತ್ತು ತುಳು ಭಾಷಾ ಪರೀಕ್ಷೆಗಳು ಮತ್ತು ಮಾ.30ರಂದು ಗಣಿತ ಪರೀಕ್ಷೆ ನಡೆಯಲಿವೆ. ಮಾ.31ರಂದು ವಿಜ್ಞಾನ ಮತ್ತು ಎ.1ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. 

ಆಯಾ ಶಾಲೆಗಳನ್ನೇ ಪರೀಕ್ಷಾ ಕೇಂದ್ರಗಳಾಗಿ ಮಾಡಲಾಗಿದೆ. ಎರಡೂ ತರಗತಿಗಳ ಗಣಿತ ವಿಷಯ ಹೊರತುಪಡಿಸಿ ಎಲ್ಲ ಪರೀಕ್ಷೆಗಳು ಮ.2.30ರಿಂದ ಮ.4.30ರವರೆಗೆ ನಡೆಯಲಿವೆ. ಗಣಿತ ಪರೀಕ್ಷೆಯು ಬೆ.10.30ರಿಂದ ಮ.12.30ರವರೆಗೆ ನಡೆಯಲಿವೆ. 

ಕಲಿಕಾ ನ್ಯೂನ್ಯತೆಯನ್ನು ತಿಳಿಯಲು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸದೆ, ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗುವುದು. ಪಬ್ಲಿಕ್ ಪರೀಕ್ಷೆಯ ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುವುದು. ಈ ಮೂಲಕ ಫಲಿತಾಂಶದ ಗೌಪ್ಯತೆ ಕಾಪಾಡಲಾಗುವುದು ಎಂದು ಶಿಕ್ಷಣ ಇಲಾಖೆಯು ತಿಳಿಸಿದೆ. 

Similar News