ಗಡಿ ಕನ್ನಡಿಗರಿಗೆ ಆರೋಗ್ಯ ವಿಮೆ; ಮಹಾರಾಷ್ಟ್ರ ಸರಕಾರ ವಜಾಕ್ಕೆ ಸಿದ್ದರಾಮಯ್ಯ, ಡಿಕೆಶಿ ಆಗ್ರಹ

Update: 2023-03-16 17:04 GMT

ಬೆಂಗಳೂರು, ಮಾ. 16: ‘ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳ ದುಷ್ಟ, ನೀಚ, ಕೆಟ್ಟ ಷಡ್ಯಂತ್ರವು ರಾಜ್ಯವನ್ನು ನುಚ್ಚು ನೂರಾಗಿಸಿದೆ. ಬಿಜೆಪಿ ಸರಕಾರಗಳು ಕರ್ನಾಟಕ ಭೂ ಪ್ರದೇಶವನ್ನು ಹಲವು ತುಂಡುಗಳನ್ನಾಗಿ ವಿಭಜಿಸಿ ರಾಜ್ಯವನ್ನು ಕಬಳಿಸಲು ಪ್ರಯತ್ನಿಸುತ್ತಿವೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಗುರುವಾರ ಪ್ರಕಟನೆ ನೀಡಿರುವ ಉಭಯ ನಾಯಕರು, ‘ಮಹಾರಾಷ್ಟ್ರದ ಬಿಜೆಪಿ ಸರಕಾರ ಕರ್ನಾಟಕ ಗಡಿಭಾಗದ 864 ಗ್ರಾಮಗಳಲ್ಲಿ ತನ್ನ ಯೋಜನೆ ಜಾರಿಗೆ ಮುಂದಾಗಿದೆ. ಇದಕ್ಕಾಗಿ 54 ಕೋಟಿ ರೂ.ಹಣ ಬಿಡುಗಡೆ ಮಾಡಿರುವುದು ಬಿಜೆಪಿಯ ಷಡ್ಯಂತ್ರವನ್ನು ಸ್ಪಷ್ಟಪಡಿಸಿದೆ. ಮಹಾರಾಷ್ಟ್ರ ಸರಕಾರದ ಈ ನಡೆ ರಾಜ್ಯದ 6.5ಕೋಟಿ ಕನ್ನಡಿಗರ ಸ್ವಾಭಿಮಾನ ಹಾಗೂ ಪ್ರಾದೇಶಿಕ ಸಮಗ್ರತೆಗೆ ಪೆಟ್ಟು ನೀಡಿದೆ’ ಎಂದು ದೂರಿದ್ದಾರೆ.

‘ಬಿಜೆಪಿಯ ಈ ಕುತಂತ್ರದ ವಿರುದ್ಧ ಪ್ರತಿಯೊಬ್ಬ ಕನ್ನಡಿಗನು ತನ್ನ ಕೊನೆಯುಸಿರಿರುವರೆಗೂ ಹೋರಾಟ ಮಾಡಲಿದ್ದಾನೆ. ಬಿಜೆಪಿಯು ಕರ್ನಾಟಕ ರಾಜ್ಯವನ್ನು ವಿಭಜಿಸಲು ಹಾಗೂ ನಮ್ಮ ಭೂ ಪ್ರದೇಶವನ್ನು ಕಬಳಿಕೆ ಮಾಡಲು ನಾವು ಬಿಡುವುದಿಲ್ಲ. ಕರ್ನಾಟಕದ ಸ್ವಾಭಿಮಾನ, ಗೌರವ ಹಾಗೂ ಭೂಪ್ರದೇಶ ಸಂರಕ್ಷಿಸಲು ಕಾಂಗ್ರೆಸ್ ಪಕ್ಷ ಹಾಗೂ ಅದರ ಕಾರ್ಯಕರ್ತರು ತಮ್ಮ ಪ್ರಾಣತ್ಯಾಗಕ್ಕೆ ಸಿದ್ಧರಾಗಿದ್ದಾರೆ. ಬಿಜೆಪಿಯ ಕುತಂತ್ರ ಯಶಸ್ಸಿಗೆ ನಾವು ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಕರ್ನಾಟಕ ವಿಭಜಿಸಿ ರಾಜ್ಯದ ಭೂಪ್ರದೇಶ ಕಿತ್ತುಕೊಳ್ಳುವ ಬಿಜೆಪಿಯ ಷಡ್ಯಂತ್ರಕ್ಕೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆಗಾರರಾಗಿದ್ದಾರೆ. ಕರ್ನಾಟಕದ ಅಸ್ಮಿತೆ ಮೇಲೆ ಬಿಜೆಪಿ ಪೈಶಾಚಿಕ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದ ಜನ ಮೋದಿ ಹಾಗೂ ಅಮಿತ್ ಶಾ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮತಿಯೊಂದಿಗೆ ಮಹಾರಾಷ್ಟ್ರ ಸರಕಾರವು ಹಾಡಹಗಲಲ್ಲೇ ಸಂವಿಧಾನದ ಕಗ್ಗೊಲೆ ಮಾಡಿದೆ’ ಎಂದು ಅವರುಗಳು ದೂರಿದ್ದಾರೆ.

‘ರಾಜ್ಯಗಳ ಪ್ರಾದೇಶಿಕ ಗೌರವ ಎತ್ತಿಹಿಡಿಯುವ ಸಂವಿಧನಾತ್ಮಕ ತತ್ವಗಳನ್ನು ಬಿಜೆಪಿ ಸರಕಾರ ನಾಶಪಡಿಸುತ್ತಿದೆ. ಮಹಾರಾಷ್ಟ್ರ ಸರಕಾರ ತನ್ನ ಯೋಜನೆಯನ್ನು ಕರ್ನಾಟಕದ ಗ್ರಾಮಗಳಲ್ಲಿ ಜಾರಿ ಮಾಡಲು ಮುಂದಾಗಿರುವುದು ಕಾನೂನು ಉಲ್ಲಂಘನೆ, ಅರಾಜಕತೆ ಸೃಷ್ಟಿ ಹಾಗೂ ಭಾರತದ ಸಂವಿಧಾನದ ಆಶಯಗಳನ್ನು ಸರ್ವನಾಶ ಮಾಡುವ ಪ್ರಯತ್ನ. ಭಾರತ ಸಂವಿಧಾನದ ಪರಿಚ್ಛೇದ 356ರ ಅಡಿಯಲ್ಲಿ ಮಹಾರಾಷ್ಟ್ರದ ಬಿಜೆಪಿ ಹಾಗೂ ಶಿಂಧೆ ಸರಕಾರವನ್ನು ಕಿತ್ತೊಗೆಯಲು ಇದು ಸೂಕ್ತ ಪ್ರಕರಣ. ಹೀಗಾಗಿ ರಾಷ್ಟ್ರಪತಿಗಳು ಒಂದು ನಿಮಿಷ ವ್ಯರ್ಥ ಮಾಡದೆ ಮಹಾರಾಷ್ಟ್ರ ಸರಕಾರ ವಜಾಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಮಹಾರಾಷ್ಟ್ರ ಸರಕಾರವನ್ನು ಪ್ರಧಾನಿ, ಕೇಂದ್ರ ಗೃಹ ಸಚಿವರು ಹಾಗೂ ರಾಷ್ಟ್ರಪತಿಗಳು ವಜಾಗೊಳಿಸದಿದ್ದರೆ, ಕರ್ನಾಟಕ ರಾಜ್ಯವನ್ನು ವಿಭಜಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂಬುದು ಸಾಬೀತಾಗುತ್ತದೆ. ಇಷ್ಟೆಲ್ಲಾ ಆದರೂ ಅಂಜುಬುರುಕ, ನಿಶ್ಯಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟ ಸಚಿವರು ತಮ್ಮ ಕುರ್ಚಿಗೆ ಅಂಟಿಕೊಂಡು ಕೂತಿರುವುದು ನಾಚಿಕೆಗೇಡಿನ ವಿಚಾರ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬೊಮ್ಮಾಯಿ ಸರಕಾರವು ಮಹಾರಾಷ್ಟ್ರ ಬಿಜೆಪಿ ಸರಕಾರದ ಉದ್ದೇಶಪೂರ್ವಕ ಷಡ್ಯಂತ್ರದಿಂದ ರಾಜ್ಯದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತಿರುವುದನ್ನು ನೋಡಿಕೊಂಡು ಕೂತಿದೆ. ಅಲ್ಲದೆ, ಅವರಿಗೆ ಹೆದರಿಕೊಂಡು ಒಂದೇ ಒಂದು ಮಾತನಾಡದೆ ಮೌನಕ್ಕೆ ಶರಣಾಗಿದೆ. ಸಿಎಂ ಬೊಮ್ಮಾಯಿ ಹಾಗೂ ಸಂಪುಟದ ಸಚಿವರಿಗೆ ಕಿಂಚಿತ್ತಾದರೂ ಮಾನ ಮರ್ಯಾದೆ ಉಳಿದಿದ್ದರೆ, ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ ಸಾರ್ವಭೌಮತ್ವ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಹಾಗೂ ಜನರ ಹೋರಾಟಕ್ಕೆ ಕೈಜೋಡಿಸಬೇಕು’ ಎಂದು ಅವರುಗಳು ಕರೆ ನೀಡಿದ್ದಾರೆ.

‘ರಾಜ್ಯದ ಭೂಪ್ರದೇಶ ಹಾಗೂ ಗೌರವದ ಮೇಲೆ ನಡೆದಿರುವ ಈ ದಾಳಿಗೆ ಕೇಂದ್ರ ಸರಕಾರದ 4 ಸಚಿವರು ಹಾಗೂ ಎಲ್ಲ 26 ಸಂಸದರು (ಪಕ್ಷೇತರ ಸಂಸದೆ ಸೇರಿ) ಕಾರಣರಾಗಿದ್ದಾರೆ. ರಾಜ್ಯದ ಘನತೆ ರಕ್ಷಣೆ ಜವಾಬ್ದಾರಿ ನಿಭಾಯಿಸುವಲ್ಲಿ ಇವರು ವಿಫಲರಾಗಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಜನರೇ ಅವರನ್ನು ಕಿತ್ತೊಗೆಯಲಿದ್ದಾರೆ. ಈ ಎಲ್ಲ ಘಟನೆಗಳ ಮೂಲಕ ಬಿಜೆಪಿಗೆ ಹಾಕುವ ಮತ ರಾಜ್ಯವನ್ನು ವಿಭಜಿಸಲು, ಆಮೂಲಕ ನಮ್ಮ ಭೂಪ್ರದೇಶ ಕಿತ್ತುಕೊಳ್ಳುವ, ನಮ್ಮ ಸಂಸ್ಕೃತಿ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರಲು ಮತ ಹಾಕಿದಂತಾಗುತ್ತದೆ’ ಎಂದು ಅವರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬಿಜೆಪಿಯನ್ನು ಮುಲಾಜಿಲ್ಲದೆ ಕಿತ್ತೊಗೆದು, ನಮ್ಮ ಸಾರ್ವಭೌಮತೆ ಹಾಗೂ ಗೌರವಕ್ಕೆ ಧಕ್ಕೆ ತರುವ ಪ್ರಯತ್ನಕ್ಕೆ ತಕ್ಕ ಪಾಠ ಕಲಿಸುವ ಸಮಯಾವಕಾಶ ಬಂದಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷವು ನಮ್ಮ ಪ್ರತಿಯೊಂದು ಇಂಚು ಭೂಮಿ, ನಮ್ಮ ಸಂಸ್ಕೃತಿ, ನಮ್ಮ ಆತ್ಮಗೌರವ ರಕ್ಷಣೆಗೆ ಬದ್ಧವಾಗಿದೆ. ಹೀಗಾಗಿ ನಾವು ಬಿಜೆಪಿಯನ್ನು ಸೋಲಿಸಲಿದ್ದೇವೆ. ಬದಲಾವಣೆಗಾಗಿ, ಅವಿಭಾಜ್ಯ ಕರ್ನಾಟಕಕ್ಕಾಗಿ, ಕನ್ನಡಿಗರ ಗೌರವ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ’ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

Similar News