ಸರಕಾರಿ ಭೂಮಿ ರಕ್ಷಣೆಗೆ ನಿಜವಾಗಿಯೂ ಆಸಕ್ತಿ ಇದೆಯೇ ಎಂಬುದನ್ನು ತಿಳಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

ಎಚ್‍ಡಿಕೆ ವಿರುದ್ಧದ ಭೂಕಬಳಿಕೆ ಪ್ರಕರಣ

Update: 2023-03-16 17:29 GMT

ಬೆಂಗಳೂರು, ಮಾ.16: ಸರಕಾರಿ ಜಮೀನುಗಳ ರಕ್ಷಣೆ ಮಾಡುವ ಸಂಬಂಧ ರಾಜ್ಯ ಸರಕಾರಕ್ಕೆ ನಿಜವಾಗಿಯೂ ಆಸಕ್ತಿ ಇದೆಯೇ ಎಂಬುದರ ಕುರಿತು ನ್ಯಾಯಪೀಠಕ್ಕೆ ತಿಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. 

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಅವರ ಸಂಬಂಧಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರ ವಿರುದ್ಧದ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯ ಸರಕಾರಿ ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಜಮೀನು ಕಬಳಿಕೆ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಸೂಕ್ತ ಮಾಹಿತಿಯುಳ್ಳ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಆರೋಪಿಸಿರುವ ಜಮೀನು ಒತ್ತುವರಿಯಾಗಿದೆ ಎಂದು ತಹಸೀಲ್ದಾರ್ ಅವರು 2004ರಲ್ಲಿ ಆದೇಶ ನೀಡಿದ್ದಾರೆ. ಲೋಕಾಯುಕ್ತ 2014ರ ಆಗಸ್ಟ್ 5ರಂದು ಆದೇಶ ನೀಡಿದೆ. 2020ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶವನ್ನು ಎತ್ತಿಹಿಡಿದಿದೆ. ಪ್ರಕರಣ ಮುನ್ನೆಲೆಗೆ ಬಂದು 19 ವರ್ಷ ಕಳೆದಿದೆ. ಸರಕಾರವು 14 ಎಕರೆ ಒತ್ತುವರಿ ಸಂಬಂಧ ಇದೀಗ ಪ್ರಮಾಣ ಪತ್ರ ಸಲ್ಲಿಸುತ್ತಿದೆ, ಇಷ್ಟೊಂದು ವಿಳಂಬ ಏಕೆ ಎಂದು ಕೋರ್ಟ್ ಪ್ರಶ್ನಿಸಿತು.

ಸಣ್ಣ ವ್ಯಕ್ತಿಗಳ ವಿಚಾರದಲ್ಲಿ ಒಂದೇ ದಿನ ಕ್ರಮ ಕೈಗೊಳ್ಳುತ್ತೀರಿ, ದೊಡ್ಡ ವ್ಯಕ್ತಿಗಳಾದರೆ ಈ ರೀತಿ ವಿಳಂಬ ಮಾಡುತ್ತೀರಿ. ನ್ಯಾಯಾಲಯದ ಆದೇಶವನ್ನು ಸರಕಾರ ಅನುಷ್ಠಾನ ಮಾಡದಿದ್ದರೆ ನ್ಯಾಯಾಲಯವೇ ಅದನ್ನು ಅನುಷ್ಠಾನ ಮಾಡಲಿದೆ ಎಂದು ಪೀಠವು ತಿಳಿಸಿತು.

ವಿಚಾರಣೆ ವೇಳೆ ಹಾಜರಿದ್ದ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರನ್ನು ಉದ್ದೇಶಿಸಿದ ನ್ಯಾಯಪೀಠ, ಅವರು ಪ್ರಾಮಾಣಿಕರಾಗಿದ್ದು ಅವರಿಗೆ ಮುಕ್ತವಾಗಿ ಅವಕಾಶ ನೀಡಿದಲ್ಲಿ ತಮ್ಮ ಸೇವೆಯಲ್ಲಿ ಅದ್ಭುತವನ್ನು ನಿರ್ಮಾಣ ಮಾಡಲಿದ್ದಾರೆ ಎಂದು ನ್ಯಾಯಪೀಠ ಸೂಚನೆ ನೀಡಿತು. 

ಪ್ರಕರಣವೇನು?: ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ವಿವಿಧ ಸರ್ವೆ ನಂಬರ್‍ಗಳಲ್ಲಿ 14 ಎಕರೆಗೂ ಹೆಚ್ಚು ಸರಕಾರಿ ಜಮೀನನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಜಿ.ಮಾದೇಗೌಡ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ಬಗ್ಗೆ ತನಿಖೆ ನಡೆಸಬೇಕು ಎಂದು ಲೋಕಾಯುಕ್ತರು ಕಂದಾಯ ಇಲಾಖೆಗೆ 2014ರಲ್ಲಿ ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಆದರೆ, ಹೈಕೋರ್ಟ್ ಆದೇಶವನ್ನು ಸರಕಾರ ಈವರೆಗೂ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಈ ಅರ್ಜಿ ಸಲ್ಲಿಸಲಾಗಿದೆ. 

Similar News