ಕುಶಾಲನಗರ | ದಲಿತ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣ: ಪತಿಯ ಮನೆ ಮುಂದೆ ಮೃತದೇಹವಿರಿಸಿ ಪ್ರತಿಭಟನೆ

Update: 2023-03-16 17:48 GMT

ಕುಶಾಲನಗರ, ಮಾ.16 : ದಲಿತ ಯುವತಿಯ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಯುವತಿಗೆ ನ್ಯಾಯ ಒದಗಿಸಿಕೊಡುವಂತೆ ಯುವತಿಯ ಕುಟುಂಬಸ್ಥರು, ದಲಿತ ಸಂಘಟನೆಗಳ ಪ್ರಮುಖರು ಪತಿಯ ಮನೆ ಮುಂಭಾಗ ಯುವತಿಯ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದರು ಎಂದು ವರದಿಯಾಗಿದೆ.

ಅಂತರ್ಜಾತಿ ವಿವಾಹವಾಗಿದ್ದ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಅಕ್ಷಿತಾ ಎಂಬಾಕೆ ಪತಿಯ ಮನೆ ಸೇರಿದ ನಾಲ್ಕೇ ದಿನದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು. ಕೊಲೆ ಎಂದು ಆರೋಪಿಸಿ, ಯುವತಿಯ ಕುಟುಂಬಸ್ಥರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆ ವಿವಾಹವಾದ ಯುವಕ ಹೇಮಂತ್ ಹಾಗೂ ಆತನ ತಂದೆ, ತಾಯಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಹೇಮಂತ್ ಕ್ರಿಮಿನಾಶಕ ಸೇವಿಸಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಗುರುವಾರ ಯುವಕನ ತಾಯಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ತಂದೆಯನ್ನು ಬಂಧಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಅಕ್ಷಿತಾ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ದಲಿತ ಸಂಘಟನೆಗಳ ಪ್ರಮುಖರು ಬೆಂಬಲಕ್ಕೆ ನಿಂತರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಎಸ್ಪಿ ಸುಂದರರಾಜ್, ಕುಶಾಲನಗರ ಪೊಲೀಸ್ ಡಿವೈಎಸ್ಪಿ ಗಂಗಾಧರಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜಶೇಖರ್ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಯುವತಿಯ ಶವವನ್ನು ಹೇಮಂತ್‌ಗೆ ಸೇರಿದ ಜಾಗದಲ್ಲಿ ಸಂಸ್ಕಾರ ಮಾಡುವ ಮೂಲಕ ಕುಟುಂಬಸ್ಥರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ತಕ್ಷಣ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ದಲಿತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು ನಂತರ ಪ್ರತಿಭಟನೆಯಿಂದ ಹಿಂದೆ ಸರಿದರು

Similar News