ಆನೆಯ ಪಿಸುಗುಟ್ಟುವಿಕೆ ಕೇಳುವವರಿಲ್ಲ

Update: 2023-03-17 05:41 GMT

ಅಭಿವೃದ್ಧಿಯ ಭರಾಟೆಯಲ್ಲಿ ಬೆಳ್ಳಿ-ಬೊಮ್ಮನ್ ಮತ್ತು ರಘು-ಬೊಮ್ಮಿ ನೆಲೆ ಕಳೆದುಕೊಂಡು, ದಿಕ್ಕು ತಪ್ಪುವುದು ಆಶ್ಚರ್ಯ ಹುಟ್ಟಿಸುವುದಿಲ್ಲ; ನಮ್ಮ ಆತ್ಮಸಾಕ್ಷಿಯನ್ನು ಕೆಣಕುವುದಿಲ್ಲ. ಜೋಷಿಮಠದಲ್ಲಿ ಸಂಭವಿಸಿದ ಭೂಕುಸಿತ ಇಲ್ಲಿ ಮರುಕಳಿಸುವವರೆಗೆ ಜಡತ್ವ ಮುಂದುವರಿಯುತ್ತದೆ. ಕೆಲಕಾಲಾನಂತರ ಅದು ಕೂಡ ಮರೆತುಹೋಗಿ, ‘ಎಂದಿನಂತೆ ವಹಿವಾಟು’ ಮುಂದುವರಿಯುತ್ತದೆ.

‘ದ ಎಲಿಫೆಂಟ್ ವಿಸ್ಪರರ್ಸ್’ಗೆ ಆಸ್ಕರ್ ಪುರಸ್ಕಾರ ಬಂದ ಬಳಿಕ ತಮಿಳುನಾಡಿನ ಮುದುಮಲೈ ತೆಪ್ಪಕಾಡು ಶಿಬಿರದ ಬೆಳ್ಳಿ-ಕೆ.ಬೊಮ್ಮನ್ ದಂಪತಿ, 7 ವರ್ಷದ ಆನೆ ರಘು ಹಾಗೂ ಕಾರ್ತಿಕಿ ಗೊನ್ಸಾಲ್ವೆಸ್-ಗುನೀತ್ ಮೊಂಗಾ ಮನೆಮಾತಾಗಿದ್ದಾರೆ. ಕಟ್ಟುನಾಯಕರ್ ಆದಿವಾಸಿ ಸಮುದಾಯಕ್ಕೆ ಸೇರಿದ ಬೆಳ್ಳಿ-ಬೊಮ್ಮನ್ ಈಗ ತೆಪ್ಪಕಾಡು ಆನೆ ಶಿಬಿರದಲ್ಲಿ ಇಲ್ಲ. ಮದ್ರಾಸ್ ಹೈಕೋರ್ಟ್ ಆದೇಶದನ್ವಯ ಇನ್ನೆರಡು ಮರಿಯಾನೆಗಳನ್ನು ಹುಡುಕುತ್ತ ಧರ್ಮಪುರಿಯ ಪಾಲಕೊಡ್ಡೆ ಕಾಡಿನಲ್ಲಿದ್ದಾರೆ. ಅವೆರಡು ಮರಿಯಾನೆಗಳ ತಾಯಂದಿರು ತೋಟಕ್ಕೆ ಅಳವಡಿಸಿದ್ದ ಅಕ್ರಮ ವಿದ್ಯುತ್ ಬೇಲಿಗೆ ಬಲಿಯಾಗಿದ್ದವು.

ಈಗ ‘ದ ಎಲಿಫೆಂಟ್ ವಿಸ್ಪರರ್ಸ್’ನಲ್ಲಿ ಕಥೆಯಾಗಿರುವ ರಘು ಎಂಬ ಮರಿಯಾನೆ ಮೇ 2017ರಲ್ಲಿ ತೆಪ್ಪಕಾಡಿಗೆ ಬಂದಾಗ 3 ತಿಂಗಳಿನದ್ದಾಗಿತ್ತು. ಅವನ ತಾಯಿಯೂ ಕೃಷ್ಣಗಿರಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಳು. ದಂಪತಿ ಬಳಿ ಇದ್ದ ಇನ್ನೊಂದು ಆನೆ ಮರಿ ಬೊಮ್ಮಿ, ಸತ್ಯಮಂಗಲಂನಿಂದ ಜೂನ್ 2019ರಲ್ಲಿ ತೆಪ್ಪಕಾಡಿಗೆ ಬಂದಾಗ ಆಕೆಗೆ 5 ತಿಂಗಳು.

ಮರಿಯಾನೆಯೊಂದರ ಕಥನವೊಂದನ್ನು ನವಿರಾಗಿ ಹೇಳಿದ ಕಾರ್ತಿಕಿ ಗೊನ್ಸಾಲ್ವೆಸ್ ಅವರಿಗೆ ಧನ್ಯವಾದ ಹೇಳುತ್ತಲೇ, ಕೇಳಲೇಬೇಕಾದ ಪ್ರಶ್ನೆಯೆಂದರೆ, ಈ ಅತ್ಯಂತ ಸೂಕ್ಷ್ಮ, ಸೌಮ್ಯ ಹಾಗೂ ಸ್ಥೂಲ ಜೀವಿಗಳೇಕೆ ಊರಿಗೆ ನುಗ್ಗುತ್ತವೆ? ಜನರ ಮೇಲೆ ದಾಳಿ ನಡೆಸುತ್ತವೆ? ಇದಕ್ಕೆ ಉತ್ತರ- ಜೀವಾವಾಸಕ್ಕೆ ಧಕ್ಕೆ, ಆಹಾರದ ಕೊರತೆ, ಅರಣ್ಯಗಳಲ್ಲಿ ಜಲಮೂಲ ಬರಿದಾಗಿರುವುದು, ಅಭಿವೃದ್ಧಿ ಯೋಜನೆಗಳು/ಉದ್ಯಮ-ಕೃಷಿ ಹಾಗೂ ರಸ್ತೆ ಮತ್ತಿತರ ಮೂಲಸೌಲಭ್ಯ ನಿರ್ಮಾಣಕ್ಕೆ ಕಾಡಿನ ಹನನ, ಆನೆಗಳು ಸಂಚರಿಸುವ ಕಾರಿಡಾರ್ ಭಗ್ನಗೊಂಡಿರುವುದು. ದೇಶದ 14 ರಾಜ್ಯಗಳ 32 ಆನೆ ಸಂರಕ್ಷಿತ ಅರಣ್ಯಗಳಲ್ಲಿ ಅಂದಾಜು 30,000 ಆನೆಗಳಿವೆ. ಇದರಲ್ಲಿ ಶೇ.30ರಷ್ಟು ಮಾತ್ರ ದೊಡ್ಡ/ಹೊಂದಿಕೊಂಡಂತೆ ಇರುವ ಕಾಡುಗಳಲ್ಲಿ ಇವೆ. ಉಳಿದವು ಕೃಷಿ ಸೇರಿದಂತೆ ಮಾನವ ಹಸ್ತಕ್ಷೇಪದಿಂದ ಛಿದ್ರಗೊಂಡ ಕಾಡುಗಳಲ್ಲಿ ವಾಸಿಸುತ್ತವೆ. ಕಳೆದ 5 ವರ್ಷದಲ್ಲಿ(2017-18ರಿಂದ 2021-22) 494 ಆನೆಗಳು ಅಪಘಾತ/ವಿಷಪ್ರಾಶನ/ವಿದ್ಯುತ್ ಸ್ಪರ್ಶ/ಬೇಟೆಗೆ ಬಲಿಯಾಗಿವೆ. 2020-21ರಲ್ಲಿ 14 ಆನೆಗಳು ಬೇಟೆಗೆ ಬಲಿಯಾಗಿವೆ(ಪರಿಸರ ಸಚಿವ ಅಶ್ವಿನ್ ಕುಮಾರ್ ಚೌಬೆ, ಲೋಕಸಭೆ). ಕೇರಳದ ಆರ್‌ಟಿಐ ಕಾರ್ಯಕರ್ತ ಕೆ.ಗೋವಿಂದನ್ ನಂಬೂದಿರಿ ಅವರಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2014-22ರ ಅವಧಿಯಲ್ಲಿ 3,938 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ.

2012ರಲ್ಲಿ ಯುನೆಸ್ಕೋ ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿತು. ಒಂಭತ್ತು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ ಶೇ.40ರಷ್ಟು ಭಾಗ ಕರ್ನಾಟಕದಲ್ಲಿದೆ. ಘಟ್ಟಗಳಲ್ಲಿ ಸರಣಿಯೋಪಾದಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಹೇರಲಾಗುತ್ತಿದೆ. ಉಡುಪಿ ಜಿಲ್ಲೆಯ ಕೊಡಚಾದ್ರಿ ಪರ್ವತಕ್ಕೆ ರೋಪ್‌ವೇ ನಿರ್ಮಾಣಕ್ಕೆ ಕಾರ್ಯಸಾಧ್ಯತೆ ಅಧ್ಯಯನ ನಡೆದಿದೆ. ಕರ್ನಾಟಕ 15 ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಸಚಿವ ನಿತಿನ್ ಗಡ್ಕರಿ ಫೆಬ್ರವರಿ 2023ರಲ್ಲಿ ಲೋಕಸಭೆಯಲ್ಲಿ ಹೇಳಿದ್ದರು. ಕೊಡಚಾದ್ರಿಯಲ್ಲದೆ, ನಂದಿಬೆಟ್ಟ(ಚಿಕ್ಕಬಳ್ಳಾಪುರ), ಮುಳ್ಳಯ್ಯನಗಿರಿ/ಕೆಮ್ಮಣ್ಣುಗುಂಡಿ(ಚಿಕ್ಕಮಗಳೂರು), ಚಾಮುಂಡಿ ಬೆಟ್ಟ(ಮೈಸೂರು), ದೇವರಾಯನದುರ್ಗ/ಮಧುಗಿರಿ ಕೋಟೆ(ತುಮಕೂರು), ಅಂಜನಾದ್ರಿ ಬೆಟ್ಟ(ಕೊಪ್ಪಳ), ಜೋಗ, ಶರಾವತಿ ಹಿನ್ನೀರು(ಶಿವಮೊಗ್ಗ), ಯಾಣ, ಜೋಯ್ಡಾ ಮತ್ತು ಚಪೇರಿ(ಉತ್ತರ ಕನ್ನಡ), ಕುಮಾರಪರ್ವತ(ಕೊಡಗು) ಹಾಗೂ ಬೆಳಗಾವಿಯ ರಾಜ್‌ಹೌಸ್‌ಘಡದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ನಂದಿ ಬೆಟ್ಟ ಆರು ನದಿಗಳ (ಅರ್ಕಾವತಿ, ದಕ್ಷಿಣ ಪಿನಾಕಿನಿ ಅಥವಾ ಪೊನ್ನಿಯಾರ್, ಉತ್ತರ ಪಿನಾಕಿನಿ ಅಥವಾ ಪೆನ್ನಾರ್, ಚಿತ್ರಾವತಿ, ಪಾಲಾರ್ ಮತ್ತು ಪಾಪಾಗ್ನಿ) ಮೂಲ. 1895ರಿಂದ 1972ರವರೆಗೆ ಅರ್ಕಾವತಿ ಬೆಂಗಳೂರಿನ ನೀರಿನ ಅಗತ್ಯಗಳನ್ನು ಪೂರೈಸುತ್ತಿತ್ತು. ಈಗ ಈ ಎಲ್ಲ ನದಿಗಳು ಮಳೆಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಇಂಥ ಯೋಜನೆಗಳು ಬೇಕೇ? ಜನರು ಕೇಳಿದ್ದರೇ? ಯೋಜನೆಯೊಂದಕ್ಕೆ ಸರಕಾರ ಪ್ರಸ್ತಾವ ಸಲ್ಲಿಸುತ್ತದೆ ಎಂದಿಟ್ಟುಕೊಳ್ಳಿ. ಒಂದುವೇಳೆ ತಿರಸ್ಕೃತವಾಯಿತು ಇಲ್ಲವೇ ಅನುದಾನ ಲಭ್ಯವಾಗಲಿಲ್ಲ ಎಂದ ಮಾತ್ರಕ್ಕೆ ಯೋಜನೆ ಸ್ಥಗಿತಗೊಳ್ಳುವುದಿಲ್ಲ. ಬದಲಾಗಿ, ಆನಂತರ ಬೇರೆ ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ಗುತ್ತಿಗೆದಾರ-ಉದ್ಯಮ, ಅಧಿಕಾರಿಗಳು ಮತ್ತು ಸರಕಾರಗಳ ಅಪವಿತ್ರ ಮೈತ್ರಿಯ ಫಲವಾಗಿರುವ ಇಂಥ ಸಾವಿಲ್ಲದ, ರೂಹಿಲ್ಲದ ಹಲವು ಯೋಜನೆಗಳಿವೆ. ಇಂಥದ್ದರಲ್ಲಿ ಒಂದು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ(ಎಚ್‌ಎಆರ್‌ಎಲ್).

ಸಾವಿಲ್ಲದ, ರೂಹು ಇರುವ ಯೋಜನೆ:

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ(ಎಚ್‌ಎಆರ್‌ಎಲ್)ಗೆ 24 ವರ್ಷಗಳ ದೀರ್ಘ ಇತಿಹಾಸವಿದೆ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 1999ರಲ್ಲಿ ಉದ್ಘಾಟಿಸಿದ ಯೋಜನೆ ಇದು. ಕಾಳಿ ಹುಲಿ ಸಂರಕ್ಷಿತ ಅರಣ್ಯ ಹಾಗೂ ಆನೆಗಳ ಕಾರಿಡಾರ್ ಮೂಲಕ ಹಾಯ್ದುಹೋಗುವ 164 ಕಿ.ಮೀ. ಉದ್ದದ ಈ ಯೋಜನೆಯಲ್ಲಿ 108 ಕಿ.ಮೀ. ದಟ್ಟ ಕಾಡು ಇದೆ. ಅಂದಾಜು ವೆಚ್ಚ 4,000 ಕೋಟಿ ರೂ. ಪಶ್ಚಿಮ ಘಟ್ಟದ ಇಳಿಜಾರುಗಳ 600 ಹೆಕ್ಟೇರ್ ಸಮೃದ್ಧ ಅರಣ್ಯವಲ್ಲದೆ, ರಸ್ತೆ ಮತ್ತಿತರ ಮೂಲಸೌಲಭ್ಯ ನಿರ್ಮಾಣಕ್ಕೆ 400 ಹೆಕ್ಟೇರ್ ಕಾಡು ನಾಶವಾಗಲಿದೆ. ಈ ವರ್ಷದ ಆಯವ್ಯಯದಲ್ಲಿ ಸೇರ್ಪಡೆಯಾಗದಿದ್ದರೂ, ಯೋಜನೆಗೆ ಅನುಮತಿ ನೀಡಬೇಕೆಂದು ಲಾಬಿ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನೇಮಿಸಿದ ಉನ್ನತಾಧಿಕಾರ ಸಮಿತಿ(2015) ಸೇರಿದಂತೆ ಇನ್ನಿತರ ಶಾಸನಾತ್ಮಕ ಸಂಸ್ಥೆಗಳಿಂದ 10 ಬಾರಿ ತಿರಸ್ಕೃತಗೊಂಡಿದೆ. 2016ರಲ್ಲಿ ಹೊಸ ಪ್ರಸ್ತಾಪ ಸಲ್ಲಿಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಸರಕಾರಕ್ಕೆ ಸೂಚಿಸಿತು. ಸಲ್ಲಿಕೆಯಾದ ಹೊಸ ಪ್ರಸ್ತಾವವನ್ನು ಒಕ್ಕೂಟ ಸರಕಾರದ ಪ್ರಾಂತೀಯ ಉನ್ನತಾಧಿಕಾರ ಸಮಿತಿ, ರಾಷ್ಟ್ರೀಯ ವನ್ಯಜೀವಿ ಮಂಡಳಿ(ಎನ್‌ಬಿಡಬ್ಲ್ಯುಎಲ್) ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ) ತಿರಸ್ಕರಿಸಿದವು. ಮಾರ್ಚ್ 2020ರಲ್ಲಿ ರಾಜ್ಯ ವನ್ಯಜೀವಿ ಮಂಡಳಿ ‘ಯೋಜನೆಯು ಹುಲಿ ಹಾಗೂ ಆನೆಗಳ ವಾಸಸ್ಥಳವನ್ನು ನಾಶ ಮಾಡುತ್ತದೆ’ ಎಂದು ಸರ್ವಾನುಮತದಿಂದ ತಿರಸ್ಕರಿಸಿತು. ಅಡ್ಡ ದಾರಿ ಹಿಡಿದ ಯೋಜನೆಯ ಪ್ರವರ್ತಕರು ವನ್ಯಜೀವಿ ಮಂಡಳಿಗೆ ಸದಸ್ಯರಲ್ಲದವರನ್ನು ಸೇರಿಸಿ, ಅನುಮತಿ ಗಿಟ್ಟಿಸಿಕೊಂಡರು. ಇದು ರಾಜ್ಯ ವನ್ಯಜೀವಿ ಮಂಡಳಿಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸ್ವಯಂಸೇವಾ ಸಂಘಟನೆಗಳು ಹೈಕೋರ್ಟ್ ಬಾಗಿಲು ತಟ್ಟಿದವು.

ನ್ಯಾಯಾಲಯ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ 10 ವಾರ ಕಾಲಾವಕಾಶ ನೀಡಿ, ಜೂನ್ 2022ರೊಳಗೆ ವರದಿ ನೀಡಬೇಕೆಂದು ಸೂಚಿಸಿತು. ವನ್ಯಜೀವಿ ಮಂಡಳಿ ನೇಮಿಸಿದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕರ ನೇತೃತ್ವದ ಸಮಿತಿಯು ಸೆಪ್ಟಂಬರ್ 2022ರಂದು ಸ್ಥಳಕ್ಕೆ ಭೇಟಿ ನೀಡಿ, ಭಾಗಿದಾರರೊಂದಿಗೆ ಸಮಾಲೋಚನೆ ನಡೆಸಿತು. ಡಿಸೆಂಬರಿನಲ್ಲಿ ವರದಿ ನೀಡಿ, ‘ಪ್ರಸಕ್ತ ರೂಪದಲ್ಲಿ ಪ್ರಸ್ತಾವನೆಯನ್ನು ಪರಿಗಣಿಸಬಾರದು. ಲೋಪಗಳು ಹಾಗೂ ಕಂದರಗಳನ್ನು ಸರಿಪಡಿಸಬೇಕು’ ಎಂದಿತು. ವರದಿ ಕುರಿತು ಚರ್ಚೆ ನಡೆಸಿದ ಎನ್‌ಬಿಡಬ್ಲ್ಯುಎಲ್, ಗಮನಾರ್ಹ ಬದಲಾವಣೆಗಳನ್ನು ಸೂಚಿಸಿತಲ್ಲದೆ, ಜೋಡಿ ಮಾರ್ಗ ನಿರ್ಮಿಸಲು ಇನ್ನಷ್ಟು ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಹೇಳಿತು. ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಮಿತಿ 50 ಪುಟಗಳ ವರದಿಯಲ್ಲಿ, ‘ರೈಲ್ವೆ ಇಲಾಖೆಯ ಪ್ರಸ್ತಾವದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಅಧಿಕ ಪ್ರಮಾಣದ ಭೂಕುಸಿತಗಳ ಉಲ್ಲೇಖವೇ ಇಲ್ಲ. ಶಿರಸಿ, ಯಲ್ಲಾಪುರ, ದಾಂಡೇಲಿ ಮತ್ತು ಕಾರವಾರ ತಾಲೂಕಿನ 32 ಕಡೆ ಆಗಾಗ ಭೂಕುಸಿತ ಸಂಭವಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುತ್ತಿರುವ ಪ್ರದೇಶದ ಪ್ರಮಾಣ ಶೇ.3.7. ಭೂ ಕುಸಿತದ ಸಾಧ್ಯತೆ ಇರುವ ಪ್ರದೇಶಗಳ ಪ್ರಮಾಣ ಶೇ.25.8. ಭೂಕುಸಿತದ ನಿಯಂತ್ರಣಕ್ಕೆ ಇರುವ ವೈಜ್ಞಾನಿಕ ಮಾದರಿಗಳನ್ನು ಪ್ರಸ್ತಾಪಿಸಿಲ್ಲ. ರೈಲು ಮಾರ್ಗ 108 ಕಿ.ಮೀ. ದಟ್ಟ ಕಾಡಿನಲ್ಲಿ ಹಾಯ್ದುಹೋಗಲಿದೆ. ಸುರಂಗ ಮತ್ತು ಸೇತುವೆಗಳ ಸಂಖ್ಯೆಯನ್ನು ಹೆಚ್ಚಿಸಿದರೂ, ಬೇಸಿಗೆ ವೇಳೆ ಸುರಂಗಗಳಲ್ಲಿ ಆಶ್ರಯ ಪಡೆಯುವ ಪ್ರಾಣಿಗಳು ರೈಲಿಗೆ ಸಿಲುಕಿ ಮೃತಪಡುವ ಸಾಧ್ಯತೆಯಿದೆ. ಹಳಿಗಳ ನಿರ್ಮಾಣಕ್ಕೆ 594 ಹೆಕ್ಟೇರ್ ಹಾಗೂ ರಸ್ತೆ ಇತ್ಯಾದಿ ನಿರ್ಮಾಣಕ್ಕೆ ಅಂದಾಜು ಸಾವಿರ ಹೆಕ್ಟೇರ್ ಅರಣ್ಯ ನಾಶವಾಗುತ್ತದೆ. ಅಪರೂಪದ ಜೀವಸಂಕುಲಗಳಲ್ಲದೆ, ವನ್ಯಜೀವಿ ಸಂಚಾರ ಕಾರಿಡಾರ್ ಛಿದ್ರಗೊಳ್ಳುತ್ತದೆ’ ಎಂದಿತು. ಆದರೆ, ಸಮಸ್ಯೆ ಇರುವುದು ‘ಈಗಿನ ಸ್ವರೂಪದಲ್ಲಿ ಒಪ್ಪಲು ಸಾಧ್ಯವಿಲ್ಲ. ರೈಲ್ವೆ ಇಲಾಖೆ ಸುಸ್ಥಿರ ಹಾಗೂ ಅನುಷ್ಠಾನಯೋಗ್ಯ ಕ್ರಿಯಾಯೋಜನೆಯನ್ನು ಸಿದ್ಧಗೊಳಿಸಬೇಕು’ ಎನ್ನುವ ಅಡ್ಡಗೋಡೆಯ ಮೇಲೆ ದೀಪವಿಟ್ಟಂಥ ಪದಪುಂಜದಲ್ಲಿ. ಇಂಥ ಯೋಜನೆಗಳು ಮತ್ತೆಮತ್ತೆ ತಲೆಯೆತ್ತಲು ಇದೇ ಕಾರಣ.

ವನ್ಯಜೀವಿಗಳ ಸಂಚಾರಕ್ಕೆ ನಿರ್ಮಿಸುವ ಸುರಂಗ ಮಾರ್ಗ ಹಾಗೂ ಸೇತುವೆಗಳು ಮಣ್ಣಿನ ಸಂರಚನೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ. 2022ರಲ್ಲಿ ಈ ಭಾಗದಲ್ಲಿ ನಡೆದ ಭೂಕುಸಿತಗಳು ಇಲ್ಲಿನ ಭೂಮಿಯ ರಚನೆಯಲ್ಲಿನ ದೋಷವನ್ನು ತೋರಿಸಿಕೊಟ್ಟಿವೆ. ಸುರಂಗ-ಸೇತುವೆಗಳಿಂದ ನೀರಿನ ಮೂಲಗಳಿಗೆ ಧಕ್ಕೆಯುಂಟಾಗಿ, ಜಲವೃತ್ತ ವ್ಯತ್ಯಯಗೊಳ್ಳುತ್ತದೆ. ನೀರಿನ ಕೊರತೆಯೆಂದರೆ ಏನೆಂದೇ ಗೊತ್ತಿಲ್ಲದ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ವರ್ಷಗಳಿಂದ ಜಲಕ್ಷಾಮ ಹೆಚ್ಚುತ್ತಿದೆ. ಸುಪ್ರೀಂ ಕೋರ್ಟ್ ನೇಮಿಸಿದ್ದ ಉನ್ನತಾಧಿಕಾರ ಸಮಿತಿ ಇದನ್ನೇ ಹೇಳಿತು-‘ಯೋಜನೆಯು ಪಶ್ಚಿಮಘಟ್ಟದ ಅರಣ್ಯ, ವನ್ಯಜೀವಿ ಹಾಗೂ ಜೈವಿಕ ವೈವಿಧ್ಯಕ್ಕೆ ಸರಿಪಡಿಸಲಾಗದಷ್ಟು ಹಾನಿಯುಂಟು ಮಾಡುತ್ತದೆ. ಯೋಜನೆಯಿಂದ ಆಗಬಹುದಾದ ಸಂಭವನೀಯ ಲಾಭಕ್ಕಿಂತ ವೆಚ್ಚವೇ ಹೆಚ್ಚಾಗಲಿದೆ’.

ಅರಣ್ಯೀಕರಣವೂ ಅತೃಪ್ತಿಕರ:

‘ಅಭಿವೃದ್ಧಿಗೆ ಬೆಲೆ ತೆರಬೇಕು. ಮರುಅರಣ್ಯೀಕರಣದ ಮೂಲಕ ನಷ್ಟ ತುಂಬಬಹುದು’ ಎನ್ನುವ ವಾದವಿದೆ. ಆದರೆ, ಇಲ್ಲಿ ಕೂಡ ಸಾಧನೆ ಅತೃಪ್ತಿಕರವಾಗಿದೆ. ಕೇರಳದ ಆರ್‌ಟಿಐ ಕಾರ್ಯಕರ್ತ ಗೋವಿಂದನ್ ನಂಬೂದಿರಿ ಅವರಿಗೆ ಪರಿಸರ ಮಂತ್ರಾಲಯ ನೀಡಿದ ಮಾಹಿತಿ ಪ್ರಕಾರ, ಗ್ರೀನ್ ಇಂಡಿಯಾ ಮಿಷನ್ ಅಡಿ ಹಾಕಿಕೊಂಡ ಗುರಿಯನ್ನು ಸಾಧಿಸುವಲ್ಲೂ ದೇಶ ಹಿಂದುಳಿದಿದೆ.

ಗ್ರೀನ್ ಇಂಡಿಯಾ ಮಿಷನ್(ಜಿಐಎಂ) ರಾಷ್ಟ್ರೀಯ ಹವಾಮಾನ ಬದಲಾವಣೆ ಕ್ರಿಯಾಯೋಜನೆಯಡಿಯ 8 ಮಿಷನ್‌ಗಳಲ್ಲಿ ಒಂದಾಗಿದ್ದು, ಅರಣ್ಯಗಳ ರಕ್ಷಣೆ, ಮರುಸ್ಥಾಪನೆ ಹಾಗೂ ವರ್ಧನೆ ಮತ್ತು ಹವಾಮಾನ ಬದಲಾವಣೆಗೆ ಪ್ರತಿಕ್ರಿಯಿಸುವುದು ಮಿಷನ್ ಉದ್ದೇಶ. ಇದರಡಿ 10 ದಶಲಕ್ಷ ಹೆಕ್ಟೇರ್ ಅರಣ್ಯ ಹಾಗೂ ಅರಣ್ಯವಲ್ಲದ ಭೂಮಿಯಲ್ಲಿ ಮರಗಳ ಹೆಚ್ಚಳ ಹಾಗೂ ಹಾಲಿ ಅರಣ್ಯಗಳ ಗುಣಮಟ್ಟ ಹೆಚ್ಚಳದ ಗುರಿ ಹಾಕಿಕೊಳ್ಳಲಾಗಿತ್ತು. ಮಾಂಟ್ರಿಯಲ್‌ನಲ್ಲಿ ನಡೆದ ಸಿಒಪಿ-15 ಸಮಾವೇಶದಲ್ಲಿ 2030ರೊಳಗೆ ಶೇ.30ರಷ್ಟು ಸಮುದ್ರ ಹಾಗೂ ಭೂಪ್ರದೇಶವನ್ನು ಸಂರಕ್ಷಿಸುವ ಒಪ್ಪಂದಕ್ಕೆ ದೇಶ ಸಹಿ ಹಾಕಿದೆ. ಇಂಗಾಲ ಕ್ರೋಡೀಕರಣ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತಡೆಯಲು ರೂಪಿಸಿರುವ ಅಂತರ್‌ರಾಷ್ಟ್ರೀಯ ಒಪ್ಪಂದಗಳ ಪಾಲನೆಗೆ ಅರಣ್ಯ ಸಂರಕ್ಷಣೆ ಮಾಡಬೇಕಾಗುತ್ತದೆ. ಜಿಐಎಂ ಪ್ರಕಾರ, 2015-16ರಿಂದ 2021-22ರ ಅವಧಿಯಲ್ಲಿ 53,371 ಹೆಕ್ಟೇರಿನಲ್ಲಿ ಅರಣ್ಯ ವಿಸ್ತರಣೆ ಹಾಗೂ 1.66 ಲಕ್ಷ ಹೆಕ್ಟೇರ್ ಅರಣ್ಯದ ಗುಣಮಟ್ಟ ಸುಧಾರಣೆ ಆಗಬೇಕಿತ್ತು. ಆದರೆ, ಸಾಧ್ಯವಾಗಿರುವುದು ಕ್ರಮವಾಗಿ 26,287 ಹೆಕ್ಟೇರ್ ಮತ್ತು 1.02 ಲಕ್ಷ ಹೆಕ್ಟೇರ್ ಮಾತ್ರ. ಇದಕ್ಕಾಗಿ ಕೇಂದ್ರ ಮೀಸಲಿರಿಸಿದ 681 ಕೋಟಿ ರೂ.ಗಳಲ್ಲಿ 525 ಕೋಟಿ ರೂ. ಬಳಕೆಯಾಗಿದೆ(17 ರಾಜ್ಯಗಳು ಈ ಸಂಬಂಧ ಮಾಹಿತಿ ನೀಡಿದ್ದವು). ಭಾರತದ ಅರಣ್ಯಗಳ ಪರಿಸ್ಥಿತಿ ವರದಿ ಪ್ರಕಾರ, ದೇಶದಲ್ಲಿ 80.9 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಮತ್ತು ಮರಗಳಿವೆ. ಇದು ಒಟ್ಟು ಭೂಪ್ರದೇಶದ ಶೇ.24.62. ಭೂಮಿಯಲ್ಲಿ ಬದುಕು ಸಹನೀಯವಾಗಬೇಕಿದ್ದರೆ, ಶೇ. 33ರಷ್ಟು ಭೂಪ್ರದೇಶದಲ್ಲಿ ಅರಣ್ಯ ಇರಬೇಕು. ಆದರೆ, ಈ ಅಂಕಿಅಂಶಗಳು ನಂಬಿಕೆಗೆ ಅರ್ಹವೇ? ವಾಣಿಜ್ಯ ಪ್ಲಾಂಟೇಷನ್‌ಗಳಿಂದ ಹಸಿರು ಮುಚ್ಚಿಗೆ ಹೆಚ್ಚಿರಬಹುದು. ಇಂಥ ಪ್ಲಾಂಟೇಷನ್‌ಗಳಲ್ಲಿ ಇರುವುದು ಏಕ ಜಾತಿಯ ಪ್ರಭೇದಗಳು. ಜೀವವೈವಿಧ್ಯವಿಲ್ಲದ ಕಾರಣ ಇವು ಹಲವು ರೋಗಗಳಿಗೆ ತುತ್ತಾಗುತ್ತವೆ.

‘ಹುಬ್ಬಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ 594 ಹೆಕ್ಟೇರ್ ಅರಣ್ಯ ನಾಶವಾಗಲಿದೆ. 2 ಲಕ್ಷಕ್ಕೂ ಅಧಿಕ ಮರಗಳ ಕಡಿತಕ್ಕೆ ಕಾರಣವಾಗುವ ಈ ಯೋಜನೆಯನ್ನು ಕೈ ಬಿಡಬೇಕು’ ಎಂದು ಗಿರಿಧರ್ ಕುಲಕರ್ಣಿ ಎಂಬವರು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪ್ರಗತಿಯಲ್ಲಿದೆ. ಶಿರಾಡಿ ಘಾಟಿಯಲ್ಲಿ ಸುರಂಗ ತೋಡಬೇಕೆಂಬ ಮತಿಗೆಟ್ಟ ಯೋಜನೆಗಳಲ್ಲದೆ, ಪ್ರವಾಸೋದ್ಯಮದ ಭರಾಟೆಯಿಂದ ಪಶ್ಚಿಮಘಟ್ಟ ನಲುಗಿದೆ. ಪರಿಸರ ಒಂದು ಅತ್ಯಂತ ಸಂಕೀರ್ಣ ವ್ಯವಸ್ಥೆ. ಚಿಕ್ಕಮಗಳೂರಿನಲ್ಲಿ ಮಳೆ ಏರುಪೇರಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿಯಲ್ಲಿ ನೀರು ಕಡಿಮೆಯಾದರೆ, ರಾಜ್ಯ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಕಷ್ಟಕ್ಕೆ ಸಿಲುಕುತ್ತವೆ. ಕೃಷಿ ಹಾಗೂ ಕುಡಿಯುವ ನೀರಿನ ಕೊರತೆಯಾಗುತ್ತದೆ. ಮುಳ್ಳಯ್ಯನ ಗಿರಿ, ಬಾಬಾಬುಡನ್‌ಗಿರಿ ಸುತ್ತಮುತ್ತಲಿನ 8,000 ಎಕರೆಗೂ ಹೆಚ್ಚು ವಿಸ್ತೀರ್ಣದ ಶೋಲಾ ಅರಣ್ಯ ಮತ್ತು ಹುಲ್ಲುಗಾವಲು ಇಲ್ಲದಿದ್ದರೆ, ವರ್ಷವಿಡೀ ಹರಿಯುವ ತೊರೆಗಳು ಬತ್ತುತ್ತವೆ; ಉಪನದಿಗಳು ಹಾಗೂ ದೊಡ್ಡ ನದಿಗಳಿಗೆ ನೀರಿಲ್ಲದಂತೆ ಆಗುತ್ತದೆ. ನದಿಯನ್ನು ಆಧರಿಸಿದವರು ದಿಕ್ಕುಗೆಡುತ್ತಾರೆ.

ಅಭಿವೃದ್ಧಿಯ ಭರಾಟೆಯಲ್ಲಿ ಬೆಳ್ಳಿ-ಬೊಮ್ಮನ್ ಮತ್ತು ರಘು-ಬೊಮ್ಮಿ ನೆಲೆ ಕಳೆದುಕೊಂಡು, ದಿಕ್ಕು ತಪ್ಪುವುದು ಆಶ್ಚರ್ಯ ಹುಟ್ಟಿಸುವುದಿಲ್ಲ; ನಮ್ಮ ಆತ್ಮಸಾಕ್ಷಿಯನ್ನು ಕೆಣಕುವುದಿಲ್ಲ. ಜೋಷಿಮಠದಲ್ಲಿ ಸಂಭವಿಸಿದ ಭೂಕುಸಿತ ಇಲ್ಲಿ ಮರುಕಳಿಸುವವರೆಗೆ ಜಡತ್ವ ಮುಂದುವರಿಯುತ್ತದೆ. ಕೆಲಕಾಲಾನಂತರ ಅದು ಕೂಡ ಮರೆತುಹೋಗಿ, ‘ಎಂದಿನಂತೆ ವಹಿವಾಟು’ ಮುಂದುವರಿಯುತ್ತದೆ.