ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಟೋಲ್ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

Update: 2023-03-17 17:30 GMT

ಮೈಸೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಪ್ರಯಾಣಿಕರಿಗೆ ಟೋಲ್ ದರ ಹೆಚ್ಚಳ ಹಾಗೂ ಅವೈಜ್ಞಾನಿಕ ಕಾಮಗಾರಿ ಮಾಡಿರುವುದರ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಮ್ಮ ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿ ತಮ್ಮ ಬೆಂಬಲಿಗರು ವಿವಿಧ ಸಂಘಟನೆಗಳೊಡಗೂಡಿ ಪ್ರತಿಭಟನೆ ನಡೆಸಿದರು.

ಮೈಸೂರು ನಗರದ ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ವೃತ್ತದ ಬಳಿ ಶುಕ್ರವಾರ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈವೇ ದುಬಾರಿ ಟೋಲ್ ವಿರುದ್ಧ ಜನಮುಖಿ ಶಾಂತಿಯು ಪ್ರತಿಭಟನೆ ಎಂಬ ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈವೇ ಹೆದ್ದಾರಿಯಲ್ಲ, ಹೆಮ್ಮಾರಿ, ಸರ್ವಿಸ್ ರಸ್ತೆ ಕೊಡದ ಹೊರತು ಟೋಲ್ ಶುಲ್ಕ ಏಕೆ ಕೊಡಬೇಕು, ಜನ ಕೊಟ್ಟ ಮತಭಿಕ್ಷೆಗೆ ಸರ್ಕಾರಗಳು ಕೊಟ್ಟ ಮಹಾ ಶಿಕ್ಷೆ, 1 ಕಿಲೋಮೀಟರ್‍ಗೆ 1 ರೂ. ಸಾಕು, ಹೆಚ್ಚುವರಿ ಯಾಕೆ ಬೇಕು ಎಂಬ  ಮುಂತಾದ ಫಲಕಗಳನ್ನು ಪ್ರದರ್ಶಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್ ಅವರು, "ಸರಿಯಾದ ಸುರಕ್ಷತೆಯಿಲ್ಲದ ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈವೇಯಲ್ಲಿ ಸಂಚರಿಸುವ ವಾಹನಗಳ ಸವಾರರಿಂದ ಅವೈಜ್ಞಾನಿಕ ರೀತಿಯಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ. ಜನರು ಮತ್ತು ವಾಹನ ಸವಾರರು ಅನುಭವಿಸುತ್ತಿರುವ ನೋವನ್ನು ಸರ್ಕಾರಕ್ಕೆ ತಿಳಿಸಲು ಇಂದು ಸಾಂಕೇತಿಕವಾದ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. 

ಎಕ್ಸ್ ಪ್ರೆಸ್ ಹೈವೇ ನಿರ್ಮಾಣ ಹಿನ್ನೆಲೆ  2600 ಎಕರೆ ರೈತರ ಜಮೀನು ಹೋಯ್ತು. ಮಂಡ್ಯ ಭಾಗದ ನೂರಾರು ಕುಟುಂಬಗಳು ಬೀದಿಗೆ ಬಂದಿದೆ ಜನ ವಿರೋಧಿ ಯೋಜನೆ ಮಾಡಿ ಟೋಲ್ ಸಂಗ್ರಹ ನೆಪದಲ್ಲಿ ಹಗಲು ದರೋಡೆಗೆಳಿದಿದ್ದೀರಿ. ರಸ್ತೆ ಬೇಕು ಅಂಥಾ ಯಾರು ಕೇಳಿದ್ದರು. ನಾಲ್ಕು ಪಥನೇ ಸಾಕಾಗಿತ್ತು. ಹತ್ತು ಪಥದ ರಸ್ತೆ ಮಾಡಿದ್ದೀರಾ ಆದರೆ ಬಡವರು ಓಡಾಡುವ ಸರ್ವಿಸ್ ರಸ್ತೆ ಎಲ್ಲಿದೆ ? ಅಪಘಾತವಾದರೆ ಚಿಕಿತ್ಸೆ ನೀಡಲು ಟ್ರಾಮಾ ಸೆಂಟರ್ ಎಲ್ಲಿದೆ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಮೇಯರ್‍ಗಳಾದ ಪುರುಷೋತ್ತಮ್, ಬಿ.ಕೆ.ಪ್ರಕಾಶ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್,  ನಗರಪಾಲಿಕೆ ಮಾಜಿ ಸದಸ್ಯ ಆರ್.ಸೋಮಸುಂದರ್, ಕಾಂಗ್ರೆಸ್ ಮುಖಂಡರಾದ ಕೆ.ಎಸ್.ಶಿವರಾಮ್, ಕ.ರಾ.ಗೋಪಾಲಕೃಷ್ಣ, ರೇವಣ್ಣ, ಕನ್ನಡ ಚಳುವಳಿ ನಾಯಕ ಶಿವಶಂಕರ್, ಎನ್.ಆರ್.ನಾಗೇಶ್, ನಾಯಕ ಯುವ ಸೇನೆ ಅಧ್ಯಕ್ಷ ದ್ಯಾವಪ್ಪ ನಾಯಕ ಸೇರಿದಂತೆ ಹಲವು ಸಂಘಟನೆಗಳ ನಾಯಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Similar News