×
Ad

ಹಾರಂಗಿಯಲ್ಲಿ ರಾಜ್ಯದ ಮೊದಲ ಜೀವವೈವಿಧ್ಯ ಪಾರ್ಕ್

Update: 2023-03-18 08:56 IST

ಮಡಿಕೇರಿ: ಕರ್ನಾಟಕದ ಮೊದಲ ಜೀವವೈವಿಧ್ಯ ಗಿಡಮೂಲಿಕೆ ಉದ್ಯಾನವನವನ್ನು ಕೊಡಗು ಜಿಲ್ಲೆ ಹಾರಂಗಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ಶುಕ್ರವಾರ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಭಾರತ, ವಿವಿಧ ಔಷಧಿಗಳಿಗೆ ಬಳಸಲಾಗುವ ಔಷಧೀಯ ಸಸ್ಯಗಳ ಅತಿದೊಡ್ಡ ರಫ್ತುದೇಶವಾಗಿದೆ. ಹೊಸ ಜೀವವೈವಿಧ್ಯ ಪಾರ್ಕ್ ಈ ನಿಟ್ಟಿನಲ್ಲಿ ನಮಗೆ ವರದಾನ. ವೈದ್ಯಕೀಯ ಗಿಡಮೂಲಿಕೆಗಳ ಉದ್ಯಾನವನವನ್ನು ಭಾಗಮಂಡಲದಲ್ಲಿ ಕೂಡಾ ಸದ್ಯವೇ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

ನಮ್ಮನ್ನು ಬಾಧಿಸುವ ರೋಗಗಳ ಚಿಕಿತ್ಸೆಗೆ ಔಷಧೀಯ ಸಸ್ಯಗಳನ್ನು ಬಳಸುವುದು ಅಗತ್ಯ ಅಂತೆಯೇ ಭೂಮಿಯಲ್ಲಿ ಹಸಿರು ಇದ್ದರೆ ಪರಿಸರ ಕೂಡಾ ಆರೋಗ್ಯಕರವಾಗಿರುತ್ತದೆ ಎಂದು ಹೇಳಿದ ಅವರು, ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಕೊಡಗಿನಲ್ಲಿ ಮಾದರಿ ಔಷಧೀಯ ವನ ಅಭಿವೃದ್ಧಿಪಡಿಸುವ ಸಂಬಂಧ ಮಾಸ್ಟರ್‌ಪ್ಲಾನ್ ಅನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಭಿವೃದ್ಧಿಪಡಿಸಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಪ್ರಕಟಿಸಿದರು. ಜಿಲ್ಲೆಯಲ್ಲಿ ಕಂಡುಬರುವ ಸಮೃದ್ಧ ಸಸ್ಯವೈವಿಧ್ಯವನ್ನು ಸಂರಕ್ಷಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.

ಜಿಲ್ಲೆಯ ಪ್ರತಿ ಪಂಚಾಯ್ತಿಯಲ್ಲಿ ಜೀವವೈವಿಧ್ಯ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಮಂಡಳಿ ಉದ್ದೇಶೀಸಿದೆ. ಕೂರ್ಗ್ ಮ್ಯಾಂಡ್ರಿಯನ್ ಎಂಬ ವಿಶೇಷ ಗಿಡ ಜಿಲ್ಲೆಯಲ್ಲಿ ಮಾತ್ರವೇ ಇದೆ. ಇದು ವಿನಾಶದ ಅಂಚಿನಲ್ಲಿದ್ದು, ಇದರ ಪ್ರಬೇಧಗಳನ್ನು ಬೆಳೆಸಲು ಸಂಶೋಧನೆ ನಡೆದಿದೆ ಎಂದರು.

Similar News