ಇತ್ತೀಚೆಗೆ ಪ್ರಧಾನಿ ಉದ್ಘಾಟಿಸಿದ ಬೆಂಗಳೂರು-ಮೈಸೂರು ಹೆದ್ದಾರಿ ಮಳೆಗೆ ಜಲಾವೃತ, ಪ್ರಯಾಣಿಕರಿಗೆ ಸಂಕಷ್ಟ

Update: 2023-03-18 07:14 GMT

ರಾಮನಗರ, ಮಾ.18: ಆರು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮೈಸೂರು ಹೈವೇ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಸುರಿದ ಮೊದಲ ಮಳೆಗೆ ಕೆರೆಯಂತಾಗಿದೆ.

8479 ಕೋ.ರೂ. ವೆಚ್ಚದಲ್ಲಿ ನಿರ್ಮಿತ ಈ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಸಂಗಬಸವನದೊಡ್ಡಿ ಮೇಲ್ಸೇತುವೆ ಬಳಿ ರಸ್ತೆಯಲ್ಲೇ ನೀರು ತುಂಬಿಕೊಂಡಿದೆ. ಎಕ್ಸ್‌ಪ್ರೆಸ್‌ ವೇಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಶೇಖರಣೆಗೊಂಡಿದ್ದರಿಂದ ಗುರುವಾರ ತಡರಾತ್ರಿ ಹಲವು ವಾಹನಗಳು ಸಂಕಷ್ಟಕ್ಕೆ ಸಿಲುಕಿರುವುದು ವರದಿಯಾಗಿದೆ.

ರಸ್ತೆಯಲ್ಲಿ ಹೆಚ್ಚಿನ ನೀರು ನಿಂತ ಹಿನ್ನೆಲೆ ವಾಹನಗಳು ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಕೆಲವೊಂದು ವಾಹನಗಳು ರಸ್ತೆ ಮಧ್ಯೆಯೇ ಕೆಟ್ಟು ನಿಂತಿದ್ದವು. ಈ ವೇಳೆ ಹಿಂದಿನಿಂದ ಬಂದ ಢಿಕ್ಕಿ ಹೊಡೆದಿವೆ. ಈ ರೀತಿ ಸರಣಿ ಅಪಘಾತಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.

ಮಾ.12ರಂದು ಬೆಂಗಳೂರು-ಮೈಸೂರ ಎಕ್ಸ್​​ಪ್ರೆಸ್​ ವೇ ಗೆ ಪ್ರಧಾನಿ ಮೋದಿ ಮಂಡ್ಯ ಜಿಲ್ಲೆಯಲ್ಲಿ ಚಾಲನೆ ನೀಡಿದ್ದರು. ಮಳೆ ಬಂದರೇ ಏನು ಸಮಸ್ಯೆ ಆಗದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿಕೊಂಡಿದ್ದರು. ಇದೀಗ ಇಷ್ಟೆಲ್ಲಾ ಸಮಸ್ಯೆಗಳಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಪೂರ್ಣವಾಗಿ ಸಿದ್ಧಗೊಳ್ಳುವ ಮೊದಲೇ ಉದ್ಘಾಟನೆ ಮಾಡಲಾಯಿತೇ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Similar News