ಬಿಜೆಪಿಯೊಳಗೆ ಲಿಂಗಾಯತ ವಿರೋಧಿ 'ಸಂತೋಷ' ಕೂಟ: ಕಾಂಗ್ರೆಸ್ ಸರಣಿ ಪೋಸ್ಟ್

Update: 2023-03-18 13:52 GMT

ಬೆಂಗಳೂರು: ಪಕ್ಷದ ಮೇಲೆ ಲಿಂಗಾಯತ ಸಮುದಾಯಕ್ಕಿರುವ ಹಿಡಿತವನ್ನು ತಪ್ಪಿಸಲು ಬಿ.ಎಲ್‌. ಸಂತೋಷ್‌ ಸೂಚಿಸಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ಎಂ ಲಕ್ಷ್ಮಣ್‌ ಆರೋಪಿಸಿದ ಬೆನ್ನಲ್ಲೇ, ಕಾಂಗ್ರೆಸ್‌ ಸರಣಿ ಟ್ವೀಟ್‌ ಮಾಡಿದ್ದು, ಬಿಎಸ್‌ ಯಡಿಯೂರಪ್ಪ ಅವರಿಗೆ ಸಂತೋಷ್‌ ಬಣವು ಕೆಲಸ ಮಾಡಲು ಬಿಡುತ್ತಿರಲಿಲ್ಲ ಎಂದು ಆರೋಪಿಸಿದೆ. 

ಬಿಎಸ್‌ ಯಡಿಯೂರಪ್ಪ ಹಾಗೂ ಲಿಂಗಾಯತ ಸಮುದಾಯವನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಊಹಾಪೋಹಗಳ ನಡುವೆಯೇ ಕಾಂಗ್ರೆಸ್‌ ಸರಣಿ ಟ್ವೀಟ್‌ ಮಾಡಿದ್ದು, ʼಸಂತೋಷ ಕೂಟʼವು ನೆರೆ ಪರಿಹಾರದ ಬಗ್ಗೆ ಪ್ರಧಾನಿ ಮೋದಿಯೊಂದಿಗೆ ಬಿಎಸ್‌ವೈಗೆ ಭೇಟಿಗೆ ಅವಕಾಶ ಸಿಗದಂತೆ ನೋಡಿಕೊಂಡಿದೆ ಎಂದು ಆರೋಪಿಸಿದೆ.

"ಬಿಜೆಪಿಯಲ್ಲಿನ ಏಕೈಕ ಜನಪ್ರಿಯ ನಾಯಕ ಯಡಿಯೂರಪ್ಪ. ಪಕ್ಷವನ್ನು ಅಧಿಕಾರಕ್ಕೆ ತಂದ ಬಳಿಕ ಅವರಿಂದ ಪಕ್ಷದ ಹಿಡಿತ ಸಡಿಲಿಸಿ ಹಿಂಬಾಗಿಲ ಮೂಲಕ 'ಆರೆಸ್ಸೆಸ್' ಹೆಸರಲ್ಲಿ ಅನಾಯಾಸವಾಗಿ ಅಧಿಕಾರ ಚಲಾಯಿಸಲು ಯತ್ನಿಸಿದ್ದು ಇದೇ 'ಸಂತೋಷ ಕೂಟ'" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

"ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜ್ಯ ಪ್ರವಾಹಕ್ಕೆ ಸಿಲುಕಿತು. ಇದರ ಬಗ್ಗೆ ಚರ್ಚಿಸಲು, ಪರಿಹಾರಕ್ಕೆ ಮೊರೆ ಇಡಲು ದೆಹಲಿಗೆ ಹೋದ ಯಡಿಯೂರಪ್ಪಗೆ ಪ್ರಧಾನಿ ಭೇಟಿಯ ಅವಕಾಶ ನಿರಾಕರಿಸಲಾಯ್ತು. ಒಂದಲ್ಲ ಎರಡಲ್ಲ ಹತ್ತಾರು ಬಾರಿ. ಇದಕ್ಕೆ ಕಾರಣ ದೆಹಲಿಯಲ್ಲಿ ನಿಯಂತ್ರಣ ಹೊಂದಿದ್ದ ಇದೇ 'ಸಂತೋಷ ಕೂಟ'" ಎಂದು ಬಿ.ಎಲ್‌. ಸಂತೋಷ್‌ ಬಣ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

"'ಆಪರೇಷನ್ ಕಮಲ' ದ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪಗೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅವಕಾಶ ನೀಡಲಿಲ್ಲ. ರಾಜ್ಯ ಪ್ರವಾಹಕ್ಕೆ ತುತ್ತಾಗಿ ಯಡಿಯೂರಪ್ಪ ಏಕಾಂಗಿಯಾಗಿ ರಾಜ್ಯ ಸುತ್ತಬೇಕಾಯ್ತು. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ 'ಸಂತೋಷ ಕೂಟ' ಇದಕ್ಕೆ ಅಡ್ಡಿಯಾಗಿ ನಿಂತಿತ್ತು" ಎಂದು ಕಾಂಗ್ರೆಸ್ ಆರೋಪಿಸಿದೆ.

"ಅಧಿಕಾರದಲ್ಲಿ ಇದ್ದಾಗಲೆಲ್ಲ ಕಿರುಕುಳ ಕೊಟ್ಟು ಕೊನೆಗೆ ಅಧಿಕಾರದಿಂದ ಕೆಳಗಿಳಿಸಿದ 'ಸಂತೋಷ ಕೂಟ' ಈಗ ಮತ್ತೆ ಅಧಿಕಾರಕ್ಕೆ ಬರಲು ಯಡಿಯೂರಪ್ಪರನ್ನೇ ಮುಂದೆ ಬಿಟ್ಟು ಮರೆಯಲ್ಲಿ ಕುಳಿತಿರುವುದೇಕೆ? 'ಮುಖ್ಯಮಂತ್ರಿ'ಯಾಗುವ ಕನಸು ಕಾಣುತ್ತಿರುವ ಆ 'ಸಂತೋಷ'ಕ್ಕೆ ಈಗ ಜನರ ಎದುರು ಬಂದು ಚುನಾವಣೆ ಎದುರಿಸುವ ಧೈರ್ಯ ಯಾಕಿಲ್ಲ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯಲಿದ್ದಾರೆಯೇ ಸಿದ್ದರಾಮಯ್ಯ?

Similar News