ಸೈಲೆಂಟ್‌ ಸುನಿಲ್‌ ಸೇರ್ಪಡೆ ಮೂಲಕ ‘ಬಿಜೆಪಿ ರೌಡಿ ಮೋರ್ಚಾ’ಕ್ಕೆ ಬಹಿರಂಗವಾಗಿ ಚಾಲನೆ ದೊರೆತಿದೆ: ಕಾಂಗ್ರೆಸ್ ಟೀಕೆ

ನಿಮ್ಮನ್ನು ಸ್ವಾಗತಿಸಲು ಮತ್ತೊಬ್ಬ ಪಾತಕಿಯನ್ನು ಬಿಜೆಪಿ ಸೇರಿಸಿದೆ: ಪ್ರಧಾನಿ ಮೋದಿಗೆ ಕುಟುಕಿದ ಕಾಂಗ್ರೆಸ್‌

Update: 2023-03-18 13:32 GMT

ಬೆಂಗಳೂರು: ‘ಪಾತಕಿ ಸೈಲೆಂಟ್ ಸುನೀಲನನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳುವ ಮೂಲಕ ‘ಬಿಜೆಪಿ ರೌಡಿ ಮೋರ್ಚಾ’ಕ್ಕೆ ಬಹಿರಂಗವಾಗಿ ಚಾಲನೆ ದೊರೆತಿದೆ! ಯಾವುದೇ ಕಾರಣಕ್ಕೂ ರೌಡಿ ಶೀಟರ್‍ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ನಾಲಿಗೆಯನ್ನು ಈಗ ಯಾವುದರಲ್ಲಿ ತೊಳೆದುಕೊಳ್ಳುವಿರಿ? ಗೋಮೂತ್ರವೋ, ಗೋಮಯವೋ!?’ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಫೈಟರ್ ರವಿ ಎದುರು ಕೈಮುಗಿದು ನಿಂತ ನರೇಂದ್ರ ಅವರೇ, ಮುಂದಿನ ಬಾರಿ ಬಂದಾಗ ಮತ್ತೊಬ್ಬ ರೌಡಿ ಸೈಲೆಂಟ್ ಸುನೀಲನಿಗೆ ಕೈ ಮುಗಿಯುವಿರಾ, ಕಾಲಿಗೆ ಬೀಳುವಿರಾ ನಿಮ್ಮ ವಿವೇಚನೆಗೆ ಬಿಟ್ಟಿದ್ದು! ನಿಮ್ಮನ್ನು ಸ್ವಾಗತಿಸಲು ಮತ್ತೊಬ್ಬ ಪಾತಕಿಯನ್ನು ಬಿಜೆಪಿ ಪಕ್ಷ ಸೇರ್ಪಡೆ ಮಾಡಿಕೊಂಡಿದೆ’ ಎಂದು ವಾಗ್ದಾಳಿ ನಡೆಸಿದೆ.

‘ಪ. ಬಂಗಾಳ, ಕೇರಳದ ಆರೆಸೆಸ್ಸ್ ಕಚೇರಿಗಳಲ್ಲಿ ಗನ್ನು, ಗ್ರೆನೇಡ್, ಬಾಂಬುಗಳು ಇರುವುದು ಬೆಳಕಿಗೆ ಬಂದಿತ್ತು. ಕರ್ನಾಟಕದ ಬಿಜೆಪಿ ಕಚೇರಿಯಲ್ಲಿ ಇನ್ನು ಮುಂದೆ ಲಾಂಗು, ಮಚ್ಚು, ಡ್ರ್ಯಾಗರ್‍ಗಳ ಸಂಗ್ರಹ ಇರಲಿದೆ! ರೌಡಿಗಳಿಗೆ ಬಿಜೆಪಿ ಮೇಲೆ ಪ್ರೀತಿಯೋ, ಬಿಜೆಪಿಗೆ ರೌಡಿಗಳ ಮೇಲೆ ಪ್ರೀತಿಯೋ ನಳಿನ್ ಕುಮಾರ್ ಕಟೀಲ್ ಉತ್ತರಿಸಬೇಕು’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಹುಲ್ ಗಾಂಧಿ ಅಗೌರವ ತೋರಿದ್ದಾರೆಂದು ಆರೋಪಿಸಿ ಬಿಜೆಪಿ ಮಾಡಿದ್ದ ಟ್ವೀಟ್ ಗೆ ತಿರುಗೇಟು ನೀಡಿದ ಕಾಂಗ್ರೆಸ್, "‘ಸುಳ್ಳೇ ಬಿಜೆಪಿ ಮನೆದೇವ್ರು’ ಪದೇ ಪದೇ ಸಾಬೀತಾಗುತ್ತಿದೆ. ಗೌರವಿಸುವ ಕಾರಣದಿಂದಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಕಾರಿನಲ್ಲಿ ಕರೆದೊಯ್ದರು. ಮೋದಿ ಬೆಂಗಳೂರಿಗೆ ಬಂದಿದ್ದಾಗ ಭೇಟಿಯಾಗಲು ತೆರಳಿದ್ದ ಬಿಎಸ್‍ವೈ ಅವರ ಮುಖ ನೋಡದೆ ಅವಮಾನಿಸಿ ಹೊರಟು ಹೋದಂತಹ ದುರಹಂಕಾರಕ್ಕೆ ಮೊದಲು ಮದ್ದು ಹುಡುಕಿಕೊಳ್ಳಿ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ರೌಡಿ ಸೈಲೆಂಟ್ ಸುನಿಲ್ ಮತ್ತು ಬಿಜೆಪಿಗೆ ಸಂಬಂಧವಿಲ್ಲ: ಅಶ್ವತ್ಥನಾರಾಯಣ
ಸೈಲೆಂಟ್ ಸುನಿಲ್ ಮತ್ತು ಬಿಜೆಪಿಗೆ ಯಾವುದೆ ಸಂಬಂಧವಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಸೈಲೆಂಟ್ ಸುನಿಲ್, ಬಿಜೆಪಿ ಸದಸ್ಯತ್ವ ಪಡೆದಿದ್ದರೆ ಅದನ್ನು ರದ್ದು ಮಾಡಲಾಗುವುದು. ಅವರು ಪಕ್ಷದ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದರೆ, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಅಶ್ವತ್ಥ ನಾರಾಯಣ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯೊಳಗೆ ಲಿಂಗಾಯತ ವಿರೋಧಿ 'ಸಂತೋಷ' ಕೂಟ: ಕಾಂಗ್ರೆಸ್ ಸರಣಿ ಪೋಸ್ಟ್

Similar News