ಅರಣ್ಯ ಯೋಜನೆಗಳಿಂದಾಗಿ ಮಲೆನಾಡಿನ ಜನರ ಬದುಕುವ ಹಕ್ಕಿಗೆ ಧಕ್ಕೆ: ಕೆ.ಎಲ್. ಅಶೋಕ್

ಮಾ.28ಕ್ಕೆ ಭೂಮಿ, ವಸತಿ ಹಕ್ಕಿಗಾಗಿ ಬೃಹತ್ ಜಾಥಾ ಹಾಗೂ ಆಗ್ರಹ ಸಮಾವೇಶ

Update: 2023-03-18 17:26 GMT

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭೂಮಿ ಮತ್ತು ವಸತಿರಹಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಭೂಮಿ ಮತ್ತು ವಸತಿ ನೀಡುವುದಾಗಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಗೆದ್ದ ಬಳಿಕ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಗೂ ಮುನ್ನ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಭೂಮಿ ಮತ್ತು ವಸತಿ ಹಕ್ಕಿನ ಬೇಡಿಕೆ ಈಡೇರಿಸುವ ಭರವಸೆ ನೀಡಬೇಕು ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಸಂಚಾಲಕ ಕೆ.ಎಲ್.ಅಶೋಕ್ ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವಿರೋಧಿ ಅರಣ್ಯ ಯೋಜನೆಗಳು ನೆಲ ಮತ್ತು ನೆಲೆಯ ಬಗ್ಗೆ ಬಿಕಟ್ಟು ತಂದೊಡ್ಡಿವೆ. ಜನಾಭಿಪ್ರಾಯವನ್ನು ಸಂಗ್ರಹಿಸದೇ ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯಗಳ ಹೆಸರಿನಲ್ಲಿ ಇಡೀ ಮಲೆನಾಡಿನ ಭೂಮಿಯನ್ನು ಸೆಕ್ಷನ್4 ಎಂದು ಘೋಷಣೆ ಮಾಡಿ ಮಲೆನಾಡಿನ ಜನರಿಗೆ ದ್ರೋಹ ಎಸಗಿದ್ದಾರೆ. ಫಾರಂ. ನಂ.53, 57 ಹಾಗೂ 94ಸಿ, 94ಸಿಸಿ ಅಡಿಯಲ್ಲಿ ಅರ್ಜಿ ಸಿಲ್ಲಿಸಿದವರಿಗೆ ನಿವೇಶನ ಮತ್ತು ಭೂಮಿ ನೀಡುವ ಭರವಸೆ ನೀಡುತ್ತಿದ್ದಾರೆಯೇ ಹೊರತು ಬಡವರಿಗೆ ಭೂಮಿ, ವಸತಿ ಹಕ್ಕು ಸಿಗುತ್ತಿಲ್ಲ. ಮತ್ತೊಂದು ಕಡೆ ಅರಣ್ಯ ರಕ್ಷಣೆ ಹೆಸರಿನಲ್ಲಿ ಜನರ ಹಕ್ಕುಗಳನ್ನು ನಿರಾಕರಿಸುತ್ತಿದ್ದಾರೆ ಎಂದು ದೂರಿದರು.

ರೈತರು, ಬಡವರು, ದಲಿತ, ಕೂಲಿ ಕಾರ್ಮಿಕರಿಗೆ ಭೂಮಿ ಮತ್ತು ನಿವೇಶನ ನೀಡುವಂತೆ ಆಗ್ರಹಿಸಿ ಮಲೆನಾಡು ಭಾಗದ 8 ತಾಲೂಕುಗಳ ಜನರನ್ನು ಸೇರಿಸಿ ಮಾ.28ರಂದು ಚಿಕ್ಕಮಗಳೂರು ನಗರದ ಎಐಟಿ ಸಭಾಂಗಣದಲ್ಲಿ ಜಾಗೃತಿ ಜಾಥ ಮತ್ತು ಮಲೆನಾಡು ಜನರ ಬೃಹತ್ ಆಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶಕ್ಕೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಮುಕ್ತ ಆಹ್ವಾನವನ್ನು ನೀಡಲಾಗುವುದು ಎಂದ ಅವರು, ವಸತಿ ಹಕ್ಕಿಗಾಗಿ 94ಸಿ, 94ಸಿಸಿ ಅಡಿಯಲ್ಲಿ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದು, ಕೂಡಲೇ ಅರ್ಹರ ಮನೆಗಳಿಗೆ ಹಕ್ಕುಪತ್ರ ನೀಡಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೀಸಲಿಟ್ಟ ಜಾಗವನ್ನು ಕೂಡಲೇ ವಸತಿ ವಂಚಿತರಿಗೆ ಹಂಚಬೇಕು ಮತ್ತು ತಕ್ಷಣ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದರು.

ಮಲೆನಾಡು ಭಾಗದ ರೈತರನ್ನು ಬಾಧಿಸುತ್ತಿರುವ ತೊಂಡೆರೋಗ, ಕೊಳೆರೋಗ ಹಾಗೂ ಎಲೆಚುಕ್ಕಿರೋಗ ನಿವಾ ರಣೆ ಸಂಶೋಧನೆಯನ್ನು ತೀವ್ರಗೊಳಿಸಬೇಕು. ರೈತರಿಗೆ ಸೂಕ್ತ ಪರಿಹಾರವನ್ನು ಹಾಗೂ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದ ಅವರು, ಭೂಮಿ ಮತ್ತು ವಸತಿ ಸಮಸ್ಯೆ ನಿವಾರಣೆಗೆ ತೊಡಕಾಗಿರುವ ಸೆಕ್ಷನ್ 4(1) ಹಾಗೂ ಇತರೆ ಅರಣ್ಯ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಸಾರ್ವಜನಿಕ ಆಸ್ಪತ್ರೆಗಳನ್ನು ಮೇಲ್ದರ್ಜೇಗೇರಿಸಬೇಕು ಮತ್ತು ಸರ್ಕಾರಿ ಶಾಲೆಗಳನ್ನು ಅಭಿ ವೃದ್ಧಿಪಡಿಸಬೇಕು. ಗ್ರಾಮೀಣ ಭಾಗದ ರಸ್ತೆಗಳನ್ನು ದುರಸ್ಥಿಪಡಿಸಿ ಸುಸ್ಥಿತಿಯಲ್ಲಿಡಬೇಕು ಎಂದು ಒತ್ತಾಯಿಸಿದರು.

ಜನಶಕ್ತಿ ಸಂಘಟನೆಯ ಸಂಚಾಲಕ ಗೌಸ್ ಮೋಹಿದ್ದೀನ್ ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದು ಸಮಾವೇಶದಲ್ಲಿ ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಗಳನ್ನು ನೀಡಬೇಕು. ಒಂದು ವೇಳೆ ಭರವಸೆ ನೀಡದಿದ್ದಲ್ಲಿ ಮತದಾನದ ವೇಳೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರವೀಣ್‍ ಕುಮಾರ್, ಟಿ.ಎಲ್. ಗಣೇಶ್ ಉಪಸ್ಥಿತರಿದ್ದರು.

Similar News