ಜಪ್ತಿ ಮಾಡಿದ ಮದ್ಯ ಬಾಕ್ಸ್ ಗಳ ಬಗ್ಗೆ ಲೆಕ್ಕ ನೀಡದ ಹಿನ್ನೆಲೆ: ನಾಲ್ವರು ಇನ್‍ಸ್ಪೆಕ್ಟರ್ ಸೇರಿ ಕಾನ್‍ಸ್ಟೆಬಲ್ ಅಮಾನತು

Update: 2023-03-18 17:53 GMT

ಬೆಳಗಾವಿ: ಬೆಳಗಾವಿ ಜಿಲ್ಲೆ, ಖಾನಾಪುರ ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾಗಿದ್ದ ಮದ್ಯದ ಬಗ್ಗೆ ಸರಿಯಾದ ಲೆಕ್ಕ ನೀಡದೇ, ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆ ಅಬಕಾರಿ ಇಲಾಖೆಯ ಇಬ್ಬರು ಇನ್‍ಸ್ಪೆಕ್ಟರ್, ಇಬ್ಬರು ಸಬ್‍ಇನ್‍ಸ್ಪೆಕ್ಟರ್ ಹಾಗೂ ಒಬ್ಬ ಕಾನ್‍ಸ್ಟೆಬಲ್‍ನನ್ನು ಅಮಾನತು ಮಾಡಲಾಗಿದೆ.

ಅಬಕಾರಿ ಇಲಾಖೆಯ ಖಾನಾಪುರ ಠಾಣೆಯ ಇನ್‍ಸ್ಪೆಕ್ಟರ್ ದಾವಲಸಾಬ್ ಸಿಂಧೋಗಿ, ಕಣಕುಂಬಿ ತನಿಖಾ ಠಾಣೆಯ ಇನ್‍ಸ್ಪೆಕ್ಟರ್ ಸದಾಶಿವ ಕೋರ್ತಿ, ಸಬ್‍ಇನ್‍ಸ್ಪೆಕ್ಟರ್ ಪುಷ್ಪಾ ಗಡಾದಿ, ಖಾನಾಪುರ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಜಯರಾಮ ಹೆಗಡೆ ಮತ್ತು ಕಣಕುಂಬಿ ತನಿಖಾ ಠಾಣೆಯ ಕಾನ್‍ಸ್ಟೆಬಲ್ ರಾಯಪ್ಪ ಮಣ್ಣಿಕೇರಿ ಅಮಾನತುಗೊಂಡವರು. ಅಬಕಾರಿ ಜಿಲ್ಲಾ ಉಪ ಆಯುಕ್ತರಾದ ಎಂ. ವನಜಾಕ್ಷಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

301 ಮದ್ಯದ ಬಾಕ್ಸ್ ಗಳ ಬಗ್ಗೆ ಅಧಿಕಾರಿಗಳು ಲೆಕ್ಕ ನೀಡಿಲ್ಲ. ಇವುಗಳ ಅಂದಾಜು ಬೆಲೆ 32 ಲಕ್ಷ ರೂ. ಆಗುತ್ತದೆ. ಅಧಿಕಾರಿಗಳೇ ಇದನ್ನು ಬೇರೆ ಕಡೆ ಸಾಗಿಸಿದ ಅನುಮಾನಗಳಿವೆ. ಹೀಗಾಗಿ, ಅಮಾನತು ಮಾಡಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. 

Similar News