ಕಲಬುರಗಿ: ವಿದ್ಯುತ್ ತಗುಲಿ ತಾಯಿ, ಇಬ್ಬರು ಮಕ್ಕಳು ಮೃತ್ಯು

Update: 2023-03-19 06:17 GMT

ಕಲಬುರಗಿ:  ವಿದ್ಯುತ್ ತಗುಲಿದ ಪರಿಣಾಮ ಒಂದೇ ಕುಟುಂಬದ ತಾಯಿ ಮತ್ತು ಇಬ್ಬರು ಮಕ್ಕಳು  ಮೃತಪಟ್ಟು, ತಂದೆ ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದ ಧನಗರ ಗಲ್ಲಿಯಲ್ಲಿ ಶನಿವಾರ ರಾತ್ರಿ ವರದಿಯಾಗಿದೆ. 

ಮೃತರನ್ನು ಝರಣಮ್ಮ (45), ಮಹೇಶ (18), ಸುರೇಶ (20) ಎಂದು ಗುರುತಿಸಲಾಗಿದೆ. 

ನಿನ್ನೆ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ವಿದ್ಯುತ್ ತಂತಿ ಕಡಿದು ನೆಲಕ್ಕೆ ಬಿದ್ದಿತ್ತು. ರಾತ್ರಿ ಮಳೆ ಜೋರಾದಾಗ ದನಗಳನ್ನು ಆಶ್ರಯಕ್ಕೆ ಸ್ಥಳಾಂತರಿಸಲು ಕುಟುಂಬ ತೆರಳಿತ್ತು. ಮನೆ ಎದುರು ನಿಂತಿದ್ದ ನೀರಿನಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದು ವಿದ್ಯುತ್‌ ಪಸರಿಸಿತ್ತು ಎನ್ನಲಾಗಿದೆ.

ಈ ವೇಳೆ ರಾತ್ರಿ ಮನೆಯಿಂದ ಹೊರ ಬಂದ ನಾಲ್ವರಿಗೂ ವಿದ್ಯುತ್ ಶಾಕ್ ಪ್ರವಹಿಸಿ ತಾಯಿ ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ತಂದೆ ಅಂಬಣ್ಣನಿ ಗಂಭೀರವಾಗಿ ಗಾಯವಾಗಿದೆ.

ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂಚೋಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Similar News