ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಡಿಕೆಶಿ ಭೇಟಿ ವಿಚಾರ: ಪ್ರಹ್ಲಾದ್ ಜೋಶಿ ಹೇಳಿದ್ದೇನು?

Update: 2023-03-19 10:41 GMT

ಧಾರವಾಡ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಹೆಚ್ಚುತ್ತಿದ್ದು, ಈ ನಡುವೆ  ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲ್ಲದ್ ಅವರ ಮೇಲೆ ಇಂತಹ ಊಹಾಪೋಹಗಳು ಮೊದಲಿನಿಂದಲೂ ಇವೆ. ಅವರು ಬೆಳಿಗ್ಗೆ ನನ್ನ ಜೊತೆ ಮಾತನಾಡಿದ್ದಾರೆ. ಅದೆಲ್ಲವೂ ಸಂಪೂರ್ಣ ಸುಳ್ಳು. ಅವರು ಯಾರನ್ನೂ ಭೇಟಿಯಾಗಿಲ್ಲ ಎಂದರು.

'ಮಾಜಿ ಸಿಎಂ ಸಿದ್ದರಾಮಯ್ಯನವರು ಈಗ ಕೋಲಾರ ಕ್ಷೇತ್ರ ಬಿಟ್ಟು ವರುಣಾದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಕ್ಷೇತ್ರವೇ ಸಿಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ವ್ಯಂಗ್ಯವಾಡಿದರು. 

ಸಿ.ಟಿ.ರವಿ ಅವರು ಲಿಂಗಾಯತರ ಬಗ್ಗೆ ಹೇಳಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರವಿ ಅವರು ಲಿಂಗಾಯತರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ವೀಡಿಯೋ ಬೋಗಸ್ ಇದೆ. ಈಗಾಗಲೇ ಅದರ ಬಗ್ಗೆ ಫ್ಯಾಕ್ಟ್ ಚೆಕ್ ಆಗಿದೆ. ಕಾಂಗ್ರೆಸ್‌ನವರು ಇಂತಹ ಸುಳ್ಳು ವೀಡಿಯೋ ಬಿಟ್ಟು ಜನರನ್ನು ಮರುಳು ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನೇಕ ಮಾಧ್ಯಮಗಳಲ್ಲಿ ಅದು ಸುಳ್ಳು ಎಂದು ಬಂದಿದೆ. ಅದರ ಬಗ್ಗೆ ಚರ್ಚೆ ಅನಗತ್ಯ. ಏಕೆಂದರೆ ಸಿ.ಟಿ.ರವಿ ಪ್ರಬುದ್ಧ ರಾಜಕಾರಣಿ. ಅವರು ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅವರು ಈ ರೀತಿ ಹೇಳಲು ಸಾಧ್ಯವೇ ಇಲ್ಲ. ನಮಗೆ ಎಲ್ಲ ಸಮುದಾಯದ ಬಗ್ಗೆ ಗೌರವ ಇದೆ. ವಿಶೇಷವಾಗಿ ಲಿಂಗಾಯತರು ಹಾಗೂ ಬಸವಣ್ಣನವರ ಬಗ್ಗೆ ಗೌರವವಿದೆ ಎಂದರು.

Similar News