78 ಯೋಜನೆಗಳ 5,298.69 ಕೋಟಿ ರೂ.ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ಸಮಿತಿ ಅನುಮೋದನೆ

Update: 2023-03-19 17:16 GMT

ಬೆಂಗಳೂರು, ಮಾ.19: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗಾವಾಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 78 ಯೋಜನೆಗಳ 5298.69 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ.

ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆಯಲ್ಲಿ  ಇತ್ತೀಚೆಗೆ ನಡೆದ 138ನೆ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಒಟ್ಟು 78 ಯೋಜನೆಗಳಿಂದ 5298.69 ಕೋಟಿ ರೂ.ಬಂಡವಾಳ ಹೂಡಿಕೆಯಾಗಲಿದ್ದು, 13917 ಜನರಿಗೆ ಉದ್ಯೋಗಗಳು ಲಭಿಸಲಿವೆ ಎಂದು ತಿಳಿಸಿರುವ ಮುರುಗೇಶ್ ನಿರಾಣಿ, ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ.ಗಳಿಗೂ ಹೆಚ್ಚಿನ   ಬಂಡವಾಳ ಹೂಡಿಕೆಯ 17 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 3552.66 ಕೋಟಿ  ರೂ. ಬಂಡವಾಳ ಹೂಡಿಕೆಯಾಗಿ 6933 ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದ್ದಾರೆ.

15 ಕೋಟಿ ರೂ.ಯಿಂದ  50 ಕೋಟಿ ರೂ.ಒಳಗಿನ ಬಂಡವಾಳ ಹೂಡಿಕೆಯ 59 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಿದೆ. ಒಟ್ಟು 1542.88 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 6984 ಜನರಿಗೆ ಉದ್ಯೋಗ ಸೃಜನೆಯಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ  ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅನುಮೋದಿಸಿದ್ದು, 203.15 ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ ಆರ್.ಗಿರೀಶ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರಯ್ಯ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Similar News