ಸೀಲ್‌ ಮಾಡಿದ ಕವರ್‌ ನೀಡುವ ಪರಿಪಾಠ ನಿಲ್ಲಿಸಿ: ಅಟಾರ್ನಿ ಜನರಲ್‌ ಅವರನ್ನು ತರಾಟೆಗೆ ತೆಗೆದುಕೊಂಡ ಸಿಜೆಐ

Update: 2023-03-20 17:24 GMT

ಹೊಸದಿಲ್ಲಿ, ಮಾ. 20: ಸಮಾಶನ ಶ್ರೇಣಿಗೆ ಸಮಾನ ಪಿಂಚಣಿ (ಒಆರ್‌ಒಪಿ) ನಿಯಮದಡಿಯಲ್ಲಿ ಸಶಸ್ತ್ರ ಪಡೆಗಳ ನಿವೃತ್ತ ಸಿಬ್ಬಂದಿಗೆ ಪಾವತಿಸಬೇಕಾಗಿರುವ ಬಾಕಿ ಮೊತ್ತಕ್ಕೆ ಸಂಬಂಧಿಸಿ ಕೇಂದ್ರ ಸರಕಾರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಮಾಹಿತಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಈ ನಿಯಮದಂತೆ, ಸಮಾನ ಶ್ರೇಣಿ ಮತ್ತು ಸಮಾನ ಸೇವಾವಧಿ ಹೊಂದಿರುವ ನಿವೃತ್ತ ಸೇನಾ ಸಿಬ್ಬಂದಿಗೆ ಅವರು ಯಾವಾಗ ನಿವೃತ್ತಿ ಹೊಂದಿದರು ಎನ್ನುವುದನ್ನು ಪರಿಗಣಿಸದೆ ಸಮಾನ ಪಿಂಚಣಿ ನೀಡಲಾಗುತ್ತದೆ. ಈ ನಿಯಮದಡಿಯಲ್ಲಿ ನೀಡಬೇಕಾಗಿರುವ ಪಿಂಚಣಿ ಪಾವತಿಯಲ್ಲಿ ಆಗಿರುವ ವಿಳಂಬದ ಕುರಿತ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ.

ಸೋಮವಾರ, ಬಾಕಿ ಪಾವತಿಗೆ ಸಂಬಂಧಿಸಿದ ತನ್ನ ನಿಲುವನ್ನು ಕೇಂದ್ರ ಸರಕಾರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದಾಗ ಸುಪ್ರೀಂ ಕೋರ್ಟ್ ಅದನ್ನು ಸ್ವೀಕರಿಸಲು ನಿರಾಕರಿಸಿತು. ಸರಕಾರದ ಪ್ರತಿಕ್ರಿಯೆಯನ್ನು ನ್ಯಾಯಾಲಯವು ಮೊಕದ್ದಮೆಯ ಇತರ ಪಕ್ಷಗಳೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿರುವ ಮಾಹಿತಿಗಳನ್ನು ಪ್ರಕರಣದ ಇತರ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಮಾಹಿತಿಯು ಅತ್ಯಂತ ಸೂಕ್ಷ್ಮವಾಗಿದ್ದರೆ ಅಥವಾ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಲ್ಲವುಗಳಾಗಿದ್ದರೆ ಅಂಥ ಮಾಹಿತಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವ ಪರಿಪಾಠವಿದೆ.

ಮಾಹಿತಿಯನ್ನು ಗೌಪ್ಯವಾಗಿಡಬೇಕಾಗಿದೆ ಎಂದು ಹೇಳಿದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಅದನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. ವಿಷಯವು ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿರುವಾಗ, ಅದರಲ್ಲಿ ರಹಸ್ಯವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯ ಏನಿದೆ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಪ್ರಶ್ನಿಸಿದರು.

‘‘ವೈಯಕ್ತಿಕವಾಗಿ ನಾನು ಮುಚ್ಚಿದ ಲಕೋಟೆಗಳ ವಿರೋಧಿ. ಇಲ್ಲಿ ಏನಾಗುತ್ತದೆ ಎಂದರೆ, ಮುಚ್ಚಿದ ಲಕೋಟೆಯಲ್ಲಿ ನಾವು ಏನನ್ನೋ ನೋಡುತ್ತೇವೆ, ಆದರೆ, ಎದುರು ಪಕ್ಷಕ್ಕೆ ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಎದುರು ಪಕ್ಷಕ್ಕೆ ಅದನ್ನು ತೋರಿಸದೆಯೇ ನಾವು ಪ್ರಕರಣವನ್ನು ಇತ್ಯರ್ಥಪಡಿಸುತ್ತೇವೆ. ಇದು ಮೂಲಭೂತ ನ್ಯಾಯಾಂಗ ಪ್ರಕ್ರಿಯೆಗೆ ವಿರುದ್ಧವಾಗಿದೆ. ನ್ಯಾಯಾಲಯದಲ್ಲಿ ರಹಸ್ಯ ಇರಲು ಸಾಧ್ಯವಿಲ್ಲ’’ ಎಂದು ಚಂದ್ರಚೂಡ್ ಹೇಳಿದರು.

‘‘ಇಂಥ ಗೌಪ್ಯತೆಯು ಕೇಸ್ ಡೈರಿ ಸಲ್ಲಿಕೆಯ ವೇಳೆ ಸ್ವೀಕಾರಾರ್ಹ. ಯಾಕೆಂದರೆ, ಮಾಹಿತಿಯ ಮೂಲವು ಒಬ್ಬರ ಬದುಕಿನ ಮೇಲೆ ಪರಿಣಾಮ ಬೀರಬಹುದಾಗಿರುವುದರಿಂದ, ಅದನ್ನು ಆರೋಪಿಯು ನೋಡಬಾರದು’’ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

‘‘ಆದರೆ, ಇದು ನಮ್ಮ ತೀರ್ಪಿನಲ್ಲಿ ನೀಡಲಾಗಿರುವ ನಿರ್ದೇಶನಗಳಿಗೆ ಅನುಸಾರವಾಗಿ ಪಿಂಚಣಿ ಪಾವತಿಸುವುದಕ್ಕೆ ಸಂಬಂಧಿಸಿದೆ. ಇದರಲ್ಲಿ ಅಷ್ಟು ದೊಡ್ಡ ಗೌಪ್ಯತೆ ಏನಿದೆ?’’ ಎಂದು ನ್ಯಾಯಾಲಯ ಪ್ರಶ್ನಿಸಿತು. ಆದರೂ, ನ್ಯಾಯಾಲಯವು ಮುಚ್ಚಿದ ಲಕೋಟೆಯನ್ನು ಸ್ವೀಕರಿಸಬೇಕು ಎಂದು ವೆಂಕಟರಮಣಿ ಒತ್ತಾಯಿಸಿದರು. ಆದರೆ, ಚಂದ್ರಚೂಡ್ ನಿರಾಕರಿಸಿದರು.

‘ಸುಪ್ರೀಂ ಕೋರ್ಟ್‌ನಲ್ಲಿ ಮುಚ್ಚಿದ ಲಕೋಟೆ ಸಂಸ್ಕೃತಿಯನ್ನು ಕೊನೆಗೊಳಿಸಬೇಕು’ 

‘‘ಸುಪ್ರೀಂ ಕೋರ್ಟ್‌ನಲ್ಲಿ ಅನುಸರಿಸಲಾಗುತ್ತಿರುವ ಮುಚ್ಚಿದ ಲಕೋಟೆ ಸಂಸ್ಕೃತಿಯನ್ನು ನಾವು ಕೊನೆಗೊಳಿಸಬೇಕಾಗಿದೆ. ಯಾಕೆಂದರೆ, ಇನ್ನು ಹೈಕೋರ್ಟ್‌ಗಳೂ ಇದೇ ಸಂಸ್ಕೃತಿಯನ್ನು ಅನುಸರಿಸಲು ಆರಂಭಿಸಬಹುದು. ಇದು ನ್ಯಾಯ ಪ್ರಕ್ರಿಯೆಯ ಮೂಲ ಚೌಕಟ್ಟಿಗೆ ಸಂಪೂರ್ಣ ವಿರುದ್ಧವಾಗಿದೆ’’ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

ಬಾಕಿ ಪಾವತಿಗೆ ಒಂದು ವರ್ಷ ಸಮಯಾವಕಾಶ ನೀಡಿದ ನ್ಯಾಯಾಲಯ ನಿವೃತ್ತ ರಕ್ಷಣಾ ಸಿಬ್ಬಂದಿಗೆ ನೀಡಬೇಕಾಗಿರುವ ಬಾಕಿ ಪಾವತಿಯಲ್ಲಿ ಸರಕಾರ ಎದುರಿಸುತ್ತಿರುವ ಸಂಕಷ್ಟವನ್ನು ನ್ಯಾಯಾಲಯ ಗಮನಿಸಿದೆ, ಆದರೆ ಅದರ ಪಾವತಿ ಯೋಜನೆಯನ್ನು ನ್ಯಾಯಾಲಯ ತಿಳಿಯ ಬಯಸುತ್ತದೆ ಎಂದು ನ್ಯಾ. ಚಂದ್ರಚೂಡ್ ಹೇಳಿದರು. ಆಗ ಸರಕಾರದ ‘ಗೌಪ್ಯ ವರದಿ’ಯನ್ನು ಅಟಾರ್ನಿ ಜನರಲ್ ನ್ಯಾಯಾಲಯದಲ್ಲಿ ಓದಿದರು.

‘‘ಒಂದೇ ಕಂತಿನಲ್ಲಿ ಇಷ್ಟೊಂದು ದೊಡ್ಡದ ಮೊತ್ತವನ್ನು ಪಾವತಿಸಲು ಬಜೆಟ್‌ನಲ್ಲಿ ಹಣವಿಲ್ಲ. ಸಂಪನ್ಮೂಲಗಳು ಸೀಮಿತವಾಗಿವೆ ಹಾಗೂ ಖರ್ಚನ್ನು ನಿಯಂತ್ರಿಸಬೇಕಾಗಿದೆ. ಹಣಕಾಸು ಸಚಿವಾಲಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಒಂದೇ ಕಂತಿನಲ್ಲಿ ನೀಡಲು ಸಾಧ್ಯವಿಲ್ಲ ಎಂದು ಅದು ಹೇಳಿದೆ’’ ಎಂಬುದಾಗಿ ಅವರು ಓದಿದರು. ರಕ್ಷಣಾ ಸಚಿವಾಲಯವು ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅಫಿದಾವಿತ್ ಸಲ್ಲಿಸಿ, 2019ರಿಂದ 2022ರವರೆಗಿನ 28,000 ಕೋಟಿ ರೂಪಾಯಿ ಬಾಕಿ ಪಾವತಿಗೆ ವೇಳಾಪಟ್ಟಿಯನ್ನು ನೀಡಿತ್ತು.

ಬಳಿಕ ಸುಪ್ರೀಂ ಕೋರ್ಟ್, ವಿವಿಧ ಕಂತುಗಳಲ್ಲಿ ಬಾಕಿ ಪಾವತಿಸಲು ಕೇಂದ್ರ ಸರಕಾರಕ್ಕೆ 2024 ಫೆಬ್ರವರಿ 28ರವರೆಗೆ ಕಾಲಾವಕಾಶ ನೀಡಿತು. ಕುಟುಂಬ ಪಿಂಚಣಿ ಪಡೆಯುತ್ತಿರುವವರಿಗೆ ಮತ್ತು ಶೌರ್ಯ ಪ್ರಶಸ್ತಿಗಳ ವಿಜೇತರಿಗೆ (ಒಟ್ಟು 6 ಲಕ್ಷ ಮಂದಿ) ಮಾರ್ಚ್ 30ರೊಳಗೆ, 70 ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸಿನ ಮಾಜಿ ಸೈನಿಕರಿಗೆ (ಸುಮಾರು 4 ಲಕ್ಷ ಮಂದಿ) ಜೂನ್ 30ರೊಳಗೆ ಹಾಗೂ ಉಳಿದವರಿಗೆ (10ರಿಂದ 11 ಲಕ್ಷ ಮಂದಿ) ಆಗಸ್ಟ್ 31, ನವೆಂಬರ್ 30 ಮತ್ತು ಫೆಬ್ರವರಿ 28ರೊಳಗೆ ಬಾಕಿ ಪಿಂಚಣಿ ನೀಡುವಂತೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಆದೇಶ ನೀಡಿತು.

ಇದನ್ನೂ ಓದಿ: ಸ್ವಘೋಷಿತ ದೇವಮಾನವ ಧೀರೇಂದ್ರ ಕೃಷ್ಣ ಕಾರ್ಯಕ್ರಮದಲ್ಲಿ 36 ಮಂದಿಯ ಚಿನ್ನಾಭರಣ ಕಳವು

Similar News