ಸಾವಿರಾರು ಬಡವರ ಬದುಕು ಕಸಿದ ಬೆಂಗಳೂರು-ಮೈಸೂರು ದಶಪಥ ಯಾರಿಗಾಗಿ?

Update: 2023-03-20 08:04 GMT

ದುಡ್ಡಿರುವವರು, ಐಷಾರಾಮಿ ಶೋಕಿ ಮಾಡುವವರ ಪಾಲಿಗೆ ತೆರೆದಿರುವ ದಶಪಥ, ಹಳೆಯ ಹೆದ್ದಾರಿ ಬದಿಯಲ್ಲಿ ಕಮರುತ್ತಿರುವ ಬಡ ಬದುಕುಗಳತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಇದರ ಟೋಲ್ ದರ ನೋಡಿದರೆ ಸಾಮಾನ್ಯ ಜನರು ಇದರಲ್ಲಿ ಬರುವುದೇ ಬೇಡ ಎಂದು ಸರಕಾರ ನಿರ್ಧರಿಸಿರುವ ಹಾಗಿದೆ. ಬಡವರಿಗೆ ಬೇಕಿರದ ಇಂಥವುಗಳ ಮೂಲಕವೇ ತನ್ನ ಅಭಿವೃದ್ಧಿಯ ಬಗ್ಗೆ ಬಡಾಯಿ ಕೊಚ್ಚಿ ಕೊಳ್ಳುವ ರಾಜಕಾರಣ ಕೂಡ ಬಡವರ ಕಣ್ಣೀರನ್ನು ಗಮನಿಸುವುದಿಲ್ಲ.

ಹೊಸದಾಗಿ ನಿರ್ಮಾಣಗೊಂಡಿರುವ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ದಶಪಥ ಹೆದ್ದಾರಿಯನ್ನು ಮಾ.12ರಂದು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಕಾಮಗಾರಿ ಪೂರ್ತಿ ಮುಗಿಯದೇ ಇದ್ದರೂ, ಚುನಾವಣೆ ಹತ್ತಿರವಾ ಗುತ್ತಿರುವುದರಿಂದ ಆತುರವಾಗಿಯೇ ದಶಪಥ ಉದ್ಘಾಟಿಸಲಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ. ಇಷ್ಟು ಅವಸರದಲ್ಲಿ ಉದ್ಧಾಟಿಸುವ ಅಗತ್ಯವಿತ್ತೆ ಎಂಬ ಪ್ರಶ್ನೆ, ಅದಕ್ಕಿಂತಲೂ ಈ ದಶಪಥ ನಿಜವಾಗಿಯೂ ಬೇಕಿತ್ತೆ ಮತ್ತು ಇದು ನಿಜವಾಗಿಯೂ ದಶಪಥ ಹೆದ್ದಾರಿಯೇ ಎಂಬ ಪ್ರಶ್ನೆಗಳಿವೆ.

ಬೆಂಗಳೂರಿನಿಂದ ನಿಡಘಟ್ಟ ಹಾಗೂ ನಿಡಘಟ್ಟದಿಂದ ಮೈಸೂರನ್ನು ಸಂಪರ್ಕಿಸುವ 119 ಕಿಲೋಮೀಟರ್ ಉದ್ದದ ಹೆದ್ದಾರಿ ಇದು. ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ, ಎನ್‌ಎಚ್ 275 ನಿರ್ಮಾಣವಾಗಿರುವುದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭಾರತ್ ಮಾಲಾ ಯೋಜನೆಯಡಿ. 2019ರ ಮೇ ತಿಂಗಳಲ್ಲಿ ಕಾಮ ಗಾರಿ ಆರಂಭವಾಗಿತ್ತು. ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಆಗ ಹೇಳಲಾಗಿತ್ತು. ನಿರ್ಮಾಣ ವೆಚ್ಚ 8,480 ಕೋಟಿ ರೂ. ಈ ಹೆದ್ದಾರಿಯಿಂದಾಗಿ ಬೆಂಗಳೂರು - ಮೈಸೂರು ನಡುವಣ ಪ್ರಯಾಣದ ಸಮಯ 3 ಗಂಟೆಯಿಂದ 90 ನಿಮಿಷಕ್ಕೆ ಇಳಿಕೆಯಾಗಲಿದೆ. ಕ್ರಮೇಣ 75 ನಿಮಿಷವಷ್ಟೇ ಸಾಕು ಎಂದೂ ಹೇಳಲಾಗುತ್ತಿದೆ.

ಎಕ್ಸ್‌ಪ್ರೆಸ್ ವೇ ಯ ಪ್ರಸಕ್ತ ಸ್ಥಿತಿ ಏನು?
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಪ್ರಕಾರ, ಬೆಂಗಳೂರು ಮತ್ತು ನಿಡಘಟ್ಟ ನಡುವಿನ ಸರ್ವಿಸ್ ರಸ್ತೆಯ ಕೆಲವು ಕಾಮಗಾರಿಗಳು ಇನ್ನೂ ಬಾಕಿ ಉಳಿದಿವೆ. ಆದರೂ, ಈಗಾಗಲೇ ಬೆಂಗಳೂರು ಮತ್ತು ಮೈಸೂರು ನಡುವೆ ಐದು ಬೈಪಾಸ್‌ಗಳನ್ನು ತೆರೆದಿದ್ದಾರೆ.

ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಬಂದ ಹೆದ್ದಾರಿ ಇದು. ದಶಪಥ ಎನ್ನುವಾಗ ಮೊದಲು ಎದ್ದಿದ್ದು ಲೇನ್ ಗೊಂದಲ. ಕಡೆಗಿದಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯೇ ತೆರೆಯೆಳೆದಿದ್ದರು. 6 ಲೇನ್‌ಗಳನ್ನು ಪ್ರಮುಖ ಕ್ಯಾರೇಜ್ ವೇ  ಆಗಿ ಗುರುತಿಸಲಾಗಿದ್ದು, ಎರಡೂ ಬದಿಗೆ 2 ಲೇನ್‌ನ ಸರ್ವೀಸ್ ರಸ್ತೆ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.

ಸರ್ವೀಸ್ ರಸ್ತೆಯನ್ನೂ ಎಕ್ಸ್‌ಪ್ರೆಸ್ ವೇಯ ಭಾಗವಾಗಿಯೇ ಗುರುತಿಸಲಾಗುತ್ತದೆ ಎಂಬುದು ಪರಿಣಿತರ ಅಭಿಪ್ರಾಯ. ತುರ್ತು ಸಂದರ್ಭಗಳಿಗಾಗಿ ಎಕ್ಸ್‌ಪ್ರೆಸ್ ವೇಗಳ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆಗಳಿರಬೇಕು ಮತ್ತು ರಸ್ತೆ ತಡೆಗಳೂ ಇರಬೇಕು ಎಂದು ಕೇಂದ್ರ ಸರಕಾರದ ನಿಯಮ ಹೇಳುತ್ತದೆ. ಇದರಂತೆ, ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ 10 ಲೇನ್‌ಗಳದ್ದಾದರೂ 6 ಲೇನ್‌ಗಳನ್ನು ಪ್ರಮುಖ ಲೇನ್‌ಗಳೆಂದು ಪರಿಗಣಿಸಲಾಗುತ್ತದೆ. ಉಳಿದ ನಾಲ್ಕನ್ನು (ಎರಡೂ ಬದಿಯ ತಲಾ 2 ಲೇನ್) ಸರ್ವೀಸ್ ರಸ್ತೆ ಎಂದೇ ಪರಿಗಣಿಸಲಾಗುತ್ತದೆ. ಈಗ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ವಸೂಲಿ ಶುರುವಾಗಿರುವುದಕ್ಕೆ ಮತ್ತು ಹೆಚ್ಚಿನ ದರಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಥಳೀಯರೂ 70 ರೂ. ಪಾವತಿಸಿ ಓಡಾಡಬೇಕಾದ ಸ್ಥಿತಿಗೆ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೆ ಒಮ್ಮೆ ಪೂರ್ಣ ರೂಪದಲ್ಲಿ ಸಂಚಾರಕ್ಕೆ ತೆರೆದ ಬಳಿಕ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂಬುದೂ ಆಕ್ರೋಶಕ್ಕೆ ಕಾರಣವಾಗಿದೆ.

ವೇಗದ ಚಾಲನೆಗೆ ಅವಕಾಶವಿರುವ ಹೆದ್ದಾರಿಯಲ್ಲಿ ಅಪಘಾತ ತಪ್ಪಿಸುವ ಕ್ರಮಗಳಿಲ್ಲದಿರುವುದಕ್ಕೂ ತಕರಾರುಗಳೆದ್ದಿವೆ. ಅಪಾಯದ ಸ್ಥಳಗಳಲ್ಲಿ ವೇಗಮಿತಿ ಸೂಚಿಸುವ ಫಲಕಗಾಳಗಲೀ ಫ್ಲೈಓವರ್, ಸೇತುವೆಗಳು, ಬೈಪಾಸ್ ಇರುವಲ್ಲಿ ಸೂಚನಾ ಫಲಕಗಳಿಲ್ಲ ಎಂಬ ದೂರುಗಳಿವೆ. ಹೆದ್ದಾರಿಯುದ್ದಕ್ಕೂ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯವಿಲ್ಲ ಎಂದೂ ದೂರಲಾಗಿದೆ. ವಾಹನ ಹಾಳಾದರೆ, ಅಪಘಾತಕ್ಕೀಡಾದರೆ ಅಲ್ಲಿ ಸಹಾಯಕ್ಕೆ ಯಾವುದೇ ವ್ಯವಸ್ಥೆಯಿಲ್ಲ ಎಂಬ ದೂರೂ ಇದೆ. ಹೆದ್ದಾರಿ ಉದ್ಘಾಟನೆ ದಿನವೇ ಅಪಘಾತವಾಗಿತ್ತೆಂಬುದೂ ಇಲ್ಲಿ ಗಮನೀಯ. ಇವೆಲ್ಲದರ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಬೀದಿ ಹೋರಾಟದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಜನಾಭಿಪ್ರಾಯ ಮೂಡಿಸುವ ಪ್ರಯತ್ನ ನಡೆಸಿವೆ.

ಇದೆಲ್ಲದರ ನಡುವೆ ಈ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಪಡೆದುಕೊಳ್ಳುವ ವಿಚಾರದಲ್ಲಿಯೂ ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತಾರೂಢ ಬಿಜೆಪಿ ಮಧ್ಯೆ ರಾಜಕೀಯ ಜಿದ್ದಾಜಿದ್ದಿ ಏರ್ಪಟ್ಟಿದೆ. ಯುಪಿಎ ಸರಕಾರವಿದ್ದಾಗ ಏನೂ ಮಾಡಲಿಲ್ಲ. ಮೋದಿ ಸರಕಾರವೇ ಹಣ ಬಿಡುಗಡೆ ಮಾಡಿ ಯೋಜನೆ ಪೂರ್ಣಗೊಳಿಸಿದೆ. ಕ್ರೆಡಿಟ್ ಯಾರಿಗೆ ಹೋಗಬೇಕೆಂಬುದನ್ನು ಜನರೇ ತೀರ್ಮಾನಿಸುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇನ್ನೊಂದೆಡೆ ಇದು ಸಿದ್ದರಾಮಯ್ಯ ಮತ್ತು ನನ್ನ ಕನಸು ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ. ಇದರ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು ಯುಪಿಎ ಸರಕಾರದ ಅವಧಿಯಲ್ಲಿ. ಈಗ ಬೊಗಳೆ ಬಿಡುತ್ತಿರುವ ಪ್ರತಾಪ ಸಿಂಹ ಆಗ ಸಂಸದರಾಗಿರಲಿಲ್ಲ ಎಂಬುದು ಮಹದೇವಪ್ಪ ಟೀಕೆ. ಎಲ್ಲ ತಾನೇ ಮಾಡಿಸಿದ್ದು ಎಂಬ ರೀತಿಯಲ್ಲಿ ಪ್ರತಾಪ ಸಿಂಹ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು ಕೂಡ ವ್ಯಂಗ್ಯವಾಡಿದ್ದಾರೆ.

ನೆಹರೂ ಅಂದು ಕಟ್ಟಿದ್ದ ಸಂಸ್ಥೆಗಳೇ ಇಂದು ದೇಶದ ಆರ್ಥಿಕತೆಯ, ಒಟ್ಟಾರೆ ಅಭಿವೃದ್ಧಿಯ ಆಧಾರಸ್ತಂಭವಾಗಿದ್ದರೂ, ಅದನ್ನು ಒಪ್ಪಲು ತಯಾರಿಲ್ಲದ ಬಿಜೆಪಿ, ಎಲ್ಲವನ್ನೂ ತಾನೇ ಮಾಡಿದ್ದು ಎಂದು ಹೇಳಿಕೊಳ್ಳುವ ಸಣ್ಣ ಅವಕಾಶವನ್ನೂ ಬಿಡುವುದಿಲ್ಲ ಎಂಬುದಕ್ಕೆ ಈಗ ಈ ದಶಪಥ ಯೋಜನೆ ಮತ್ತಿದರ ಅವಸರದ ಲೋಕಾರ್ಪಣೆ ಕೂಡ ಒಂದು ಉದಾಹರಣೆ.

ಇದೆಲ್ಲದರ ನಡುವೆ, ನಿಜವಾಗಿಯೂ ಸಂಕಟಪಡುತ್ತಿರುವವರು ಹಳೆಯ ಹೆದ್ದಾರಿಯ ಎರಡೂ ಕಡೆಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಸಾವಿರಾರು ಮಂದಿ. ದಶಪಥದ ಪರಿಣಾಮ ಚನ್ನಪಟ್ಟಣದಲ್ಲಿ ಮರದ ಆಟಿಕೆ ಮಳಿಗೆಗಳು ನಿರ್ಜನವಾಗಿರುವ ಬಗ್ಗೆ, ವಡೆಗೆ ಹೆಸರಾದ ಮದ್ದೂರಿನಲ್ಲಿ ಅಂಗಡಿಗಳು ಮುಚ್ಚಿವೆ ಎಂಬ ಸೂಚನಾಫಲಕ ಕಂಡುಬರುತ್ತಿರುವ ಬಗ್ಗೆ, ರಾಮನಗರ, ಮಂಡ್ಯದಾದ್ಯಂತ ಸಾವಿರಾರು ಬಡ ವ್ಯಾಪಾರಿಗಳು ತಮ್ಮ ಜೀವನೋಪಾಯದ ಮೇಲೆಯೇ ಈ ಹೆದ್ದಾರಿ ಹಾದುಹೋದಂತಾಗಿರುವ ಬಗ್ಗೆ ನೋವು ವ್ಯಕ್ತಪಡಿಸುತ್ತಿರುವ ಬಗ್ಗೆ ಬರುತ್ತಿರುವ ವರದಿಗಳು ಮತ್ತೊಂದು ವಾಸ್ತವವನ್ನು ಹೇಳುತ್ತಿವೆ. ಬಹಳ ಕಡಿಮೆ ಸಮಯದಲ್ಲಿ ಹೋಗಬಹುದೆಂಬ ಕಾರಣಕ್ಕೆ ಎಕ್ಸ್ ಪ್ರೆಸ್ ವೇಯನ್ನೇ ಪ್ರಯಾಣಿಕರು ಬಳಸುವುದರಿಂದ ಹೆದ್ದಾರಿ ಬದಿಯ ವ್ಯಾಪಾರಿಗಳ ಪಾಲಿಗೆ ಜೀವನೋಪಾಯ ಇನ್ನು ಕಷ್ಟವಾಗಲಿದೆ.

ಜೆಡಿಎಸ್ ನಾಯಕ ಕುಮಾರಸ್ವಾಮಿ, ದಶಪಥ ಹೆದ್ದಾರಿ ಯಾರಿಗೆ ಉಪಯೋಗ, ಹಣ ಮಾಡಲು ಯಾರಿಗೆ ರಹದಾರಿ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣದ ವರಿಗೆ ಉಪಯೋಗ ಇಲ್ಲವೇ ಇಲ್ಲ ಎಂದು ಕಿಡಿಕಾರಿದ್ದಾರೆ. ಈ ದಶಪಥ ಹೆದ್ದಾರಿಯ ಮಾರಣಾಂತಿಕ ಹೊಡೆತ ಮೊದಲು ಬಿದ್ದಿರುವುದು ಮಂಡ್ಯ ಜಿಲ್ಲೆಯ ಜನರಿಗೆ. ಆರ್ಥಿಕವಾಗಿ, ಸಾಮಾಜಿಕವಾಗಿ ಈ ಜಿಲ್ಲೆಯನ್ನು ಮುಗಿಸುವುದೇ ದಶಪಥ ಹೆದ್ದಾರಿಯ ದುರುದ್ದೇಶವಾ? ಜಿಲ್ಲೆಯ ಆರ್ಥಿಕ ಸರಪಳಿಗೆ ಕುಣಿಕೆ ಬಿಗಿಯುವುದೇ ಇದರ ಒಳ ಉದ್ದೇಶವಾ ಎನ್ನುವುದು ನನ್ನ ಅನುಮಾನ ಎಂದು ಅವರು ಹೇಳಿದ್ದಾರೆ.

ಅವರು ಹೇಳಿರುವಂತೆ, ಮಧ್ಯಮ,ಸಣ್ಣಗಾತ್ರದ ಹೊಟೇಲು, ಸಣ್ಣ-ಅತಿಸಣ್ಣ ಉದ್ದಿಮೆ, ಕಬ್ಬುಬೆಲ್ಲ, ಪೆಟ್ರೋಲ್ ಬಂಕ್ ಸೇರಿ ಅಗತ್ಯ ವಸ್ತುಗಳ ಸುಮಾರು 2,600ಕ್ಕೂ ಹೆಚ್ಚು ಸ್ಥಳೀಯ ಉದ್ಯಮ ನೆಲಕಚ್ಚಿವೆ. ಎಳನೀರು ವ್ಯಾಪಾರಕ್ಕೂ ಅವಕಾಶ ಇಲ್ಲವಾಗಿದೆ. 6,000ಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ. ಮಂಡ್ಯ, ರಾಮನಗರ ಜಿಲ್ಲೆಗಳ ಜನರ ಜೀವನಾಡಿಯೇ ಆಗಿದ್ದ ಹಳೆಯ ಹೆದ್ದಾರಿ ಲಕ್ಷಾಂತರ ಜನರ ಜೀವನಕ್ಕೆ ದಾರಿ ಆಗಿತ್ತು. ಹೊಸ ಹೆದ್ದಾರಿ ಕೆಲವರಿಗೆ ಹಣದ ದಾರಿಯಷ್ಟೆ.

ಹಳೆಯ ಹೆದ್ದಾರಿ ಜತೆ ಹಾಸು ಹೊಕ್ಕಾಗಿದ್ದ ಜನರು, ಈಗ ತಮ್ಮ ಊರುಗಳಿಗೆ ತೆರಳಲು ಕನಿಷ್ಠ 10ರಿಂದ 25 ಕಿ.ಮೀ. ಸುತ್ತಿ ಬರಬೇಕಿದೆ. ಮನೆಯ ಎದುರಿನಲ್ಲೇ ಇರುವ ಕೃಷಿ ಭೂಮಿಗೆ ಕಿಲೋ ಮೀಟರ್ ಗಟ್ಟಲೆ  ಸುತ್ತಿ ಬಳಸಿ ಹೋಗುವ ಪರಿಸ್ಥಿತಿ. ಸ್ಥಳೀಯರಿಗೆ ಈ  ಸುತ್ತುವ ಶಿಕ್ಷೆ ಯಾಕೆ? ಭೂಮಿ ಕಳೆದುಕೊಂಡ ಪುಣ್ಯಕ್ಕೆ ಅವರು ಬಳಸಿ ಬಳಸಿ ಬಸವಳಿದು ತಮ್ಮ ಹಳ್ಳಿಗಳಿಗೆ ಬರಬೇಕಾ? ಇದು ಯಾವ ಸೀಮೆಯ ನ್ಯಾಯ? ದಶಪಥ ಕಲ್ಪಿಸಿದ ದೌರ್ಭಾಗ್ಯ ಇದು ಎಂಬುದು ಕುಮಾರ ಸ್ವಾಮಿ ಆಕ್ರೋಶ.

ದುಡ್ಡಿರುವವರು, ಐಷಾರಾಮಿ ಶೋಕಿ ಮಾಡುವವರ ಪಾಲಿಗೆ ತೆರೆದಿರುವ ದಶಪಥ, ಹಳೆಯ ಹೆದ್ದಾರಿ ಬದಿಯಲ್ಲಿ ಕಮರುತ್ತಿರುವ ಬಡ ಬದುಕುಗಳತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಇದರ ಟೋಲ್ ದರ ನೋಡಿದರೆ ಸಾಮಾನ್ಯ ಜನರು ಇದರಲ್ಲಿ ಬರುವುದೇ ಬೇಡ ಎಂದು ಸರಕಾರ ನಿರ್ಧರಿಸಿರುವ ಹಾಗಿದೆ. ಬಡವರಿಗೆ ಬೇಕಿರದ ಇಂಥವುಗಳ ಮೂಲಕವೇ ತನ್ನ ಅಭಿವೃದ್ಧಿಯ ಬಗ್ಗೆ ಬಡಾಯಿ ಕೊಚ್ಚಿ ಕೊಳ್ಳುವ ರಾಜಕಾರಣ ಕೂಡ ಬಡವರ ಕಣ್ಣೀರನ್ನು ಗಮನಿಸುವುದಿಲ್ಲ.
ಹೀಗಿರುವಾಗ ದಶಪಥ ಯಾರಿಗೋಸ್ಕರ?


ಎಕ್ಸ್‌ಪ್ರೆಸ್ ವೇ ಮಹತ್ವ

► ಬೆಂಗಳೂರು- ಮೈಸೂರಿನ ನಡುವಣ ಸಂಪರ್ಕದ ದೃಷ್ಟಿಯಿಂದ ಎಕ್ಸ್‌ಪ್ರೆಸ್ ವೇ ಮಹತ್ವದ್ದಾಗಿದೆ.
► ಊಟಿ, ಕೇರಳ, ಕೊಡಗು ಪ್ರದೇಶಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿಯೂ ಪ್ರಾಮುಖ್ಯತೆಯಿದೆ.
► ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದಲೂ ಇದು ಅಗತ್ಯವಾಗಿತ್ತು ಎನ್ನಲಾಗುತ್ತಿದೆ.

ಎಕ್ಸ್‌ಪ್ರೆಸ್ ವೇ ವಿಶೇಷ

► 19 ಪ್ರಮುಖ ಸೇತುವೆಗಳು

► 44 ಕಿರು ಸೇತುವೆಗಳು

► 50 ಅಂಡರ್ ಪಾಸ್‌ಗಳು

► 4 ರೈಲ್ವೆ ಮೇಲ್ಸೇತುವೆಗಳು

► 3.5 ಕಿ.ಮೀ. ಉದ್ದದ ಎಲಿವೇಟೆಡ್ ಹೈವೇ

► 5 ಬೈಪಾಸ್‌ಗಳು (ಬಿಡದಿ, ರಾಮನಗರ-ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ).

► ಸಂಚಾರ ದಟ್ಟಣೆ ತಡೆಯುವ ಸಲುವಾಗಿ ಬೈಪಾಸ್‌ಗಳ ನಿರ್ಮಾಣ 

 ಟೋಲ್ ದರ 

ಇತ್ತೀಚೆಗಷ್ಟೇ ಹೆದ್ದಾರಿ ಪ್ರಾಧಿಕಾರ ಬಿಡುಗಡೆ ಮಾಡಿರುವ ಟೋಲ್ ದರ ಪಟ್ಟಿ ಹೀಗಿದೆ:

ದರ ಪಟ್ಟಿಯಲ್ಲಿ ಏಕಮುಖ, ಅದೇ ದಿನ ಮರುಸಂಚಾರ, ನಿಗದಿತ ವಾಹನ ಸ್ಥಳೀಯವಾಗಿದ್ದರೆ ಅದಕ್ಕೆ ವಿಧಿಸಲಾಗುವ ದರ ಮತ್ತು 50 ಸಂಚಾರಕ್ಕೆ ಅವಕಾಶವಿರುವ ತಿಂಗಳ ಪಾಸ್ ದರ ನಮೂದಿಸಲಾಗಿದೆ. ಅದರ ಪ್ರಕಾರ,

► ಕಾರು, ಜೀಪ್, ವ್ಯಾನ್: ಏಕಮುಖ 135 ರೂ., ಅದೇ ದಿನ ಮರುಸಂಚಾರಕ್ಕೆ 205 ರೂ., ಸ್ಥಳೀಯ ವಾಹನವಾಗಿದ್ದರೆ 70 ರೂ. ಹಾಗೂ ತಿಂಗಳ ಪಾಸ್‌ಗೆ 4,525 ರೂ.

► ಲಘು ವಾಣಿಜ್ಯ/ಸರಕು ವಾಹನ/ಮಿನಿ ಬಸ್: 220 ರೂ., 320 ರೂ., 110 ರೂ., 7,315 ರೂ.

► ಬಸ್/ಟ್ರಕ್ (ಡಬಲ್ ಆಕ್ಸೆಲ್) : 460 ರೂ., 690 ರೂ., 230 ರೂ., 15,325 ರೂ.

► ವಾಣಿಜ್ಯ ವಾಹನ (ಟ್ರಿಪಲ್ ಆಕ್ಸೆಲ್): 500 ರೂ., 750 ರೂ., 250 ರೂ., 16,715 ರೂ.