ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ. ಆರ್ಥಿಕ ನೆರವು: 4ನೇ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್

Update: 2023-03-20 13:30 GMT

ಬೆಳಗಾವಿ, ಮಾ.20: ಕಾಂಗ್ರೆಸ್ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯುವ ಮತದಾರರನ್ನು ತನ್ನತ್ತ ಸೆಳೆಯಲು ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ಒದಗಿಸುವ ‘ಯುವ ನಿಧಿ’ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಪಕ್ಷದ ನಾಲ್ಕನೆ ಗ್ಯಾರಂಟಿಯನ್ನು ಘೋಷಿಸಿದೆ.

ಸೋಮವಾರ ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಯುವ ಕ್ರಾಂತಿ’ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ನಾಯಕರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಸಂಖ್ಯೆ 4 ‘ಯುವ ನಿಧಿ’ ಯೋಜನೆಯನ್ನು ಜಾರಿ ಮಾಡುವುದಾಗಿ ಪ್ರಕಟಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ ‘ಯುವ ನಿಧಿ’ ಯೋಜನೆಯಡಿ ಪ್ರತಿ ಪಧವಿಧರ ನಿರುದ್ಯೋಗಿಗೆ ಮಾಸಿಕ 3 ಸಾವಿರ ರೂ., ಡಿಪ್ಲೋಮಾ ಪದವೀಧರರಿಗೆ 1,500 ರೂ.ಗಳನ್ನು 2 ವರ್ಷ ಕಾಲ ನೀಡುವುದಾಗಿದೆ. ಅಲ್ಲದೆ, 10 ಲಕ್ಷ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗುವುದು. ಈ ಪೈಕಿ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಖಾಲಿ ಇರುವ 2.50 ಲಕ್ಷ ಉದ್ಯೋಗಗಳು ಸೇರಿವೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು.

ರಾಜ್ಯದ ಮಹಿಳೆಯರ ಕಷ್ಟಕ್ಕೆ ಪರಿಹಾರ ನೀಡಲು ‘ಗೃಹಲಕ್ಷ್ಮಿ' ಯೋಜನೆ ಮೂಲಕ ಮನೆಯೊಡತಿಗೆ 2 ಸಾವಿರ ರೂ.ಪೆÇ್ರೀತ್ಸಾಹ ಧನ, ಅನ್ನ ಭಾಗ್ಯ ಯೋಜನೆ ಮೂಲಕ ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ, ‘ಗೃಹಜ್ಯೋತಿ' ಯೋಜನೆ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿನ ಬಿಜೆಪಿ ಸರಕಾರ ದೇಶದ ಅತ್ಯಂತ ಭ್ರಷ್ಟ ಸರಕಾರ ಎಂದು ಎಲ್ಲ ವರ್ಗದ ಜನ ಹೇಳುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೆ ಪ್ರಧಾನಿಗೆ ಪತ್ರ ಬರೆದು ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎಂದು ದೂರಿದ್ದಾರೆ. ಆದರೂ ಪ್ರಧಾನಿ ಈ 40 ಪರ್ಸೆಂಟ್ ಕಮಿಷನ್ ಸರಕಾರದ ಬಗ್ಗೆ ಮಾತನಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದರು.

ಕೆಎಸ್‍ಡಿಎಲ್‍ನಲ್ಲಿ ಹಗರಣ ನಡೆದು ಶಾಸಕನ ಪುತ್ರ ಸಿಕ್ಕಿಬಿದ್ದಾಗ 8 ಕೋಟಿ ರೂ.ಸಿಗುತ್ತದೆ. ಸರಕಾರ ಅವರ ರಕ್ಷಣೆ ಮಾಡುತ್ತದೆ. ಪಿಎಸ್ಸೈ ನೇಮಕಾತಿ, ಸಹಾಯಕ ಪ್ರಾಧ್ಯಾಪಕ, ಸಹಾಯಕ ಇಂಜಿನಿಯರ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಈ ಎಲ್ಲ ಆರೋಪಗಳು ಲಕ್ಷಾಂತರ ಯುವಕರ ದೂರಾಗಿದೆ ಎಂದು ಅವರು ಹೇಳಿದರು. 

ಭಾರತ ಜೋಡೋ ಯಾತ್ರೆ ಕರ್ನಾಟಕದ ಮೂಲಕ ಸಾಗಿದಾಗ ಎಲ್ಲ ವರ್ಗದ ಜನ ಅಭೂತಪೂರ್ವ ಬೆಂಬಲ ನೀಡಿ ನಮಗೆ ಶಕ್ತಿ ತುಂಬಿದ್ದಿರಿ, ಯಾತ್ರೆ ಯಶಸ್ಸುಗೊಳಿಸಿದ್ದಿರಾ. ಅದಕ್ಕಾಗಿ ನಿಮಗೆ ಧನ್ಯವಾದಗಳು. ಈ ದೇಶ ಯಾರೊ ಒಂದಿಬ್ಬರ ಸ್ವತ್ತಲ್ಲ, ಅದಾನಿಯವರ ಸ್ವತ್ತಲ್ಲ. ರೈತರು, ಯುವಕರು, ಬಡವರಿಗೆ ಸೇರಿದ ದೇಶವಿದು ಎಂಬ ಸಂದೇಶವನ್ನು ಭಾರತ ಜೋಡೊ ಯಾತ್ರೆ ನೀಡಿತ್ತು ಎಂದು ಅವರು ಹೇಳಿದರು.

ನಮ್ಮ ಯಾತ್ರೆಯಲ್ಲಿ ದೊಡ್ಡ ರಥ ಇರಲಿಲ್ಲ, ಎಲ್ಲರೂ ಸಮಾನವಾಗಿ ಹೆಜ್ಜೆ ಹಾಕುತ್ತಿದ್ದರು. ಈ ಯಾತ್ರೆ ಎಲ್ಲರಿಗೂ ಭಾತೃತ್ವ ಸಂದೇಶ ನೀಡಿತ್ತು. ರಾಜ್ಯದಲ್ಲಿ ಸಿಕ್ಕ ಬೆಂಬಲ ಎಲ್ಲೆಡೆ ಸಿಕ್ಕಿತ್ತು. ದ್ವೇಷದ ಮಾರುಕಟ್ಟೆಯಲ್ಲಿ ಲಕ್ಷಾಂತರ ಮಂದಿ ಪ್ರಿತಿಯ ಅಂಗಡಿ ತೆರೆದರು ಎಂದು ರಾಹುಲ್ ಗಾಂಧಿ ತಿಳಿಸಿದರು.

ಎಸ್ಸಿ-ಎಸ್ಟಿಗಳಿಗೆ ಕ್ರಮವಾಗಿ ಶೇ.17 ಹಾಗೂ ಶೇ.7ಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವ ಸರಕಾರ ನೀಡಿರುವ ಭರವಸೆಯನ್ನು ಪೂರ್ಣಗೊಳಿಸಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಭ್ರಷ್ಟ ಬಿಜೆಪಿಯನ್ನು ಸೋಲಿಸಬೇಕು. ಚುನಾವಣೆ ಸಂದರ್ಭದಲ್ಲಿ ನೀವು ಎಲ್ಲಿಗೆ ಕರೆಯುತ್ತೀರೋ, ಅಲ್ಲಿಗೆ ನಾನು ಬರುತ್ತೇನೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಗೃಹಲಕ್ಷಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಘೋಷಿಸಿದೆ. 2 ಕೋಟಿ ಉದ್ಯೋಗದ ಮಾತು ಬಿಡಿ, ದೇಶದಲ್ಲಿ 50 ಲಕ್ಷ ಸರಕಾರಿ ಹುದ್ದೆ ಖಾಲಿ ಇದ್ದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅದನ್ನು ತುಂಬುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಇದೇ ಬೆಳಗಾವಿಯ ನೆಲದಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ. ನನ್ನ ರಿಮೋಟ್ ಕಟ್ರೋಲ್ ಬೇರೆಯವರ ಬಳಿ ಇದೆ ಎಂದಿದ್ದಾರೆ. ಹಾಗಾದರೆ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ? ಎಂದು ಅವರು ಪ್ರಶ್ನಿಸಿದರು.

ಅದಾನಿ ಅವರ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ ಕೇಳಿದರೆ ಅದನ್ನು ಲೋಕಸಭೆಯಲ್ಲಿ ಕಡತದಿಂದ ತೆಗೆದು ಹಾಕುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ, ಜಾತಿವಾದ, ತಾರತಮ್ಯವಿದೆ ಎಂದು ಹೇಳಿದರೆ ಅದು ತಪ್ಪಾ? ರಾಹುಲ್ ಗಾಂಧಿ 46 ದಿನದ ಹಿಂದೆ ಹೇಳಿದ ಮಾತಿನ ಬಗ್ಗೆ ನಿನ್ನೆ ಪೊಲೀಸರು ಸಾಕ್ಷಿ ಕೇಳಿಕೊಂಡು ಅವರ ಮನೆ ಮುಂದೆ ಹೋಗಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ನೀಡಿದರೂ ತನಿಖೆ ನಡೆಸುತ್ತಿಲ್ಲ. 100 ರೂ.ಕಾಮಗಾರಿ ಇದ್ದರೆ 200 ರೂ. ಅಂದಾಜು ನಿಗದಿ ಮಾಡಿ ಕಮಿಷನ್ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಯಾವ ಕಾಲದಲ್ಲೂ ಇμÉ್ಟೂಂದು ಭ್ರಷ್ಟಾಚಾರ, ದುರಾಡಳಿತ ಇರಲಿಲ್ಲ ಎಂದು ಅವರು ಹೇಳಿದರು. 

ಇದು ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ನಾಡು. ಈ ಭಾಗದಲ್ಲಿ ವೀರರು ಶೂರರು ಇದ್ದಾರೆ. ಈ ಜನರನ್ನು ಈಡಿ, ಸಿಬಿಐ ಮಣಿಸುವುದಿಲ್ಲ. ಇವರ ಬೆದರಿಕೆಗೆ ರಾಹುಲ್ ಗಾಂಧಿ ಎಂದಿಗೂ ಹೆದರುವುದಿಲ್ಲ. ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ. ಮೋದಿ ಅವರೇ ನೀವು ನಮ್ಮನ್ನು ಮಣ್ಣಿನಲ್ಲಿ ಹೂತು ಹಾಕಲು ಪ್ರಯತ್ನಿಸಿ. ನಾವು ಬೀಜವಾಗಿದ್ದು, ಪದೇ ಪದೆ ಹುಟ್ಟಿಬರುತ್ತೇವೆ ಎಂದು ಅವರು ತಿರುಗೇಟು ನೀಡಿದರು.

ಒಂದು ಕಾಲದಲ್ಲಿ ಬೆಳಗಾವಿ ಕಾಂಗ್ರೆಸ್‍ಗೆ ಶಕ್ತಿ ತುಂಬಿದ್ದ ಜಿಲ್ಲೆ. ಇಲ್ಲಿ ನಾವು 15-16 ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದೇವು. ಇಂದು ಇಲ್ಲಿ ಸೇರಿರುವ ಜನರು, ಮುಖಂಡರ ಒಗ್ಗಟ್ಟು ನೋಡಿದರೆ ಮುಂಬರುವ ಚುನಾವಣೆಯಲ್ಲಿ 18ಕ್ಕೆ 18 ಸ್ಥಾನಗಳಲ್ಲೂ ಗೆಲ್ಲಿಸುತ್ತೀರಿ ಎಂದು ನಂಬುತ್ತೇನೆ. ಈ ಬಾರಿ ವಾತಾವರಣವೂ ಅದಕ್ಕೆ ಪೂರಕವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಎಐಸಿಸಿ ಅಧ್ಯಕ್ಷನಾದ ನಂತರ ಮೊದಲ ಬಾರಿಗೆ ಬೆಳಗಾವಿಯ ಪವಿತ್ರ ಭೂಮಿಯ ಮೇಲೆ ಕಾಲಿಟ್ಟಿದ್ದೇನೆ. ಮಹಾತ್ಮಾ ಗಾಂಧೀಜಿ ಅವರು ಇದೇ ನೆಲದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ತಾವೆಲ್ಲರೂ ಸೇರಿ ಈಗ ನನ್ನನ್ನು ಅದೇ ಸ್ಥಾನದಲ್ಲಿ ಕೂರಿಸಿದ್ದೀರಿ, ಅದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Similar News