ದರ್ಶನ್ ಧ್ರುವ ನಾರಾಯಣ್‍ಗೆ ಬೆಂಬಲ: ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಎಚ್.ಸಿ.ಮಹದೇವಪ್ಪ

''ಮಾನವೀಯತೆ ಮೊದಲು ರಾಜಕಾರಣ ನಂತರ''

Update: 2023-03-20 13:06 GMT

ಬೆಂಗಳೂರು, ಮಾ. 20: ‘ನಂಜನಗೂಡು ಕ್ಷೇತ್ರದ ಟಿಕೆಟ್ ವಿಷಯದಲ್ಲಿ ನಾನು ನನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಮಾನವೀಯತೆ ಮೊದಲು ರಾಜಕಾರಣ ನಂತರ’ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಯಾರೂ ಗೊಂದಲ ಸೃಷ್ಟಿ ಮಾಡದೇ ಸಮಚಿತ್ತತೆಯಿಂದ ವರ್ತಿಸಬೇಕೆಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನಂಜನಗೂಡು ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ನಮ್ಮ ಬೆಂಬಲಿಗರು ಟಿಕೆಟ್ ವಿಷಯವನ್ನು ಮರು ಪರಿಶೀಲಿಸಿ ಮಹದೇವಪ್ಪನವರಿಗೆ ಟಿಕೆಟ್ ನೀಡಬೇಕೆಂದು ಪತ್ರಿಕಾಗೋಷ್ಠಿಯನ್ನು ನಡೆಸಿರುವುದು ನನ್ನ ಗಮನಕ್ಕೆ ಬಂದಿರುತ್ತದೆ’ ಎಂದು ತಿಳಿಸಿದ್ದಾರೆ.

‘ರಾಜಕೀಯದ ಆಚೆಗೂ ಮಾನವೀಯತೆ ಎಂಬುದು ಅತಿ ಮುಖ್ಯವಾದ ಸಂಗತಿಯಾಗಿರುವ ಕಾರಣ ಧ್ರುವನಾರಾಯಣ್ ಅವರ ಅಗಲಿಕೆಯ ಈ ಸಂದರ್ಭದಲ್ಲಿ ರಾಜಕೀಯಕ್ಕಿಂತಲೂ ಮಾನವೀಯತೆ ಮುಖ್ಯವೆಂದು ನಂಜನಗೂಡು ಕ್ಷೇತ್ರದಲ್ಲಿ ಅವರ ಪುತ್ರ ದರ್ಶನ್ ಅವರನ್ನು ಬೆಂಬಲಿಸಿರುತ್ತೇನೆ’ ಎಂದು ಮಹದೇವಪ್ಪ ಸ್ಪಷ್ಟಣೆ ನೀಡಿದ್ದಾರೆ.

Similar News