ಕಲಬುರಗಿ: ಹೆದ್ದಾರಿ ಮೇಲೆ ಪೊಲೀಸ್ ಪೇದೆ ಮೃತದೇಹ ಪತ್ತೆ

Update: 2023-03-20 14:06 GMT

ಕಲಬುರಗಿ: ಪೊಲೀಸ್ ಪೇದೆಯೊಬ್ಬರ ಮೃತದೇಹ ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಸೋಮವಾರ ಬೆಳಗಿನ ಜಾವ ಪತ್ತೆಯಾಗಿರುವುದು ವರದಿಯಾಗಿದೆ. 

ಚಿತ್ತಾಪುರ ತಾಲೂಕಿನ ವಾಡಿ ನಗರ ಪೊಲೀಸ್ ಠಾಣೆಯ ಪೇದೆ ಕರಿಯಪ್ಪ (37)  ಮೃತ ಪೊಲೀಸ್ ಪೇದೆ ಎಂದು ತಿಳಿದು ಬಂದಿದೆ. 

ರವಿವಾರ ಯಾದಗಿರಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ನಾಲವಾರ ಚಕ್ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸಿದ್ದ ಪೇದೆ ಕರಿಯಪ್ಪ, ರಾತ್ರಿ 8:00 ಗಂಟೆಗೆ ಕರ್ತವ್ಯ ಮುಗಿಸಿ ಅಪರಿಚಿತ ಕಾರಿನಲ್ಲಿ  ವಾಡಿ ಪೊಲೀಸ್ ಕ್ವಾರ್ಟರ್ಸ್ ನ ಅವರ ಮನೆಗೆ ಬಂದಿದ್ದರು ಎನ್ನಲಾಗಿದ್ದು, ಊಟ ಮಾಡಿ ಮಲಗಿದ್ದರು. ತಡರಾತ್ರಿ ಎದ್ದು ಪುನಃ ನಾಲವಾರ ಚೆಕ್ ಪೋಸ್ಟ್ ಕಡೆಗೆ ಬೈಕ್ ನಲ್ಲಿ ಹೋದವರು ಸೋಮವಾರ ಬೆಳಗ್ಗೆ ಲಾಡ್ಲಾಪುರ ಗ್ರಾಮ ಸಮೀಪದ ಡಿಗ್ಗಿ ತಾಂಡಾ ಹತ್ತಿರದ ಕೂಡು ರಸ್ತೆ ಸಮೀಪ  ಶವವಾಗಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಘಟನಾ ಸ್ಥಳದಲ್ಲಿ ಪೇದೆ ಕರಿಯಪ್ಪ ಬಳಸಿದ ಬೈಕ್ ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಮೃತ ಇಂಡಿ ತಾಲೂಕಿನ ತೆಗ್ಗಳ್ಳಿ ಗ್ರಾಮದ ಕರಿಯಪ್ಪ ಅವರಿಗೆ ಪತ್ನಿ, ಒರ್ವ ಪುತ್ರಿ, ಒರ್ವ ಪುತ್ರ ಇದ್ದಾರೆ. ಡಿವೈಎಸ್ಪಿ, ಸಿಪಿಐ, ಪಿಎಸ್ಐ ಸುದರ್ಶನ್ ರೆಡ್ಡಿ ಭೇಟಿ ನೀಡಿದ್ದಾರೆ.

Similar News