ನೆರೆಹೊರೆಯವರ ಹೇಳಿಕೆಗಳನ್ನೇ ಸಾಕ್ಷ್ಯಗಳನ್ನಾಗಿ ಪರಿಗಣಿಸಿ ಶಿಕ್ಷೆ ನೀಡಲಾಗದು: ಹೈಕೋರ್ಟ್

Update: 2023-03-20 14:16 GMT

ಬೆಂಗಳೂರು, ಮಾ.20: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಕಾರಣದಿಂದ ವ್ಯಕ್ತಿಯನ್ನು ಕೊಂದಿದ್ದಾರೆ ಎಂಬುದಾಗಿ ನೆರೆಹೊರೆಯವರು ನೀಡಿದ ಹೇಳಿಕೆಯನ್ನೇ ಸಾಕ್ಷ್ಯಯನ್ನಾಗಿ ಪರಿಗಣಿಸಿ ವ್ಯಕ್ತಿಯೊಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಆನಂದ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಅರ್ಜಿದಾರರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದೆ.

ಘಟನೆ ದಿನ ಆರೋಪಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಘಟನೆಗೆ ಆರೋಪಿಯೇ ಕಾರಣ ಎಂಬುದು ತಿಳಿಯಲು ಸಾಧ್ಯವಿಲ್ಲ. ಅಲ್ಲದೆ, ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ತಪ್ಪಾಗಿದೆ. ನ್ಯಾಯಾಧೀಶರ ಈ ಎಲ್ಲ ಅಂಶಗಳನ್ನು ಸಾಕ್ಷ್ಯಾಧಾರಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿಲ್ಲ. ಹೀಗಾಗಿ ಆರೋಪಿಯನ್ನು ಆರೋಪ ಮುಕ್ತರನ್ನಾಗಿ ಮಾಡಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣವೇನು?: 2016ರಲ್ಲಿ ಬಾಗಲಕೋಟೆಯ ಹುನ್ಡೇಕರ್ ಗಲ್ಲಿಯಲ್ಲಿ ವ್ಯಕ್ತಿಯೊಬ್ಬರ ಕೊಲೆ ನಡೆದಿತ್ತು. ಈ ಘಟನೆ ಅರ್ಜಿದಾರರ ಮನೆಯಲ್ಲಿಯೇ ನಡೆದಿತ್ತು. ಜೊತೆಗೆ, ಈ ಸಂದರ್ಭದಲ್ಲಿ ಮೃತನು ಅರ್ಜಿದಾರರ ಮನೆಯಲ್ಲಿ ಮಲಗಿದ್ದನು ಮತ್ತು ಮೃತ ವ್ಯಕ್ತಿ ಅರ್ಜಿದಾರನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ನೆರೆಹೊರೆಯರು ಶಂಕೆ ವ್ಯಕ್ತಪಡಿಸಿದ್ದರು. 

ಇದನ್ನೇ ನಂಬಿದ ವ್ಯಕ್ತಿ ಆತನ ತಲೆಯ ಮೇಲೆ ರುಬ್ಬುವ ಕಲ್ಲುನ್ನು ಎತ್ತಿ ಹಾಕಿ ಸಾಯಿಸಿದ್ದನು. ಈ ಘಟನೆ ನಡೆದ ಸಂದರ್ಭದಲ್ಲಿ ಆರೋಪಿಯ ಪತ್ನಿ ಸ್ನಾನಗೃಹದಲ್ಲಿದ್ದರು ಎಂಬುದಾಗಿ ತನಿಖಾಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗೆ 2021ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಘಟನೆ ನಡೆದ ಸಂದರ್ಭದಲ್ಲಿ ಅರ್ಜಿದಾರರು ಮನೆಯಲ್ಲಿ ಇರಲಿಲ್ಲ. ಮೃತ ವ್ಯಕ್ತಿ ಬೀದಿಯಲ್ಲಿ ನಡೆದ ಜಗಳದಲ್ಲಿ ಗಾಯಗೊಂಡಿದ್ದರು. ಬಳಿಕ ಅರ್ಜಿದಾರರ ಮನೆಗೆ ಬಂದು ಮಲಗಿದ್ದರು. ಈ ವೇಳೆ ರಕ್ತಸ್ರಾವ ಹೆಚ್ಚಾಗಿ ಮೃತಪಟ್ಟಿದ್ದರು ಎಂದು ವಿವರಿಸಿದ್ದರು.

Similar News