ಕೋರ್ಟ್ ವರದಿಗಾರಿಕೆಗೆ ಅನುಮತಿ ಕಡ್ಡಾಯ: ಕಾನೂನು ಜಾರಿ

ನಿಯಮ ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆಯಡಿ ಕ್ರಮದ ಎಚ್ಚರಿಕೆ

Update: 2023-03-20 15:08 GMT

ಬೆಂಗಳೂರು, ಮಾ.20: ನ್ಯಾಯಾಲಯಗಳ ಕಾರ್ಯಕಲಾಪ ಹಾಗೂ ಆದೇಶಗಳನ್ನು ತಮಗೆ ಇಷ್ಟ ಬಂದಂತೆ ವರದಿ ಮಾಡುವ ಕೆಲವು ಸುದ್ದಿ ಮಾಧ್ಯಮಗಳ ಚಾಳಿಗೆ ಕಡಿವಾಣ ಹಾಕಲು ಮುಂದಾಗಿರುವ ಹೈಕೋರ್ಟ್ ನ್ಯಾಯಾಲಯ ವರದಿಗಾರಿಕೆಗೆ ಸಂಬಂಧಿಸಿದಂತೆ ಕಾನೂನು ಜಾರಿ ಮಾಡಿದೆ. 

ಈ ಕುರಿತಂತೆ ಹೈಕೋರ್ಟ್ ರಿಜಿಸ್ಟಾರ್ ಜನರಲ್ ಕೆ.ಎಸ್.ಭರತ್‌ಕುಮಾರ್ ಅವರು ನ್ಯಾಯಾಲಯದ ವರದಿ ಮಾಡುವ ಪತ್ರಕರ್ತರು ಅನುಸರಿಸಬೇಕಾದ ನಿಯಮಗಳನ್ನು ಒಳಗೊಂಡ ಅಧಿಸೂಚನೆಯನ್ನು ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. 

ಅದರಂತೆ ಕೋರ್ಟ್ ವರದಿ ಮಾಡುವ ಪತ್ರಕರ್ತರು ‘ಕರ್ನಾಟಕದ ಉಚ್ಚ ನ್ಯಾಯಾಲಯ(ಪ್ರಕ್ರಿಯೆಗಳು, ತೀರ್ಪು/ಆದೇಶಗಳನ್ನು ವರದಿ ಮಾಡಲು ಪತ್ರಕರ್ತರಿಗೆ ಮಾನ್ಯತೆ ಮಂಜೂರು) ನಿಯಮಗಳು, 2021’ನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. 

ನೂತನ ನಿಯಮಗಳ ಪ್ರಕಾರ ಹೈಕೋರ್ಟ್ ಕಲಾಪಗಳ ಮತ್ತು ತೀರ್ಪುಗಳ ಕುರಿತಂತೆ ವರದಿ ಮಾಡಲು ಪತ್ರಕರ್ತರು ಹೈಕೋರ್ಟ್ ನಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಅನುಮತಿಯನ್ನು ಸರಕಾರದಿಂದ ಮಾನ್ಯತೆ ಪಡೆದ ಅಧಿಕೃತ ಸುದ್ದಿ ಮಾಧ್ಯಮ ಸಂಸ್ಥೆಗಳ ವರದಿಗಾರರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಹೈಕೋರ್ಟ್ನಿಂದ ಗುರುತಿನ ಚೀಟಿ ಪಡೆಯಬೇಕಿದೆ.

ಐಡಿ ಕಾರ್ಡ್ ಹೊಂದಿರುವ ಪತ್ರಕರ್ತರಷ್ಟೇ ಇನ್ನು ಮುಂದೆ ಕೋರ್ಟ್ ಕಲಾಪ ಮತ್ತು ತೀರ್ಪುಗಳನ್ನು ವರದಿ ಮಾಡಬಹುದಾಗಿದೆ. ಉಳಿದಂತೆ ಐಡಿ ಪಡೆಯದೇ ಕೋರ್ಟ್ ಸುದ್ದಿಗಳ ವರದಿಗಾರಿಕೆ ಮಾಡುವುದು ನಿಯಮ ಬಾಹಿರವಾಗಲಿದೆ. ತಪ್ಪು/ತಿರುಚಿದ ವರದಿ ಮಾಡಿದರೆ ನ್ಯಾಯಾಂಗ ನಿಂದನೆ ಅಡಿ ಕಾನೂನು ಕ್ರಮ ಜರುಗಿಸಲಾಗುತ್ತದೆ.

Similar News