5ನೇ, 8ನೇ ತರಗತಿ ಮಂಡಳಿ ಪರೀಕ್ಷೆ: ಮಾ. 27ರಂದು ವಿಚಾರಣೆ ನಡೆಸಲು ಸುಪ್ರೀಂ ಒಪ್ಪಿಗೆ

Update: 2023-03-20 16:03 GMT

ಹೊಸದಿಲ್ಲಿ, ಮಾ. 20: ಕರ್ನಾಟಕದ 5ನೇ ಹಾಗೂ 8ನೇ ತರಗತಿ ಮಂಡಳಿ ಪರೀಕ್ಷೆಗೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿದ ಅರ್ಜಿಯನ್ನು ಮಾ. 27ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. 

ಪರೀಕ್ಷೆ ಮಾ. 27ರಿಂದ ಆರಂಭವಾಗಲಿದೆ. ಆದುದರಿಂದ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪರ್ದಿವಾಲ ಅವರನ್ನು ಒಳಗೊಂಡ ಪೀಠ , ‘‘ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ರಾಜ್ಯಕ್ಕೆ ಯಾವುದು ಉತ್ತಮ ಎಂಬುದು ಉಚ್ಚ ನ್ಯಾಯಾಲಯಕ್ಕೆ ಗೊತ್ತಿದೆ. ಆದರೆ, ಮಾ. 27ರಂದು ಅರ್ಜಿಯ ವಿಚಾರಣೆ ನಡೆಸಲಾಗುವುದು’’ ಎಂದು ಹೇಳಿತು. 

ಪ್ರಸಕ್ತ ಶೈಕ್ಷಣಿಕ ವರ್ಷದಿಂದ 5 ಹಾಗೂ 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಇದನ್ನು ವಿರೋಧಿಸಿ ಪೋಷಕರ ಸಂಘಟನೆ ನ್ಯಾಯಾಲಯದ ಮೊರೆ ಹೋಗಿತ್ತು. ಪೋಷಕರ ಅರ್ಜಿ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠ 5 ಹಾಗೂ 8ನೇ ತರಗತಿಯ ಮಕ್ಕಳಿಗೆ ಮಂಡಳಿ ಪರೀಕ್ಷೆ ನಡೆಸುವ ಬಗ್ಗೆ ಸರಕಾರ ಹೊರಡಿಸಿದ ಸುತ್ತೋಲೆಯನ್ನು ರದ್ದುಪಡಿಸಿತ್ತು. 

ಇದರ ವಿರುದ್ಧ ಶಿಕ್ಷಣ ಇಲಾಖೆ ಮೇಲ್ಮನವಿ ಸಲ್ಲಿಸಿತ್ತು. ಅನಂತರ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿ ಮಂಡಳಿ ಪರೀಕ್ಷೆ ನಡೆಸಲು ಅನುಮತಿ ನೀಡಿ ಹೈಕೋರ್ಟ್ ತೀರ್ಪು ನೀಡಿತ್ತು. ಹೈಕೋರ್ಟ್ ಅನುಮತಿ ನೀಡಿದ ಕಾರಣ ಮಾರ್ಚ್ 27ರಿಂದ ಎಪ್ರಿಲ್ 1ರ ವರೆಗೆ ಬೋರ್ಡ್ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿತ್ತು. 

ಅನಂತರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅನುದಾನರಹಿತ ಶಾಲೆಗಳ ಸಂಘಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು.

Similar News