ಸರಕಾರಿ ಆದೇಶಕ್ಕೆ ಕಿಮ್ಮತ್ತು ನೀಡದ ಅಧಿಕಾರಿಗಳು, ಆಡಳಿತ ಯಂತ್ರಕ್ಕೆ ಹಿನ್ನಡೆ

Update: 2023-03-21 04:34 GMT

ಬೆಂಗಳೂರು, ಮಾ.21: ಸರಕಾರಿ ಇಲಾಖೆಗಳಲ್ಲಿ ಬೇರೆ ಬೇರೆ ಕಾರಣಗಳ ನೆಪವೊಡ್ಡಿ ಕರ್ತವ್ಯಕ್ಕೆ ಹಾಜರಾಗದೆ ಅಧಿಕಾರಿಗಳು ಕಳ್ಳಾಟವಾಡುತ್ತಿರುವುದು ಒಂದಡೆಯಾದರೆ, ಕಚೇರಿಗಳಿಗೆ ಸಮರ್ಪಕವಾಗಿ ಬಾರದಿರುವುದು ಆಡಳಿತ ಕಾರ್ಯ ಚಟುವಟಿಕೆಗಳಿಗೆ ಹಿನ್ನೆಡೆಯಾಗುತ್ತಿರುವುದು ಮತ್ತೊಂದಡೆಯಾಗಿದೆ. ಇದರ ನಡುವೆ ಅಧಿಕಾರಿಗಳ ಸಿಗದಿರುವ ಕಾರಣಗಳಿಂದ ಸರಕಾರಿ ಸೌಲಭ್ಯ ಪಡೆಯುವ ಸಲುವಾಗಿ ಪ್ರತಿ ನಿತ್ಯ ಕಚೇರಿಗಳಿಗೆ ಅಲೆಯುತ್ತಿರುವ ಸಾರ್ವಜನಿಕರಿಗೂ ತೀವ್ರ ತೊಂದರೆಯಾಗುತ್ತಿರುವ ಮಾತುಗಳು ಕೇಳಿಬಂದಿವೆ.

ಪ್ರತಿ ನಿತ್ಯ ಬೆಳಗ್ಗೆ 10 ಗಂಟೆಗೆ ಕಡ್ಡಾಯವಾಗಿ ಸರಕಾರಿ ಕಚೇರಿಗಳಲ್ಲಿ ಹಾಜರಾಗಬೇಕೆಂದು ರಾಜ್ಯ ಸರಕಾರ ಕಳೆದ ವರ್ಷ ಜುಲೈನಲ್ಲಿ ಸುತ್ತೋಲೆ ಹೊರಡಿಸಿದ್ದರೂ ಶೇ.85 ಸಿಬ್ಬಂದಿ ಈ ನಿಯಮ ಪಾಲಿಸುತ್ತಿಲ್ಲ ಎನ್ನುವ ದೂರು ಕೇಳಿಬಂದಿವೆ. ಅದರಲ್ಲೂ ವಿಧಾನಸೌಧ ಮತ್ತು ವಿಕಾಸೌಧದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಂತೂ ಸರಿಯಾಗಿ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ. ತಡವಾಗಿ ಬರುವ ಅಧಿಕಾರಿಗಳು ಸಂಜೆ ಮಾತ್ರ ಬೇಗ ಮನೆಗೆ ತೆರಳುತ್ತಾರೆ.ಅಲ್ಲದೆ, ಎಷ್ಟೇ ಕಚೇರಿಗಳು ಸರಿಯಾಗಿ ಸಮಯಕ್ಕೆ ಬಾಗಿಲು ತೆರೆಯೋದಿಲ್ಲ. ಸಾರ್ವಜನಿಕರ ಜತೆ ನಿರಂತರವಾಗಿರುವ ಸಂಬಂಧ ಇಟ್ಟುಕೊಂಡಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ನಗರಾಭಿವೃದ್ಧಿ, ಆರೋಗ್ಯ, ಅಹಾರ, ಬಿಬಿಎಂಪಿ, ಅಬಕಾರಿ ಸೇರಿ ಇತರ ಇಲಾಖೆಗಳ ಕಚೇರಿಗಳು ಸಮರ್ಪಕವಾಗಿ ತೆರೆಯುತ್ತಿಲ್ಲ.

ಇನ್ನೂ, ಯಾವುದೇ ಸರಕಾರಗಳು ಬಂದರೂ ಅಧಿಕಾರಿಗಳಿಗೆ ಚಾಟಿ ಬೀಸಿ ಆಡಳಿತ ಯಂತ್ರಕ್ಕೆ ವೇಗ ನೀಡುವುದು ಮಾಮೂಲಿ. ಆರಂಭದಲ್ಲಿ ವೇಗವಾಗಿ ಕೆಲಸ ಮಾಡುವ ಅಧಿಕಾರಿಗಳು ಮತ್ತೆ ತಮ್ಮ ಚಾಳಿಯನ್ನು ಮುಂದುವರಿಸುತ್ತಾರೆ. ಇತ್ತೀಚಿಗಂತೂ ಅಬಕಾರಿ, ಪೆÇಲೀಸ್, ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಸಹಕಾರ, ಆರೋಗ್ಯ, ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‍ಎಂಎಸ್‍ಸಿಎಲ್) ಹಾಗೂ ಆಹಾರ ಮತ್ತು ನಾಗರಿಕ ಸಬರಾಜು ನಿಗಮ ಸೇರಿ ಸರ್ಕಾರದ ಇತರ ಇಲಾಖೆಗಳಲ್ಲಿ ಅಧಿಕಾರಿಗಳ ಕಳ್ಳಾಟ ಹೆಚ್ಚಾಗಿದೆ ಎನ್ನುವುದು ಸಾರ್ವಜನಿಕರ ಮಾತಾಗಿದೆ.

ಲಾಭದಾಯಕ ಹುದ್ದೆ ಲಾಬಿ: ಸರಕಾರದ ಎಲ್ಲ ಇಲಾಖೆಗಳಂತೂ ಲಾಭದಾಯಕ ಹುದ್ದೆಗಳಿಗೆ ಲಾಬಿ ಜೋರಾಗಿದೆ. ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಹುದ್ದೆಯ ಅಧಿಕಾರಿಗಳು ಲಾಭದಾಯಕ ಹುದ್ದೆಗಳು ಸಿಕ್ಕರೆ ಮಾತ್ರ ಕರ್ತವ್ಯ ನಿರ್ವಹಿಸುತ್ತಾರೆ. ಇಲ್ಲದಿದ್ದರೆ, ಬೇರೆ ಯಾವುದೇ ಹುದ್ದೆಗಳು ಲಭಿಸಿದರೂ ನೆಪ ಮಾತ್ರಕ್ಕೆ ಕಾರ್ಯನಿರ್ವಹಿಸುತ್ತಾರೆ. 

ಮತ್ತೊಂದೆಡೆ ಭ್ರಷ್ಟಾಚಾರ,ಅಕ್ರಮ ಹಣ ಪಡೆಯುತ್ತಿರುವ ವೇಳೆ ಟ್ರ್ಯಾಪ್ ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣಗಳಲ್ಲಿ ದಾಳಿಗೆ ಒಳಗಾಗಿ ಅಮಾನತಾದ ನೂರಾರು ಅಧಿಕಾರಿಗಳು ಮತ್ತೆ ಲಾಭದಾಯಕ ಹುದ್ದೆಯಲ್ಲಿ ಕುಳಿತು ಕಾರ್ಯಾಭಾರ ಮಾಡುತ್ತಿರುವ ಪ್ರಕರಣಗಳು ಹೆಚ್ಚಿವೆ. ಆರೋಪಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಾಭದಾಯಕ ಹುದ್ದೆಗಳಿಗೆ ನೇಮಿಸಬಾರದೆಂಬ ಸರಕಾರದ ನಿಯಮವಿದ್ದರೂ ಇದನ್ನು ಗಾಳಿಗೆ ತೂರಿ ಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಹಿಂದೆ ಸೇವೆ ಸಲ್ಲಿಸಿದ್ದ ಹುದ್ದೆಗೆ ಅಥವಾ ಇತರ ಲಾಭದಾಯಕ ಹುದ್ದೆಗಳಲ್ಲಿ ಕುಳಿತು ಕಾರ್ಯಭಾರ ನಡೆಸಿ ಇನ್ನಷ್ಟು ಭ್ರμÁ್ಟ್ರಚಾರದಲ್ಲಿ ತೊಡಗಿದ್ದಾರೆ. 

ಪ್ರಭಾರ ಹುದ್ದೆ, ಸಭೆಗಳಿಗೆ ಮೀಸಲು..! 

ಸರಕಾರಿ ಇಲಾಖೆಗಳಲ್ಲಿ ಆಯುಕ್ತ ಹಾಗೂ ಜಿಲ್ಲಾಧಿಕಾರಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿಗಳು ಹೆಚ್ಚಾಗಿ ಪ್ರಭಾರ ಹುದ್ದೆಗಳಿಗೆ ಲಾಬಿ ನಡೆಸುತ್ತಿದ್ದಾರೆ. ಪ್ರತಿ ಐಎಎಸ್ ಅಧಿಕಾರಿಗೆ ಯಾವುದಾದರೂ ಇಲಾಖೆಗಳಲ್ಲಿ ಒಂದು ಅಥವಾ ಎರಡು ಪ್ರಭಾರ ಹುದ್ದೆಗಳು ಇದ್ದೇ ಇರುತ್ತದೆ. ಸಭೆ ಮತ್ತು ಮೀಟಿಂಗ್ ಇದೆಯೆಂದು ನೆಪ ಮಾಡಿಕೊಂಡು ಎರಡು ಕಡೆಗಳಲ್ಲಿ ಸಮರ್ಪಕವಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಅಲ್ಲದೆ, ಪ್ರಭಾರ ಹುದ್ದೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಂತೂ ಇಲಾಖೆಗಳಿಗೆ ಬರೋದಿಲ್ಲ. ವಾರಕ್ಕೆ ಒಂದು ಅಥವಾ ಎರಡು ದಿನಗಳಲ್ಲಿ ನಾಲ್ಕೈದು ಗಂಟೆ ಕೆಲಸ ಮಾಡಿ ಹೊರ ಹೋಗುತ್ತಾರೆ. ಇದರಿಂದ ನೂರಾರು ಕಡತಗಳ ವಿಲೇವಾರಿಯಾಗದೆ ಬಾಕಿ ಉಳಿಯುತ್ತಿವೆ.

Similar News