ಬಿಜೆಪಿಯ ಮಧ್ಯೆ ನಾನು ಉರಿಗೌಡನೂ ಅಲ್ಲ, ನಂಜೇಗೌಡನೂ ಅಲ್ಲ: MLC ಆಯನೂರು ಮಂಜುನಾಥ್

''ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂದು ಈಶ್ವರಪ್ಪಗೆ ಮಾತ್ರ ಹೇಳಿದ್ದಲ್ಲ...''

Update: 2023-03-21 10:42 GMT

ಶಿವಮೊಗ್ಗ: ''ಈಶ್ವರಪ್ಪ ಮತ್ತು ಬಿಜೆಪಿಯ ನಡುವೆ ನಾನು ಉರಿಗೌಡನೂ ಅಲ್ಲ. ನಂಜೇಗೌಡನೂ ಅಲ್ಲ. ಬದಲಿಗೆ ನಾನು ಮಂಜುನಾಥ್'' ಎಂದು‌ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ. 

ಶಿವಮೊಗ್ಗ ನಗರ ಹಲವೆಡೆ ಆಯನೂರು ಮಂಜುನಾಥ್ ಹೆಸರಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಅದರಲ್ಲಿ 'ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ. ಮುರಿದ ಮನಸ್ಸುಗಳ ಬೆಸುಗೆಯಾಗಲಿ. ಶಿವಮೊಗ್ಗದಲ್ಲಿ ಶಾಂತಿ–ಸೌಹಾರ್ದತೆ ನೆಲೆಸಲಿ' ಎಂದು ಉಲ್ಲೇಖಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಆಯನೂರು ಮಂಜುನಾಥ್ ಅವರು ಸ್ವಪಕ್ಷೀಯರ ವೈಫಲ್ಯ ಎತ್ತಿ ತೋರಿಸಿದ್ದಾರೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ. 

ಈ ಕುರಿತಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಆಯನೂರು ಮಂಜುನಾಥ್ ಮೇಲಿನಂತೆ ಪ್ರತಿಕ್ರಿಯಿಸಿದರು.

''ಈಶ್ವರಪ್ಪ ಮತ್ತು ಬಿಜೆಪಿಯ ನಡುವೆ ನಾನು ಉರಿಗೌಡನೂ ಅಲ್ಲ. ನಂಜೇಗೌಡನೂ ಅಲ್ಲ. ಬದಲಿಗೆ ನಾನು ಆಯನೂರು ಮಂಜುನಾಥ್. ಯಾರ ಬಾಯಲ್ಲಿ ನಂಜು ಬರುತ್ತದೆಯೋ ಅವರನ್ನು ನಂಜೇಗೌಡ ಅನ್ನಿ. ಯಾರು ನನ್ನ ಮಾತು ಕೇಳಿ ಉರಿಬೀಳುತ್ತಾರೊ ಅವರಿಗೆ ಉರಿಗೌಡ ಅನ್ನಿ'' ಎಂದು ಹೇಳಿದರು.

''ಯಾವುದೋ ಧರ್ಮದ ದೇವರು ಕಿವುಡನೇ, ಕುರುಡನೇ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಮಾತಾಡುವುದು ಬೇಡ. ಅವರೊಬ್ಬ ಪ್ರಬುದ್ಧ ರಾಜಕಾರಣಿ. ಜವಾಬ್ದಾರಿಯಿಂದ ಮಾತಾಡಬೇಕು ಎಂಬ ನಿರೀಕ್ಷೆ ನನಗೂ ಇದೆ'' ಎಂದು ಹೇಳಿದರು.

''ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂದು ಬಹುವಚನ ಬಳಸಲಾಗಿದೆ. ಹೀಗಾಗಿ ಆ ಮಾತನ್ನು ಈಶ್ವರಪ್ಪ ಒಬ್ಬರಿಗೇ ಅನ್ವಯಿಸುವುದು ಸರಿಯಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾರ್ಥನೆ ಮಾಡಲು ಮುಂದಾಗುವವರಿಗೂ ಅದು ಅನ್ವಯಿಸುತ್ತದೆ'' ಎಂದು ತಿಳಿಸಿದರು. 

ಇದನ್ನೂ ಓದಿ'ಹರಕುಬಾಯಿಗಳಿಗೆ ಹೊಲಿಗೆ ಬೀಳಲಿ': ಬಿಜೆಪಿ MLC ಆಯನೂರು ಮಂಜುನಾಥ್ ಹೆಸರಿನಲ್ಲಿ ಫ್ಲೆಕ್ಸ್, ಪೋಸ್ಟರ್

Similar News